‘ಮನಸೋ ಇಚ್ಛೆ ವಿದೇಶಿ ಪ್ರವಾಸಕ್ಕೆ ಅವಕಾಶವಿಲ್ಲ’

Update: 2018-09-05 17:44 GMT

ಬೆಂಗಳೂರು, ಸೆ. 5: ರಾಜ್ಯ ಸರಕಾರದ ಯಾವುದೇ ಅಧಿಕಾರಿಗಳು ಮನಸೋ ಇಚ್ಛೆ ವಿದೇಶ ಪ್ರವಾಸ ಮಾಡುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಝ್ ಸುತ್ತೋಲೆ ಹೊರಡಿಸಿದ್ದಾರೆ.

ವಿದೇಶ ಪ್ರವಾಸ ಕೈಗೊಳ್ಳುವ ಅಧಿಕಾರಿಗಳು ರಾಜ್ಯ ಸರಕಾರ ವಿಧಿಸುವ ಹಲವು ನಿಯಮ ನಿಬಂಧನೆಗಳನ್ನು ಪೂರೈಸಬೇಕಾಗುತ್ತದೆ. ವಿದೇಶ ಪ್ರವಾಸಕ್ಕೆಂದು ಯಾವುದೇ ಕಾರಣಕ್ಕೂ ನೇರವಾಗಿ ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವಂತಿಲ್ಲ. ಬದಲಿಗೆ, ಸಂಬಂಧಪಟ್ಟ ಇಲಾಖಾ ಸಚಿವರಿಗೆ ಅರ್ಜಿ ಸಲ್ಲಿಸಿ, ಸಕಾರಣಗಳನ್ನು ನೀಡಬೇಕು. ಸಚಿವರಿಂದ ಅನುಮತಿ ಸಿಕ್ಕಿದ ನಂತರವೂ ರಾಜ್ಯ ಸರಕಾರದ ಸಂಬಂಧಪಟ್ಟ ಹಾಗೂ ಕೇಂದ್ರದ ವಿದೇಶಾಂಗ ಮತ್ತು ಗೃಹ ಇಲಾಖೆಗಳ ಒಪ್ಪಿಗೆ ಪಡೆಯಬೇಕು ಎಂದು ನಿರ್ಬಂಧಗಳನ್ನು ಹೇರಲಾಗಿದೆ.

ಅಧಿಕಾರಿಗಳ ವಿದೇಶ ಪ್ರವಾಸದ ತಂಡದಲ್ಲಿ ಎಷ್ಟು ಸದಸ್ಯರಿರುತ್ತಾರೆ. ಅವರ ಪ್ರವಾಸದಿಂದ ರಾಜ್ಯಕ್ಕೆ ಆಗುವ ಅನುಕೂಲಗಳೇನು ಇತ್ಯಾದಿ ವಿವರಗಳನ್ನು ಒದಗಿಸಬೇಕು. ವಿದೇಶದಲ್ಲಿ ವಿಶೇಷ ಆತಿಥ್ಯ ಪಡೆಯುವುದಾದರೆ ಕೇಂದ್ರ ವಿದೇಶಾಂಗ ಹಾಗೂ ಗೃಹ ಇಲಾಖೆಗಳ ಪೂರ್ವಾನುಮತಿ ಪಡೆಯಬೇಕೆಂಬುದು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News