‘ಸಂವಿಧಾನ ಓದು’ ಪುಸ್ತಕ ಎಲ್ಲ ಶಾಲಾ, ಕಾಲೇಜುಗಳಲ್ಲಿ ಇರಬೇಕಾಗಿದೆ: ಜಿ.ಟಿ.ದೇವೇಗೌಡ

Update: 2018-09-07 16:57 GMT

ಬೆಂಗಳೂರು, ಸೆ.7: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬರೆದಿರುವ ‘ಸಂವಿಧಾನ ಓದು’ ಪುಸ್ತಕವನ್ನು ರಾಜ್ಯದ ಎಲ್ಲ ಸರಕಾರಿ ಶಾಲಾ, ಕಾಲೇಜುಗಳು ಮತ್ತು ಗ್ರಂಥಾಲಯಗಳಲ್ಲಿ ಇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಬೆಂಗಳೂರು ವಕೀಲರ ಸಂಘದಿಂದ ಶುಕ್ರವಾರ ಸಿಟಿ ಸಿವಿಲ್ ಕೋರ್ಟ್‌ನ ವಕೀಲರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂವಿಧಾನದ ಎಲ್ಲ ಆಯಾಮಗಳ ಕುರಿತು ಮಾಹಿತಿ ಒದಗಿಸುವ ಇಂತಹ ಪುಸ್ತಕ ವಿಶೇಷವಾಗಿ ಯುವಪೀಳಿಗೆ, ವಿದ್ಯಾರ್ಥಿ ಸಮೂಹ ಓದಬೇಕು. ಅದಕ್ಕಾಗಿ ಎಲ್ಲ ಸರಕಾರಿ ಶಾಲಾ-ಕಾಲೇಜುಗಳು, ಗ್ರಂಥಾಯಲಗಳಲ್ಲಿ ಈ ಪುಸ್ತಕ ಸಿಗಬೇಕು. ಎಷ್ಟು ಪುಸ್ತಕಗಳು ಬೇಕು ಅನ್ನುವುದನ್ನು ಅಧಿಕಾರಿಗಳ ಜತೆ ಚರ್ಚಿಸಿ ಹೇಳುತ್ತೇನೆ. ಹೆಚ್ಚುವರಿ ಪುಸ್ತಕಗಳು ಬೇಕಾದರೆ ನಾನೇ ಮುದ್ರಣ ಮಾಡಿಸುತ್ತೇನೆ ಎಂದೂ ಸಹ ಭರವಸೆ ನೀಡಿದರು.

ಸಂವಿಧಾನ ಓದದೇ ಇರುವುದರಿಂದ, ಓದಿದರೂ ಅರ್ಥ ಮಾಡಿಕೊಳ್ಳದ ಕಾರಣಕ್ಕೆ ಇಂದು ಸಮಾಜದಲ್ಲಿ ಇಷ್ಟೊಂದು ಗೊಂದಲಗಳು ನಿರ್ಮಾಣವಾಗುತ್ತಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಸಂವಿಧಾನದ ಮೂಲಕ ಗಟ್ಟಿಯಾದ ಸಾಮಾಜಿಕ ತಳಪಾಯ ಹಾಕಿಕೊಟ್ಟು ಹೋಗಿದ್ದಾರೆ. ಅದನ್ನು ನಂಬಿಕೆ, ಆತ್ಮವಿಶ್ವಾಸದಿಂದ ಮುನ್ನೆಡೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಮಾತನಾಡಿ, ಎಲ್ಲ ಸರಕಾರಿ ಶಾಲಾ-ಕಾಲೇಜು ಮತ್ತು ಗ್ರಂಥಾಯಲಗಳಲ್ಲಿ ‘ಸಂವಿಧಾನ ಓದು’ ಪುಸ್ತಕ ಲಭ್ಯವಾಗುವಂತೆ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಅದೇ ರೀತಿಯಲ್ಲಿ ಬಿಬಿಎಂಪಿಯ ಗ್ರಂಥಾಲಯ ಮತ್ತು ಕಾಲೇಜುಗಳಲ್ಲೂ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ನ್ಯಾ. ಎಚ್.ಎನ್. ನಾಗಮೋಹನ್‌ದಾಸ್ ಮಾತನಾಡಿ, ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಕಾಯ್ದೆ-ಕಾನೂನುಗಳಿವೆ. ಅವುಗಳಿಗೆಲ್ಲಾ ಸಂವಿಧಾನವೇ ತಾಯಿ. ಹಾಗಾಗಿ ವೃತ್ತಿ ಜೀವನದಲ್ಲಿ ಪ್ರತಿನಿತ್ಯ ಕಾಯ್ದೆ-ಕಾನೂನುಗಳನ್ನು ವ್ಯಾಖ್ಯಾನಿಸುವ ವಕೀಲರು ಸಂವಿಧಾನವನ್ನು ಓದಿ, ಅರ್ಥೈಸಿಕೊಳ್ಳಬೇಕು. ವಿಶೇಷವಾಗಿ ಅಧೀನ ನ್ಯಾಯಾಲಯಗಳ ವಕೀಲರು ಈ ಬಗ್ಗೆ ಹೆಚ್ಚು ಗಮನ ಕೊಡಬೇಕು. ಸಂವಿಧಾನ ಒಂದು ಕಾದಂಬರಿ ಅಥವಾ ಕವಿತೆಯಲ್ಲ. ಅದು ದೇಶವನ್ನು ಮುನ್ನಡೆಸುವ ಒಂದು ಕಾರ್ಯಕ್ರಮವಾಗಿದೆ. ಈಗಿನ ಎಲ್ಲ ಸಮಸ್ಯೆಗಳಿಗೆ ಸಂವಿಧಾನದತ್ತ ಬೊಟ್ಟು ಮಾಡುವುದು ತಪ್ಪು. ಸಂವಿಧಾನ ಅರ್ಥ ಮಾಡಿಕೊಳ್ಳದೇ ದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶ ಅರ್ಥ ಮಾಡಿಕೊಳ್ಳಬೇಕಾದರೆ, ದೇಶದ ಇತಿಹಾಸ ಅರ್ಥ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News