ವಿದ್ವತ್ ಮೇಲಿನ ಹಲ್ಲೆ ಪ್ರಕರಣ: ಆರೋಪಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್

Update: 2018-09-06 17:27 GMT

ಬೆಂಗಳೂರು, ಸೆ.6: ಉದ್ಯಮಿ ಲೋಕನಾಥ್ ಅವರ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಮೂರನೆ ಆರೋಪಿ ಶ್ರೀಕೃಷ್ಣ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶ್ರೀಕೃಷ್ಣರ ಅರ್ಜಿ ಕುರಿತು ಗುರುವಾರ ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನಂತರ ತೀರ್ಪು ಕಾಯ್ದಿರಿಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿದ್ವತ್ ಮೇಲೆ ಶ್ರೀಕೃಷ್ಣ ಹಲ್ಲೆ ನಡೆಸಿಲ್ಲ. ಪ್ರಕರಣದಲ್ಲಿ ಆತ ಯಾವುದೇ ತಪ್ಪು ಮಾಡಿಲ್ಲ. ಆದರೂ ದುರುದ್ದೇಶದಿಂದ ಪೊಲೀಸರು ಅರ್ಜಿದಾರರನ್ನು ಮೂರನೇ ಆರೋಪಿಯನ್ನಾಗಿಸಿದ್ದಾರೆ. ಹೀಗಾಗಿ, ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಸಿಸಿಬಿ ಪೊಲೀಸರ ಪರ ವಕೀಲ ಎಂ.ಎಸ್. ಶ್ಯಾಮಸುಂದರ್, ಅರ್ಜಿದಾರರು ತಪ್ಪು ಮಾಡಿ ತಲೆಮರೆಸಿಕೊಂಡಿದ್ದಾನೆ. ತಲೆಮರೆಸಿಕೊಂಡ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮೇಲಾಗಿ ಅರ್ಜಿದಾರ ಪ್ರಕರಣದಲ್ಲಿ ಭಾಗಿಯಾಗಿದ್ದು, ಪೊಲೀಸರ ವಿಚಾರಣೆ ಎದುರಿಸಬೇಕಿದೆ. ಹೀಗಾಗಿ, ಆತನಿಗೆ ಜಾಮೀನು ನೀಡಬಾರದು ಎಂದು ಕೋರಿದರು.

ಹಿನ್ನೆಲೆ ಏನು: ನಗರದ ಫರ್ಜಿ ಕಫೆಯಲ್ಲಿ 2018ರ ಫೆಬ್ರವರಿ 17ರಂದು ರಾತ್ರಿ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮದ್ ನಲಪಾಡ್ ಮತ್ತು ಆತನ ಸಹಚರರು, ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಸಿಸಿಬಿ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಶ್ರೀಕೃಷ್ಣ, ಇದೀಗ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News