ಮಾನಸಸರೋವರ ಯಾತ್ರೆ ಎಂದು ರಾಹುಲ್ ಗಾಂಧಿ ಗೂಗಲ್ ಫೋಟೊಗಳನ್ನು ಟ್ವೀಟ್ ಮಾಡಿದ್ದರೇ?: ಇಲ್ಲಿದೆ ವಾಸ್ತವಾಂಶ

Update: 2018-09-06 11:03 GMT

ಹೊಸದಿಲ್ಲಿ, ಸೆ.6: ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿಂದ ಕೆಲ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಾರೆ. ಮೊದಲು ಮಾನಸ ಸರೋವರದ ಫೋಟೋ ಪೋಸ್ಟ್ ಮಾಡಿ 'ಇಲ್ಲಿ ದ್ವೇಷವಿಲ್ಲ' ಎಂದು ಬರೆದರೆ ನಂತರ ರಖಾಸ್ ತಾಲ್ ಸರೋವರದ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

ಆದರೆ ರಾಹುಲ್ ಅವರು ತಾವಾಗಿಯೇ ಈ ಫೋಟೋ ಕ್ಲಿಕ್ಕಿಸಿಲ್ಲ, ಇಂಟರ್ ನೆಟ್ ನಿಂದ ಎತ್ತಿ ಪೋಸ್ಟ್ ಮಾಡಿದ್ದಾರೆಂದು ಕೆಲ ಟ್ವಿಟ್ಟರಿಗರು ಹೇಳಿದರೆ ಇನ್ನು ಕೆಲವರು ಅವರು ನಿಜವಾಗಿಯೂ ಯಾತ್ರೆ ಕೈಗೊಂಡಿದ್ದಾರೆಯೇ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ವಿಕಾಸ್ ಪಾಂಡೆ ಎಂಬವರು ಟ್ವೀಟ್ ಮಾಡಿ “ರಾಹುಲ್ ಅವರೇಕೆ ಗೂಗಲ್ ಇಮೇಜ್ ಸರ್ಚ್ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅವರು ಮಾನಸಸರೋವರದಲ್ಲಿದ್ದಾರೆಯೇ ಅಥವಾ ನೇಪಾಳದಲ್ಲಿ ಹಂದಿ ಮಾಂಸ ತಿನ್ನುತ್ತಿದ್ದಾರೆಯೇ?'' ಎಂದು ಪ್ರಶ್ನಿಸಿದ್ದರು.

ರಾಹುಲ್ ಗಾಂಧಿ ಪೋಸ್ಟ್ ಮಾಡಿದಂತಹುದೇ ಚಿತ್ರವನ್ನು ಅಂತರ್ಜಾಲದಿಂದ ತೆಗೆದು ಅವರು ಪೋಸ್ಟ್ ಮಾಡಿದ್ದಾರೆ.  ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಘಟಕದ ಉಸ್ತುವಾರಿ ಪ್ರೀತಿ ಗಾಂಧಿ ಎಂಬವರೂ ರಾಹುಲ್ ಅವರು ಅಂತರ್ಜಾಲದಿಂದ ಚಿತ್ರಗಳನ್ನು ಡೌನ್ ಲೋಡ್ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದರು. ಸುಳ್ಳು ಸುದ್ಧಿ ಪ್ರಕಟಿಸುವ ‘ಪೋಸ್ಟ್ ಕಾರ್ಡ್’ ವೆಬ್ ಸೈಟ್ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಕೂಡ ಇಂತಹುದೇ ಅರ್ಥ ನೀಡುವ ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿ ಪೋಸ್ಟ್ ಮಾಡಿದ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ‘ಟೈಮ್ಸ್ ಆಫ್ ಇಂಡಿಯಾ’ ಪರಿಶೀಲಿಸಿದಾಗ ಅದೇ ಫೋಟೋ ‘ಲೋಕ್‍ತೇಜ್’ ಹಾಗೂ ದಿ ಇಂಡಿಯನ್ ಆವಾಜ್ ವೆಬ್ ತಾಣಗಳಲ್ಲಿ ಮೂಡಿ ಬಂದಿರುವುದು ಪತ್ತೆಯಾಗಿದೆ. ಆದರೆ ರಾಹುಲ್ ಗಾಂಧಿ ಈ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ ಎಂಬುದು ವರದಿಯಲ್ಲಿದೆ.

ವಿಕಾಸ್ ಪಾಂಡೆ  ಟ್ವೀಟ್ ಮಾಡಿದ ಚಿತ್ರವನ್ನೂ ಇದೇ ರೀತಿ ಪರಿಶೀಲಿಸಿದಾಗ ಅವುಗಳು ಅರ್ಥ್ ಟ್ರಿಪ್ಪರ್ ಎಂಬ ವೆಬ್ ತಾಣದಲ್ಲಿ  ಕಂಡು ಬಂದಿತ್ತು. ಎರಡೂ ಫೋಟೋಗಳೂ ಒಂದೇ ರೀತಿ ಕಂಡು ಬಂದರೂ ಕೂಲಂಕಷವಾಗಿ ಪರಿಶೀಲಿಸಿದಾಗ, ಮುಖ್ಯವಾಗಿ ಚಿತ್ರದಲ್ಲಿರುವ ಮೋಡಗಳನ್ನು ಗಮನಿಸಿದಾಗ ಅವುಗಳು ಬೇರೆ ಚಿತ್ರಗಳು ಎಂಬುದು ಸ್ಪಷ್ಟವಾಗುತ್ತವೆ. ಹಾಗಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ಚಿತ್ರಗಳು ಗೂಗಲ್ ನಿಂದ ಎತ್ತಿಕೊಂಡದ್ದಲ್ಲ, ಅವರೇ ಕ್ಲಿಕ್ಕಿಸಿದ್ದು ಎನ್ನುವುದು ಸ್ಪಷ್ಟವಾಗಿದೆ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News