ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ: ಗರ್ಭಿಣಿಯನ್ನು ಬಿದಿರಿನ ಡೋಲಿಯಲ್ಲಿ ಸಾಗಿಸಿದ ಕುಟುಂಬ

Update: 2018-09-07 07:19 GMT

ಹೈದರಾಬಾದ್, ಸೆ.7: ಆಂಧ್ರ ಪ್ರದೇಶದ ವಿಝಿಯನಗರಂ ಜಿಲ್ಲೆಯ ಮಾಸಿಕ ವಲಸ ಚಿಂತಲ ಸಾಲೂರು ಎಂಬ ಗ್ರಾಮದ ಆದಿವಾಸಿ ಮಹಿಳೆ, ತುಂಬು ಗರ್ಭಿಣಿ ಮುತ್ತಮ್ಮಗೆ ಇತ್ತೀಚೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅವರಿದ್ದ ಅರಣ್ಯ ಪ್ರದೇಶಕ್ಕೆ ಯಾವುದೇ ವಾಹನ ಬಾರದ ಕಾರಣ ಕುಟುಂಬ ಸದಸ್ಯರು ಬಿದಿರಿನ ಕೋಲುಗಳು, ಹಗ್ಗ ಹಾಗೂ ಒಂದು ತುಂಡು ಬಟ್ಟೆಯಿಂದ ಮಾಡಲ್ಪಟ್ಟ ಡೋಲಿಯಲ್ಲಿ  ಆಕೆಯನ್ನು ಹೊತ್ತುಕೊಂಡು ಆರರಿಂದ ಏಳು ಕಿಮೀ ತನಕ ಸಾಗಬೇಕಾಯಿತು. ಆದರೆ ದಾರಿ ಮಧ್ಯೆ ಮುತ್ತಮ್ಮಗೆ ಹೆರಿಗೆ ನೋವು ಹೆಚ್ಚಾದಾಗ ಡೋಲಿಯನ್ನು ಕೆಳಗಿಳಿಸಿ ಕುಟುಂಬ ಸದಸ್ಯರ ಸಹಾಯದಿಂದ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಮನಕಲಕುವ ಪಯಣದ ವೀಡಿಯೋ ಚಿತ್ರೀಕರಣವನ್ನು ಯುವಕನೊಬ್ಬ ಮಾಡಿದ್ದು, ಗ್ರಾಮಸ್ಥರು ತಮಗೆ ರಸ್ತೆ ಸಂಪರ್ಕವೊದಗಿಸುವಂತೆ ಮಾಡಿದ ಹಲವಾರು ಮನವಿಗಳು ಯಾರ ಕಿವಿಗೂ ಬಿದ್ದಿಲ್ಲ ಎಂದು ಆತ ವಿಡಿಯೋದಲ್ಲಿ ವಿವರಿಸುತ್ತಾನೆ. ಗ್ರಾಮದ ಅಸೌಖ್ಯಪೀಡಿತರನ್ನು ಹಾಗೂ ಗರ್ಭಿಣಿಯರನ್ನು ಇದೇ ರೀತಿ  ಸಾಗಿಸುವ ಅನಿವಾರ್ಯತೆಯಿದೆ ಎಂದೂ ಆತ ವೀಡಿಯೋದಲ್ಲಿ ಹೇಳುತ್ತಿರುವಾಗ ಗ್ರಾಮದ ಇತರ ಮೂವರು ಮಹಿಳೆಯರು ಆಕೆಯ ಪ್ರಸವಕ್ಕೆ ಸಹಕರಿಸುತ್ತಾರೆ.  ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ತುಂಡರಿಸುವ ದೃಶ್ಯವೂ ವೀಡಿಯೋದಲ್ಲಿದೆ.

 ಈ ಪ್ರದೇಶದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಜುಲೈ ತಿಂಗಳಲ್ಲಿ ಅಸೌಖ್ಯದಿಂದಿದ್ದ 5 ತಿಂಗಳ ಗರ್ಭಿಣಿ ಮಹಿಳೆಯನ್ನು  ಆಕೆಯ ಪತಿ ಮತ್ತಿತರ ಗ್ರಾಮಸ್ಥರು 12 ಕಿಮೀ ಹೊತ್ತು ಅಂಬುಲೆನ್ಸ್ ತನಕ ತಂದಿದ್ದರು.  ಇನ್ನೊಂದು ಘಟನೆಯಲ್ಲಿ  25 ವರ್ಷದ ಜಿಂದಮ್ಮ ಎಂಬ ಗರ್ಭಿಣಿಯನ್ನು ಈ ರೀತಿ ಹೊತ್ತುಕೊಂಡು ಅಂಬುಲೆನ್ಸ್ ತನಕ ಸಾಗಿಸುವುದಕ್ಕಿಂತ ಮುಂಚೆಯೇ ಆಕೆಗೆ ಪ್ರಸವವಾದರೂ ಆಕೆ ಸಾವನ್ನಪ್ಪಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News