ಮಾದಕ ವಸ್ತುಗಳ ಮಾರಾಟ ದಂಧೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಜಾಗೃತಿ ಅಭಿಯಾನ

Update: 2018-09-07 14:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.7: ಮಾದಕ ವಸ್ತುಗಳ ಮಾರಾಟ ದಂಧೆಯನ್ನು ನಿಯಂತ್ರಿಸುವ ಉದ್ದೇಶದಿಂದ ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸರು ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ.

ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಸಂಘಟನೆಗಳ ಜತೆ ಚರ್ಚಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಸ್ವಂತ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಮಾರಾಟಗಾರರು ಮತ್ತು ವ್ಯಸನಿಗಳ ಬಗ್ಗೆ ದೂರು ನೀಡಲು ಟೋಲ್ ಫ್ರೀ ನಂಬರ್ 1908 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ.

ಪ್ರತಿವರ್ಷ ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ. ಇದಕ್ಕೆ ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಬಲ ನೀಡಿದ್ದು, ತಮ್ಮ ಕಾರಿನ ಮೇಲೆ ‘ಜೀವನವನ್ನು ಪ್ರೀತಿಸಿ ಹಾಗೂ ಡ್ರಗ್ಸ್ ಸೇವನೆ ಮಾಡುವುದಿಲ್ಲ ಎಂದು ಘೋಷಿಸಿ’ ಎಂಬ ಘೋಷಣೆಗಳಿರುವ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಯ ಹೊಯ್ಸಳ ಸೇರಿದಂತೆ ವಿವಿಧ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಅಷ್ಟೇ ಅಲ್ಲದೆ, ಸಾರ್ವಜನಿಕರು ತಮ್ಮ ವಾಹನಗಳ ಮೇಲೆ ಈ ರೀತಿಯ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಕೈಗೊಂಡಿರುವ ಅಭಿಯಾನಕ್ಕೆ ಬೆಂಬಲ ನೀಡಿದ್ದರೆ, ಕೆಲವು ಸಂಘ-ಸಂಸ್ಥೆಗಳು ಸಾಥ್ ನೀಡಿವೆ.

ಕೈ ಬ್ಯಾಂಡ್‌ಗಳು: ಶಾಲಾ-ಕಾಲೇಜುಗಳಲ್ಲಿ ಅಭಿಯಾನ ಆರಂಭಿಸಿರುವ ಪೊಲೀಸ್ ಇಲಾಖೆ ಎಲ್ಲ ವಿದ್ಯಾರ್ಥಿಗಳಿಗೆ ಹ್ಯಾಂಡ್ ಬ್ಯಾಂಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಬ್ಯಾಂಡ್‌ಗಳಲ್ಲಿ ‘ಜೀವನವನ್ನು ಪ್ರೀತಿಸಿ’ ಹಾಗೂ 'ಡ್ರಗ್ಸ್ ಸೇವನೆ ಮಾಡುವುದಿಲ್ಲ ಎಂದು ಘೋಷಿಸಿ’ ಎಂಬ ಘೋಷಣೆಗಳಿವೆ. ಅಲ್ಲದೆ, 1908 ಟ್ರೋಲ್ ಫ್ರೀ ಸಂಖ್ಯೆಯನ್ನು ನೀಡಲಾಗಿದೆ.

ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ: ನಗರದ ಹಲವು ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ನಗರ ಪೊಲೀಸ್ ಆಯುಕ್ತರು ಸ್ಥಳದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ಅನಾಹುತಗಳು, ಆರೋಗ್ಯದ ಮೇಲಾಗುವ ದುಷ್ಪರಿಣಾಮ, ಶಿಕ್ಷೆ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ಕೆಲವು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಪಬ್ ಮತ್ತು ಬಾರ್‌ಗಳಿಗೆ ನೋಟಿಸ್: ಮಾದಕ ವಸ್ತುಗಳ ಸೇವನೆ ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆಯು ನಗರದಲ್ಲಿನ ಪಬ್ ಹಾಗೂ ಬಾರ್‌ಗಳಲ್ಲಿ ಮಾದಕ ವಸ್ತು ಮಾರಾಟ ಮಾಡಿದರೆ 2 ಲಕ್ಷ ದಂಡ ಹಾಗೂ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಸೇವನೆ ಮಾಡಿದರೆ 1 ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News