ಪೋಷಕರು ಎಚ್ಚರ ವಹಿಸಬೇಕಾಗಿದೆ

Update: 2018-09-06 18:31 GMT

ಮಾನ್ಯರೇ,

ಕೆಲವು ಸಮಯದ ಹಿಂದೆ ಅಪಾಯಕಾರಿ ಬ್ಲೂವೇಲ್ ಆನ್‌ಲೈನ್ ಗೇಮ್ ಬಹಳಷ್ಟು ಸುದ್ದಿ ಮಾಡಿತ್ತು. ಇದೀಗ ಅದಕ್ಕಿಂತ ಭಯಾನಕ ಚಾಲೆಂಜ್ ಆಟವೊಂದು ಬಹಳಷ್ಟು ಸುದ್ದಿ ಮಾಡುತ್ತಿದೆ. ಅದುವೇ ಮೊಮೊ ಚಾಲೆಂಜ್.
ಬ್ಲೂವೇಲ್ ಗೇಮ್ನಂತೆಯೇ ಇದೂ ಕೂಡ ಆನ್‌ಲೈನ್ ಆಟವಾಗಿದೆ. ಫೇಸ್ ಬುಕ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ಯುವಕರಿಗೆ ಲಿಂಕ್ ಕಳುಹಿಸಿ ಈ ಆಟಕ್ಕೆ ಪ್ರೇರೇಪಿಸಲಾಗುತ್ತದೆ. ಲಿಂಕ್ ಒತ್ತಿ ಆಟವನ್ನು ಪ್ರಾರಂಭ ಮಾಡಿದ ತಕ್ಷಣ ಅವರ ಮೊಬೈಲಿನಲ್ಲಿರುವ ಖಾಸಗಿ ವಿಚಾರಗಳನ್ನು ಹ್ಯಾಕ್ ಮಾಡಲಾಗುತ್ತದೆ. ಗೇಮ್ ನಿರ್ವಾಹಕ ಹೇಳಿದಂತೆ ಆಟವನ್ನು ಪೂರ್ತಿಗೊಳಿಸದಿದ್ದರೆ ನಿಮ್ಮ ಮೊಬೈಲ್ನ ಖಾಸಗಿ ವಿವರಗಳನ್ನು ವೈರಲ್ ಮಾಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ. ಅಡ್ಮಿನ್‌ನ ಇಂತಹ ಮೋಸದಾಟಕ್ಕೆ ಗುರಿಯಾಗಿ ನಿರ್ವಾಹವಿಲ್ಲದೆ ಯುವಜನತೆ ಈ ಆಟದಲ್ಲಿ ತೊಡಗುತ್ತಾರೆೆ. ಭಯಾನಕ ಟಾಸ್ಕ್ ಹೊಂದಿರುವ ಈ ಮೊಮೊ ಚಾಲೆಂಜ್ ಆಟದಲ್ಲಿ ಮುಂದುವರಿದರೆ ಸಾವು ಕಟ್ಟಿಟ್ಟ ಬುತ್ತಿ.

ಭಯಾನಕ ಮುಖವನ್ನು ಹೊಂದಿರುವ ತೆವಳುವ ಕುತ್ತಿಗೆಯ ಹೊರ ಚಾಚಿದ ವಿಕೃತ ಕಣ್ಣನ್ನು ಹೊಂದಿರುವ ಹುಡುಗಿಯೊಬ್ಬಳ ಚಿತ್ರವನ್ನು ಒಳಗೊಂಡಿರುವ ಈ ಮೊಮೊ ಚಾಲೆಂಜ್ ಗೇಮ್, ಈಗಾಗಲೇ ಹಲವು ಮಕ್ಕಳ ಜೀವವನ್ನು ತಿಂದು ತೇಗಿದೆ. 2018ರ ಜೂನ್‌ನಲ್ಲಿ ಮೊಮೊ ಚಾಲೆಂಜ್ ಆಟದ ಕುರಿತ ಯೂಟ್ಯೂಬ್ ಮೂಲಕ ಹರಿಯಬಿಟ್ಟಿರುವ ವೀಡಿಯೊವೊಂದು ಈ ಆಟದ ರಹಸ್ಯವನ್ನು ಬಿಚ್ಚಿಟ್ಟಿತು. ಜಪಾನ್ ಮೂಲದ ಈ ಆಟವು ಮೊದಲಿಗೆ ಲ್ಯಾಟಿನ್ ಅಮೆರಿಕ, ಅರ್ಜೆಂಟೈನಾ, ಬ್ರೆಝಿಲ್, ಕೆನಡಾ, ಯೂರೋಪ್, ಮೆಕ್ಸಿಕೊ ಹಾಗೂ ಸ್ಪೇನ್‌ನಲ್ಲಿ ಜನಪ್ರಿಯತೆ ಗಳಿಸುವ ಮೂಲಕ ಕೇವಲ ಎರಡೇ ತಿಂಗಳ ಅವಧಿಯಲ್ಲಿ ಅನೇಕ ಜೀವಗಳನ್ನು ಬಲಿ ಪಡೆಯಿತು. ಆದರೆ ಯಾವಾಗ ಈ ಆಟವು ನಮ್ಮ ದೇಶದ ಯುವಕರನ್ನು ಬಲಿ ಪಡೆಯಲು ಪ್ರಾರಂಭವಾಯಿತೋ ಆಗಲೇ ಪೋಷಕರು ಈ ಡೆಡ್ಲಿ ಮೊಮೊ ಚಾಲೆಂಜ್ ಕುರಿತು ಚಿಂತಿತರಾಗಿದ್ದಾರೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿನಿಯೊಬ್ಬಳು ತನ್ನ ನರನಾಡಿಯನ್ನು ಕತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು, ಡಾರ್ಜಿಲಿಂಗ್‌ನಲ್ಲಿ 18 ವರ್ಷದ ಹಾಗೂ 26 ವರ್ಷದ ಯುವಕರಿಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊಮೊ ಚಾಲೆಂಜ್ ಕಾರಣದಿಂದಾಗಿದೆ ಎಂದು ಪ್ರಾಥಮಿಕ ತನಿಖಾ ವರದಿಗಳು ಹೇಳುತ್ತಿವೆ. ಇತ್ತೀಚೆಗೆ ಕೇರಳದ ಆಲಪ್ಪುಳ ಹಾಗೂ ಕರ್ನಾಟಕದ ತುಮಕೂರಿನಲ್ಲಿಯೂ ವಿದ್ಯಾರ್ಥಿಗಳ ಮೊಬೈಲ್ಗೆ ಈ ಮೊಮೊ ಚಾಲೆಂಜ್ ಲಿಂಕ್ ಬಂದಿರುವ ಕುರಿತು ದೂರುಗಳು ದಾಖಲಾಗಿವೆ. ಒಟ್ಟಿನಲ್ಲಿ ಈ ಆಟವು ಬ್ಲೂವೇಲ್ಗಿಂತ ಹೆಚ್ಚು ಮಾರಣಾಂತಿಕವಾಗಿರುವುದು ದೃಢವಾಗುತ್ತಿದೆ. ಈಗಿಂದೀಗಲೇ ನಾವು ಈ ಭಯಾನಕ ಪಿಡುಗಿಗೆ ಕಡಿವಾಣ ಹಾಕದಿದ್ದಲ್ಲಿ ಮುಂದೆ ಭಾರೀ ಬೆಲೆ ತೆರಬೇಕಾಗುವುದಂತೂ ಖಂಡಿತ.
ಈ ಆಟವು ಮಕ್ಕಳಿಗೆ ತಮ್ಮನ್ನು ತಾವೇ ಕೊಲೆ ಮಾಡುವಂತೆ ಅಥವಾ ಆತ್ಮಹತ್ಯೆ ಮಾಡುವಂತೆ ಪ್ರಚೋದನೆಯನ್ನು ನೀಡುತ್ತದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಸಕ್ರಿಯರಾಗಿರುವ ಮಕ್ಕಳು ಮತ್ತು ಯುವಜನತೆಯನ್ನು ಮೊಮೊ ಚಾಲೆಂಜ್‌ಗೆ ಸೆಳೆಯಲಾಗುತ್ತದೆ. ಈ ಚಾಲೆಂಜ್‌ನಲ್ಲಿ ಮೊದಲಿಗೆ ಕುಟುಂಬದವರ ವಿವರಗಳನ್ನು ತಿಳಿದುಕೊಂಡು ನಂತರ ಬ್ಲಾಕ್‌ಮೇಲ್ ಮಾಡಲಾಗುತ್ತದೆ. ಬ್ಲೂವೇಲ್ ಡೆಡ್ಲಿ ಗೇಮ್ ನಂತೆ ಇದೂ ಸಹ ಮಕ್ಕಳನ್ನು ಸಾವಿನ ದವಡೆಗೆ ತಳ್ಳುತ್ತದೆ. ಹೀಗಾಗಿ ಪೋಷಕರು ಈಗಿಂದೀಗಲೇ ಎಚ್ಚರವಹಿಸುವುದರೊಂದಿಗೆ ಈ ಭಯಾನಕ ಮೊಮೊ ಚಾಲೆಂಜ್ ನಿಷೇಧಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಾಗಿದೆ.

Writer - -ಎಸ್. ಎ. ರಹಿಮಾನ್, ಮಿತ್ತೂರು

contributor

Editor - -ಎಸ್. ಎ. ರಹಿಮಾನ್, ಮಿತ್ತೂರು

contributor

Similar News