ಸರಕಾರಿ ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧ

Update: 2018-09-07 13:48 GMT

ಬೆಂಗಳೂರು, ಸೆ.7: ರಾಜ್ಯಾದ್ಯಂತ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ-ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನ (Single use packaged water bottles) ನೀರಿನ ಬಳಕೆ, ಸರಬರಾಜು ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಇಂತಹ ಸಭೆ, ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಕಾಗದ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು ಹಾಗೂ ಸೂಕ್ತ ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆಯನ್ನು (Common drinking water dispensing system) ಏರ್ಪಡಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಸರಕಾರಿ ಸಭೆ, ಸಮಾರಂಭ, ಕಾರ್ಯಾಗಾರ, ವಿಚಾರ ಸಂಕಿರಣ, ಇತ್ಯಾದಿಗಳಲ್ಲಿ 20 ಲೀಟರ್ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಕ್ಯಾನ್‌ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಏರ್ಪಡಿಸಬೇಕು.

ಕಚೇರಿಗಳಲ್ಲಿ ಸಾಮಾನ್ಯವಾಗಿ ಆಗಿಂದಾಗ್ಗೆ ಸಭೆ, ಸಮಾರಂಭಗಳು ಏರ್ಪಡುವ ಸಮಿತಿ ಕೊಠಡಿಗಳು, ಕಾನ್ಫರೆನ್ಸ್ ಹಾಲ್‌ಗಳು ಇತ್ಯಾದಿ ಸಭಾಂಗಣಗಳಲ್ಲಿ ಕೇಂದ್ರ ಸರಕಾರದ ಜಾಲತಾಣ https://gem.gov.in ರಲ್ಲಿ ಅನುಮೋದಿಸಲ್ಪಟ್ಟಿರುವ ಅಥವಾ ರಾಜ್ಯ ಸರಕಾರದಿಂದ ಅಂಗೀಕರಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ RO ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ಗಾಜಿನ ಲೋಟ ಅಥವಾ ಸ್ಟೀಲ್ ಲೋಟ ಅಥವಾ ಪೇಪರ್ ಲೋಟ ಅಥವಾ ಇತರೆ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ನೀರು ಕುಡಿಯುವುದಕ್ಕೆ ವ್ಯವಸ್ಥೆ ಮಾಡಬೇಕು.

ಎಲ್ಲ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರಕಾರದಿಂದ ಅನುದಾನ ಪಡೆಯುವಂತಹ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಕೇಂದ್ರ ಸರಕಾರದ ಜಾಲತಾಣ https://gem.gov.in ದಲ್ಲಿ ಅನುಮೋದಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಅಥವಾ ಯಾವುದಾದರೂ ಉತ್ತಮ RO ಶುದ್ಧ ನೀರಿನ ಘಟಕಗಳನ್ನು ವ್ಯವಸ್ಥಾಪನೆಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News