ಬಾಕಿ ಉಳಿದಿರುವ ಪ್ರಕರಣ ವಿಲೇವಾರಿಯಾಗಲು ನ್ಯಾಯಮೂರ್ತಿಗಳ ನೇಮಕವಾಗಲಿ: ಡಾ.ಬಿ.ವಿ.ಆಚಾರ್ಯ

Update: 2018-09-06 17:26 GMT

ಬೆಂಗಳೂರು, ಸೆ.6: ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆಯಿದ್ದು, ಸುಪ್ರೀಂಕೋರ್ಟ್‌ನ ಕೊಲಿಜಿಯಂನವರು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮಾಜಿ ಅಡ್ವೊಕೇಟ್ ಜನರಲ್ ಡಾ.ಬಿ.ವಿ.ಆಚಾರ್ಯ ಹೇಳಿದ್ದಾರೆ.

ಗುರುವಾರ ಹೈಕೋರ್ಟ್‌ನ ಸಭಾಂಗಣದಲ್ಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಬರೆದಿರುವ ದಿ ವ್ಹಿಲ್ ಆಫ್ ಜಸ್ಟೀಸ್ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ ಇದೆ ಎಂದು ಈಗಾಗಲೇ ಐವರು ನ್ಯಾಯಮೂರ್ತಿಗಳನ್ನು ಕೊಲಿಜಿಯಂನವರು ನೇಮಕ ಮಾಡಿದ್ದಾರೆ. ಆದರೆ, ಕೆಲ ನ್ಯಾಯಮೂರ್ತಿಗಳು ಸದ್ಯದಲ್ಲಿಯೆ ನಿವೃತ್ತಿ ಹೊಂದುತ್ತಿರುವುದರಿಂದ ಪುನಹ ನ್ಯಾಯಮೂರ್ತಿಗಳ ಕೊರತೆ ಉಂಟಾಗಲಿದೆ. ಹೀಗಾಗಿ, ಕೊಲಿಜಿಯಂನವರು ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಮೂಲಕ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕೆಂದು ಹೇಳಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ಸಂಸದ ವೀರಪ್ಪ ಮೊಯ್ಲಿ ಅವರು ಈ ಸಮಾಜಕ್ಕೆ ಈಗಾಗಲೇ ಸಾಕಷ್ಟು ಉತ್ತಮ ಕೃತಿಗಳನ್ನು ನೀಡಿದ್ದು, ಅದೇ ಸಾಲಿಗೆ ದಿ ವ್ಹಿಲ್ ಆಫ್ ಜಸ್ಟೀಸ್ ಕೃತಿ ಕೂಡ ಸೇರುತ್ತದೆ. ಅಲ್ಲದೆ, ನ್ಯಾಯಾಂಗ ಗಟ್ಟಿಯಾಗಿದ್ದರೆ ಸರಕಾರಗಳು ಉತ್ತಮ ಆಡಳಿತ ನಡೆಸಿ, ದೇಶದ ಆರ್ಥಿಕತೆ ಸದೃಢವಾಗಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ, ಸಂಸದ ಡಾ.ವೀರಪ್ಪ ಮೊಯ್ಲಿ ಮಾತನಾಡಿ, ನಾನು ಶಿಕ್ಷಣ ಮಂತ್ರಿಯಾದಾಗ ನ್ಯಾಷನಲ್ ಲಾ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೆ ಇಲ್ಲಯೆಂಬುದನ್ನು ತಿಳಿದು ಬಹಳ ಬೇಸರವಾಯಿತು. ಹೀಗಾಗಿ, ನಾನೆ ಮುಂದೆ ನಿಂತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ನ್ಯಾಷನಲ್ ಲಾ ಕಾಲೇಜಿಗೆ ಸೇರುವಂತೆ ಮಾಡಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸಂವಿಧಾನವು ನಮಗೆ ಎಲ್ಲವನ್ನೂ ಕಲ್ಪಿಸಿದೆ. ಪರಿಶ್ರಮ, ಶ್ರದ್ಧೆ, ಸಮರ್ಪಣಾಭಾವದಿಂದ ಕೆಲಸ ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಹುದ್ದೆಗಳಿಗೆ ಏರಲು ಅವಕಾಶಗಳಿವೆ. ಹೀಗಾಗಿ, ಯುವ ಜನಾಂಗ ಈಗಿರುವ ಅವಕಾಶಗಳನ್ನು ಪಡೆದುಕೊಂಡು ಎತ್ತರ ಸ್ಥಾನಕ್ಕೆ ಏರಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ಪ್ರೊ.ಆರ್.ವೆಂಕಟರಾವ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News