ಸಿಎಂ ಪರಿಹಾರ ನಿಧಿಗೆ ದೇವಾಲಯಗಳ ಹಣ ವರ್ಗಾವಣೆ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2018-09-06 17:47 GMT

ಬೆಂಗಳೂರು, ಸೆ.6: ರಾಜ್ಯ ಮುಜರಾಯಿ ಇಲಾಖೆ ಅಧೀನದ ಆಯ್ದ 81 ಅಧಿಸೂಚಿತ ದೇವಾಲಯಗಳ 1,230 ಲಕ್ಷ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸುವ ಸಂಬಂಧ ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ನಗರದ ಮಲ್ಲೇಶ್ವರದ ಭಾರತ ಪುನರುತ್ಥಾನ ಟ್ರಸ್ಟ್‌ನ ಟ್ರಸ್ಟಿ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಪಿಐಎಲ್‌ನಲ್ಲಿ ಕೇವಲ ಹಿಂದು ದೇವಾಲಯಗಳನ್ನು ಗುರಿಯಾಗಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಸರಕಾರದ ಈ ನಡೆ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಲಾಗಿದೆ.

ಮುಜರಾಯಿ ಇಲಾಖೆ ಹಾಗೂ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆ ಹಾಗೂ ಧರ್ಮದಾಯ ಇಲಾಖೆ ಆಯುಕ್ತರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿಯು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ.

ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಹಣಕ್ಕಾಗಿ ಮುಜರಾಯಿ ಇಲಾಖೆ ಅಧೀನದ ಅಧಿಸೂಚಿತ ದೇವಾಲಯಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಸಿಎಂ ಪರಿಹಾರ ನಿಧಿಗೆ ರವಾನಿಸಲು ಆ.21ರಂದು ಕಂದಾಯ ಇಲಾಖೆ ಆದೇಶಿಸಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಅವುಗಳ ಅಭಿವೃದ್ಧಿಗೆ ಹೊರತಾಗಿ ಬೇರಾವುದೇ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ. ರಾಜ್ಯದ 35 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆಯ ಅಧೀನದಲ್ಲಿ ಬರಲಿದೆ. ಈ ಪೈಕಿ 16 ಜಿಲ್ಲೆಗಳ ಆಯ್ದ 81 ದೇವಾಲಯಗಳಲ್ಲಿರುವ 1230.75 ಕೋಟಿ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ರವಾನಿಸಲು ನಿರ್ಧರಿಸಲಾಗಿದೆ. ಇದು ಕಾನೂನು ಬಾಹಿರ ಹಾಗೂ ಸಂವಿಧಾನ ಬಾಹಿರ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇತರೆ ಧರ್ಮದ ದೇವಾಲಯಗಳನ್ನು ಹೊರತುಪಡಿಸಿ ಕೇವಲ ಹಿಂದು ಧರ್ಮದ ದೇವಸ್ಥಾನಗಳನ್ನೇ ಗುರಿಯಾಗಿಸಿರುವ ಸರಕಾರ, ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News