ಏಶ್ಯನ್ ಗೇಮ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ

Update: 2018-09-05 18:30 GMT

ಹೊಸದಿಲ್ಲಿ, ಸೆ.5: ಇಂಡೋನೇಶ್ಯಾದಲ್ಲಿ ಇತ್ತೀಚೆಗೆ ಕೊನೆಗೊಂಡ 18ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ಭಾರತ ಅಥ್ಲೀಟ್‌ಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ನಿವಾಸದಲ್ಲಿ ಸಂವಹನ ನಡೆಸಿದರು.

ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಏಶ್ಯನ್ ಗೇಮ್ಸ್‌ನಲ್ಲಿ ಗರಿಷ್ಠ ಪದಕಗಳನ್ನು ಜಯಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಥ್ಲೀಟ್‌ಗಳೊಂದಿಗಿನ ಸಂವಹನದ ವೇಳೆ ಪ್ರಧಾನಮಂತ್ರಿ ಅವರು ಕ್ರೀಡಾಪಟುಗಳಿಗೆ ತಮ್ಮ ಪ್ರದರ್ಶನ ಉತ್ತಮಪಡಿಸಲು ತಂತ್ರಜ್ಞಾನ ಬಳಸುವಂತೆ ಸಲಹೆ ನೀಡಿದರು. ವಿಶ್ವದ ಶ್ರೇಷ್ಠ ಅಟಗಾರರ ಜೊತೆಗೆ ತಮ್ಮ ಪ್ರದರ್ಶನವನ್ನು ತಂತ್ರಜ್ಞಾನದ ಮೂಲಕ ವಿಶ್ಲೇಷಣೆ ನಡೆಸಿ ಸ್ವತಹ ಸುಧಾರಣೆಯಾಗುತ್ತಿರಬೇಕೆಂದು ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಸಣ್ಣ ನಗರ, ಗ್ರಾಮೀಣ ಪ್ರದೇಶ ಹಾಗೂ ಬಡ ಕುಟುಂಬದಿಂದ ಬಂದಿರುವ ಯುವ ಪ್ರತಿಭೆಗಳು ದೇಶಕ್ಕಾಗಿ ಪದಕ ಜಯಿಸಿದ್ದನ್ನು ನೋಡಿ ಪ್ರಧಾನಮಂತ್ರಿ ಸಂತೋಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಅಥ್ಲೀಟ್‌ಗಳಿಗೆ ನಿಜವಾದ ಸಾಮರ್ಥ್ಯವಿದ್ದು ಅಂತಹ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಕ್ರೀಡಾಪಟುಗಳು ಪ್ರತಿನಿತ್ಯ ಎದುರಿಸುವ ಸಮಸ್ಯೆಗಳು ಹೊರ ಪ್ರಪಂಚಕ್ಕೆ ಗೊತ್ತಿರುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಭಾರತ ಈ ಬಾರಿಯ ಏಶ್ಯಾಕಪ್‌ನಲ್ಲಿ ಒಟ್ಟು 69 ಪದಕಗಳನ್ನು ಜಯಿಸಿ ಶ್ರೇಷ್ಠ ಸಾಧನೆ ಮಾಡಿದೆ. 2010ರ ಗ್ವಾಂಗ್‌ಝೌ ಗೇಮ್ಸ್ ಸಾಧನೆ(65 ಪದಕ)ಯನ್ನು ಉತ್ತಮಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News