ಚಳವಳಿಗಳು ಎಂದಿಗೂ ಸಾಯುವುದಿಲ್ಲ: ಪ್ರೊ.ಚಂಪಾ

Update: 2018-09-07 12:46 GMT

ಬೆಂಗಳೂರು, ಸೆ.7: ಯಾವುದೇ ಚಳವಳಿಯಾಗಲಿ ಎಂದಿಗೂ ಸಾಯುವುದಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ನಗರದ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ‘ಚಳವಳಿಗಳು ಮತ್ತು ಹೊಸಗನ್ನಡ ಸಾಹಿತ್ಯ’ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷಿಪ್ರಕ್ರಾಂತಿಯ ಚಳವಳಿಗಳಿಗೆ ಅಳಿವಿಲ್ಲ. ಚಳವಳಿ ಕೊನೆಗೊಳ್ಳಬಹುದು, ಆದರೆ, ಸಾಯುವುದಿಲ್ಲ ಎಂದು ಪ್ರತಿಪಾದಿಸಿದರು.

ವಚನಕಾರರು, ದಾರ್ಶನಿಕರು, ಶರಣರು ಸಾಮಾಜಿಕ ಕ್ರಾಂತಿ ಹಾಗೂ ಚಳವಳಿಗಳ ಹುಟ್ಟಿಗೆ ಕಾರಣಕರ್ತರಾಗಿದ್ದಾರೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ, ಒಂದು ವರ್ಗದ ವಿರುದ್ಧ ಅಪಾರವಾದ ಹೋರಾಟ ಮಾಡಿದ್ದಾರೆ. ಅವರ ಚಳವಳಿ ಇಂದಿಗೂ ಮಾದರಿಯಾಗಿದೆ. ದಲಿತ ಚಳವಳಿ, ಪ್ರಗತಿಪರ ಚಳವಳಿ, ಬಂಡಾಯ ಚಳವಳಿ ಪ್ರಭಾವ ಕಡಿಮೆಯಾಗಿದೆ ಎಂದಮಾತ್ರಕ್ಕೆ ಚಳವಳಿ ನಾಶಗೊಂಡಿದೆ ಎಂದರ್ಥವಲ್ಲ ಎಂದು ಹೇಳಿದರು.

ನಮ್ಮ ಹಿಂದಿನ ಕಾಲದ ಸಾಮಾಜಿಕ ಹೋರಾಟಗಾರರು, ದಲಿತ, ದಮನಿತ, ರೈತ, ಕೃಷಿ-ಕೂಲಿ ಕಾರ್ಮಿಕ ನಾಯಕರು, ಹೋರಾಟಗಾರರು ಬಿತ್ತಿದ ಬೀಜಗಳು ಎಂದಿಗೂ ಸಾಯುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಮೊಳಕೆ ಒಡೆಯುತ್ತಿರುತ್ತವೆ. ಹೀಗಾಗಿ, ನಾಡಿನ ಯಾವುದೇ ಚಳವಳಿಯೂ ನಾಶವಾಗುವುದಿಲ್ಲ ಎಂದು ವಿಶ್ಲೇಷಿಸಿದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ಮನುಕುಲಕ್ಕೆ ಎಷ್ಟು ಅಪಾಯವೋ ಅಷ್ಟೇ ಕೇಸರೀಕರಣವೂ ಅಪಾಯಕಾರಿ. ಒಂದು ವ್ಯವಸ್ಥೆ ವಿರುದ್ಧದ ಹೋರಾಟ ನಡೆಸಿದವರನ್ನು ಹತ್ಯೆ ಮಾಡಲಾಗುತ್ತಿದೆ. ಇದು, ಇನ್ನಷ್ಟು ಆತಂಕವನ್ನು ಹುಟ್ಟು ಹಾಕಿದೆ. ಇಂತಹ ಪ್ರವೃತ್ತಿಯನ್ನು ಪ್ರತಿಭಟಿಸಬೇಕು ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ವಿ.ಬಿ.ತಾರಕೇಶ್ವರ್ ಮಾತನಾಡಿ, ಆಯಾ ಕಾಲಘಟ್ಟದಲ್ಲಿ ನಡೆದ ಚಳವಳಿಗಳ ಬಗ್ಗೆ ಮರು ವಿಮರ್ಶೆ ಮಾಡುವ ಅಗತ್ಯವಿದೆ ಎಂದು ಹೇಳಿದರು. ಸಾಮಾಜಿಕ ಬದಲಾವಣೆಗೆ ಹುಟ್ಟಿದ ಹೋರಾಟದ ಪ್ರಕ್ರಿಯೆ ಚಳವಳಿಯಾಗಿದೆ. ನಿರ್ದಿಷ್ಟ ಬದಲಾವಣೆ ಬಿತ್ತುವುದು ಇದರ ಮುಖ್ಯ ಉದ್ದೇಶವಾಗಿದ್ದು, ಚಳವಳಿಯ ಗುರುತಿಸುವಿಕೆ ಆಯಾ ಕಾಲಘಟ್ಟವನ್ನು ತಿಳಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎ.ಎಚ್.ರಾಮರಾವ್, ಎಸ್.ಎನ್.ನಾಗರಾಜರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News