ಸೆ.25 ರಂದು ಪಡಿತರ ವಿತರಕರ ದಿಲ್ಲಿ ಚಲೋ

Update: 2018-09-05 17:56 GMT

ಬೆಂಗಳೂರು, ಸೆ.5: ಪಡಿತರ ಚೀಟಿದಾರರಿಗೆ ನೇರ ಹಣ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಸೆ.25 ರಂದು ದಿಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಕೇಂದ್ರ ಸರಕಾರವು ಚಂಡೀಘಡ ಹಾಗೂ ಪಾಂಡಿಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಪಡಿತರ ಕಾರ್ಡುದಾರರಿಗೆ ನೇರ ಹಣಕಾಸು ವರ್ಗಾವಣೆ ಮಾಡುವ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳನ್ನು ಆಧರಿಸಿ ಜೀವನ ನಡೆಸುತ್ತಿರುವ ವಿತರಕರಿಗೆ ಅನ್ಯಾಯವಾಗುತ್ತದೆ. ಅಲ್ಲದೆ, ಸಾವಿರಾರು ಬಡವರ ಅನ್ನ ಕಸಿದಂತಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಕಳೆದ ವರ್ಷ ದಿಲ್ಲಿಯಲ್ಲಿ ಬೃಹತ್ ಹೋರಾಟ ನಡೆಸಲಾಗಿತ್ತು. ಅನಂತರ ಹಲವಾರು ಬಾರಿ ಸರಕಾರಕ್ಕೆ ಮನವಿ, ಪ್ರತಿಭಟನೆಗಳ ಮೂಲಕ ಆಗ್ರಹಪಡಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದಾಗಿ, ಮತ್ತೊಂದು ಬಾರಿ ಸರಕಾರವನ್ನು ಒತ್ತಾಯಿಸುವ ಸಲುವಾಗಿ ದಿಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಪಡಿತರ ವಿತರಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬೇಡಿಕೆಗಳು: ಕಡ್ಡಾಯವಾಗಿ ಎಲ್ಲರಿಗೂ ಪಡಿತರ ವಿತರಣೆ ಮಾಡಬೇಕು. ಪಿಡಿಎಸ್ ಮೂಲಕ ಸೀಮೆಎಣ್ಣೆ ವಿತರಣೆ ಮಾಡಬೇಕು. ಚಂಡೀಘಡ ಹಾಗೂ ಪಾಂಡಿಚೇರಿಯಲ್ಲಿರುವ ನೇರ ಹಣ ವರ್ಗಾವಣೆ ಯೋಜನೆಯನ್ನು ಕೈ ಬಿಡಬೇಕು ಹಾಗೂ ಅಲ್ಲಿಯೂ ಪಿಡಿಎಸ್ ಯೋಜನೆ ಜಾರಿ ಮಾಡಬೇಕು. ಪ್ರತಿ ಕ್ವಿಂಟಾಲ್‌ಗೆ 250 ರೂ.ಗಳಷ್ಟು ಕಮೀಷನ್ ನೀಡಬೇಕು. ನ್ಯಾಯಬೆಲೆ ಅಂಗಡಿ ಮಾಲಕರಿಗೆ ತಿಂಗಳಿಗೆ 30 ಸಾವಿರ ಕಮೀಷನ್ ಖಾಯಂ ಮಾಡಬೇಕು. ದೇಶದಾದ್ಯಂತ ವಿತರಣೆ ಹಾಗೂ ಕಮೀಷನ್ ಒಂದೇ ಮಾದರಿಯಲ್ಲಿರಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News