ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ: ಎನ್.ಸಿ.ಜ್ಯೋತಿ

Update: 2018-09-07 13:23 GMT

ಬೆಂಗಳೂರು, ಸೆ.7: ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ದೇಶದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಹುಜನ ಅಂಬೇಡ್ಕರ್ ಸಂಘದ ಅಧ್ಯಕ್ಷೆ ಎನ್.ಸಿ.ಜ್ಯೋತಿ ಹೇಳಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ವಿರುದ್ಧ ಧ್ವನಿ ಎತ್ತುವ ಸಾಮಾಜಿಕ ಕಾರ್ಯಕರ್ತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸುವ ಮೂಲಕ ದಲಿತ ಹಾಗೂ ಬುಡಕಟ್ಟು ಸಮುದಾಯದ ಮೇಲೆ ನೇರ ದಾಳಿ ನಡೆಸಿದೆ ಎಂದು ಆರೋಪಿಸಿದರು. ಮೋದಿ ಹತ್ಯೆಯ ಸಂಚು ಕೇವಲ ಒಂದು ಕಲ್ಪನೆ. ಮೋದಿ ದುರಾಡಳಿತದ ವಿರುದ್ಧ ಧ್ವನಿ ಎತ್ತಿರುವ ವ್ಯಕ್ತಿಗಳ ಧ್ವನಿಗಳನ್ನು ದಮನ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಅನಗತ್ಯವಾಗಿ ಹೋರಾಟಗಾರರಿಗೆ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಿ ಅಪಪ್ರಚಾರ ಮಾಡಲಾಗುತ್ತಿದೆ. ನಾಗರಿಕರ ವಾಕ್ ಸ್ವಾತಂತ್ರವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹತ್ಯೆಯ ಸಂಚಿನ ಕಲ್ಪನೆಯನ್ನು ಮುಂಚೂಣಿಗೆ ತರಲಾಗುತ್ತಿದೆ. ಕೇವಲ ಅಧಿಕಾರದ ಆಸೆಗಾಗಿ ದೇಶದಲ್ಲಿ ಬಿಜೆಪಿಯು ಭಯದ ವಾತಾವರಣ ಸೃಷ್ಟಿಸುತ್ತಿದೆ. ರಾಜಕೀಯ ವಿರೋಧಿಗಳ ವಿರುದ್ಧ ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಅಧಿಕಾರ ದುರುಪಯೋಗ ಮಾಡಿಕೊಂಡು ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಚಳುವಳಿಗಾರರ ಬಂಧನ ವಿರೋಧಿಸಿ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನವನ್ನು ಸುಟ್ಟು, ದೇಶದ ಜನತೆಯನ್ನು ಅವಮಾನ ಮಾಡಿರುವ ಮನುವಾದಿಗಳ ವಿರುದ್ಧ ಎಲ್ಲರೂ ಒಂದಾಗಬೇಕಾದ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News