ಉಡುಪಿಯ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನೋಟಿಸ್

Update: 2018-09-07 16:52 GMT

ಬೆಂಗಳೂರು, ಸೆ.7: ಉಡುಪಿ ಜಿಲ್ಲೆ ಕುಂದಾಪುರದ ಮಾಲತಿ ಬಿ. ಶೆಟ್ಟಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮಾಲತಿ ಶೆಟ್ಟಿಯವರ ಅಳಿಯ ರಾಮ ಮನೋಹರ ಶೆಟ್ಟಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಘವೇಂದ್ರ ಎಸ್.ಚೌಹಾಣ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಪ್ರಕರಣ ಕುರಿತು ತನಿಖೆ ಪ್ರಗತಿ ವರದಿಯನ್ನು ಮೂರು ವಾರಗಳಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್. ಪವನಚಂದ್ರ ಶೆಟ್ಟಿ ವಾದ ಮಂಡಿಸಿ, ಮಾಲತಿ ಶೆಟ್ಟಿ ಅವರು 2015ರಲ್ಲಿ ನಾಪತ್ತೆಯಾಗಿದ್ದಾರೆ. ಆದರೆ, ಆಕೆಯನ್ನು ಪೊಲೀಸರು ಈವರೆಗೂ ಪತ್ತೆ ಮಾಡಿಲ್ಲ. ಪ್ರಕರಣ ಕುರಿತು ದಿನವಹಿ ಆಧಾರದಲ್ಲಿ ತನಿಖೆ ನಡೆಸುವಂತೆ ಈ ಹಿಂದೆ ಹೈಕೋರ್ಟ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶಿಸಿದೆ. ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಅವರ ಕುಟುಂಬವು ಕಳೆದ ಮೂರು ವರ್ಷಗಳಿಂದ ಸಾಕಷ್ಟು ನೋವು ಅನುಭವಿಸುತ್ತಿದೆ ಎಂದು ತಿಳಿಸಿದರು.

ಪ್ರಕರಣವೇನು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಮಠ ಗ್ರಾಮದ ಮಾಲತಿ ಶೆಟ್ಟಿಯವರು 2015ರ ಜೂನ್ 26ರಂದು ತಮ್ಮ ಮನೆಯಿಂದ ಕಾಣೆಯಾಗಿದ್ದರು. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಈವರೆಗೂ ಆಕೆಯನ್ನು ಪತ್ತೆ ಮಾಡಿಲ್ಲ. ಇದರಿಂದ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ. ಈ ಮಧ್ಯೆ ಅಮೆರಿಕಾದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಮಾಲತಿ ಶೆಟ್ಟಿಯವರ ಪುತ್ರ ಸತೀಶ್ ಶೆಟ್ಟಿ, ಕುಂದಾಪುರಕ್ಕೆ ಆಗಮಿಸಿ ತಾಯಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ನಂತರ ತಾಯಿಯ ಪತ್ತೆಗೆ ಮಾಮ್‌ಮಿಸ್ಸಿಂಗ್ ಎಂಬ ಹೆಸರಿನಲ್ಲಿ ವೆಬ್‌ಸೈಟ್ ರಚಿಸಿ, ತಾಯಿಯನ್ನು ಪತ್ತೆ ಹಚ್ಚಿದವರಿಗೆ ಒಂದು ಲಕ್ಷ ರೂ. ಬಹುಮಾನ ಸಹ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News