ರಥಚಕ್ರಗಳ ನಡುವೆ ಸಮನ್ವಯ ಅಗತ್ಯ

Update: 2018-09-07 18:38 GMT

ಪ್ರಜಾಪ್ರಭುತ್ವದ ಪರಿಕಲ್ಪನೆ, ಇಂದು ಕೇವಲ ಸರಕಾರ ರಚನೆಗಾಗಿ ನಡೆವ ಚುನಾವಣೆಗಷ್ಟೇ ಸೀಮಿತವಾಗಿಲ್ಲ. ಎರಡು ದಶಕಗಳಿಂದೀಚೆಗೆ ನಡೆದ ಚುನಾವಣೆಗಳ ಜನಾದೇಶ ಗಮನಿಸಿದರೆ ಜನರು ಶೈಕ್ಷಣಿಕ ಹಾಗೂ ಮಾಧ್ಯಮ ಜಾಗೃತಿಯಿಂದಾಗಿ ಸೂಕ್ಷಮತಿಗಳಾಗಿರುವುದಂತೂ ಸ್ಪಷ್ಟ. ಭಾರತದ ರಾಜಕೀಯ, ಶೈಕ್ಷಣಿಕ ಕಾಲಘಟ್ಟದಲ್ಲಾದ ಗಣನೀಯ ಪ್ರಗತಿಯಿಂದ ಮತದಾರರಲ್ಲಿ ‘ಯಾರು ಹಿತವರು ನಿನಗೆ ಈ ಮೂವರೊಳಗೆ’ ಎನ್ನುವ ವಿವೇಚನೆ ಮೂಡಿದೆ.

ಮತದಾರರು, ರಾಜಕಾರಣಿಗಳ ನಡಾವಳಿಗಳನ್ನು, ಅಧಿಕಾರದಾಹವನ್ನು ವಿಶ್ಲೇಷಿಸುವ ಸೂಕ್ಷ್ಮಗ್ರಹಿಕೆ, ಜಾಗೃತಿಯ ವೀಕ್ಷಕರಾಗಿದ್ದಾರೆ. ಈ ಕಾರಣದಿಂದಲೇ ಏಕಪಕ್ಷ್ಷಾಧಿಕಾರಕ್ಕೆ ರಾಜಕೀಯ ಪಕ್ಷಗಳು ಹೆಣಗಾಡುವಂತಾಗಿದೆ. ಸಮ್ಮಿಶ್ರ ಸರಕಾರಗಳು ಅನಿವಾರ್ಯವಾಗಿವೆ. ರಾಜಕಾರಣಿಗಳ ಏಕಸ್ವಾಮ್ಯತೆಗೆ ಕೊಡಲಿ ಪೆಟ್ಟು ಬೀಳುತ್ತಿದೆ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಬೀಗುತ್ತಿದ್ದ ಪಕ್ಷಗಳು ಬಾಲ ಮುದುರಿಕೊಳ್ಳುವಂತಾಗಿದೆ.

ಅಧಿಕಾರ ಹಿಡಿಯುವಲ್ಲಿ ಪ್ರಾದೇಶಿಕ ಶಕ್ತಿಗಳ ನಿರ್ಲಕ್ಷಿಸಲಾಗದ ಪರಿಸ್ಥಿತಿ ಎದುರಾಗಿದೆ. ರಾಜಕೀಯ ಸಮತೋಲನ ಕಾಯ್ದುಕೊಳ್ಳುವಂತಾಗಿದೆ. ಮೂರು ತಿಂಗಳ ಹಿಂದಷ್ಟೇ ನಡೆದ ಕರ್ನಾಟಕದ 2018ರ ಚುನಾವಣೆ ಇವೆಲ್ಲ ಬೆಳವಣಿಗೆಗಳಿಗೆ ನಿದರ್ಶನವಾಗಿದೆ. ಅತಂತ್ರ ವಿಧಾನಸಭೆಯಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಉದಯವಾಗಿ ಎಚ್. ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಹಗ್ಗಜಗ್ಗಾಟದಲ್ಲಿ ಶತದಿನೋತ್ಸವ ಪೂರೈಸಿದ್ದಾರೆ. ಈ ಹಿಂದೆ 2006ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರಕಾರ ನಡೆಸಿ ಸೈ ಎನಿಸಿಕೊಂಡಿದ್ದ ಕುಮಾರಸ್ವಾಮಿ ಮತ್ತೊಮ್ಮೆ ಸರಕಾರದ ಸಾರಥ್ಯ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಬೇಷರತ್ ಬೆಂಬಲ ಘೋಷಿಸಿದ್ದರಿಂದ ಮೇ 23ರಂದು 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸಮಾರಂಭ ಮಿತ್ರ ಪಕ್ಷಗಳ ಸಮಾಗಮದ ವೇದಿಕೆಯಾಗಿ ಗೋಚರಿಸಿತ್ತು. ಬಿಜೆಪಿಯ ದಕ್ಷಿಣದ ಅಶ್ವಮೇಧಯಾಗ ಕುದುರೆಯನ್ನು ಕರ್ನಾಟಕದ ಮಿತ್ರಪಕ್ಷಗಳು ಕಟ್ಟಿಹಾಕಿರುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು. ಅಂದಿನ ಮಿತ್ರ ಪಕ್ಷಗಳ ಸಮಾಗಮವು ಬಿಜೆಪಿಯ ಏಕಸ್ವಾಮ್ಯದ ಕೇಂದ್ರ ನಾಯಕತ್ವಕ್ಕೆ ಎಚ್ಚರಿಕೆ ಗಂಟೆ ಬಾರಿಸಿತ್ತು.

ಅಧಿಕಾರಕ್ಕಾಗಿ ಕಾಲೆಳೆತ:

ಬಿಜೆಪಿಯ ಯಡಿಯೂರಪ್ಪಅಧಿಕಾರ ತಪ್ಪಿದ ಆಕ್ರೋಶದಲ್ಲಿ ತನ್ನ ಹೋರಾಟ ಜೆಡಿಎಸ್‌ನ ಅಪ್ಪಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್‌ನ ವಿರುದ್ಧವಲ್ಲವೆಂದು ಸದನದಲ್ಲಿಯೇ ಗುಡುಗಿದ್ದರು. ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ನೆಡೆಗಿನ ಈ ಮೆದು ಧೋರಣೆ ಕೇಂದ್ರ ಬಿಜೆಪಿ ವರಿಷ್ಠರಿಗೇ ಮುಜುಗರ ತರಿಸಿತ್ತು. ರಾಜ್ಯ ಬಿಜೆಪಿ ಪರಿವಾರ ಜೆಡಿಎಸ್ ಪ್ರಣಾಳಿಕೆಯಲ್ಲಿನ ಸಾಲಮನ್ನಾ ಘೋಷಣೆಯನ್ನೇ ನೆಪಮಾಡಿ ಸರಕಾರವನ್ನು ರೈತರೆದುರಿಗೆ ಎತ್ತಿಕಟ್ಟಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಮಾಡಿತ್ತು. ಸಾಲಮನ್ನಾ ಮಾಡದಿದ್ದರೆ ಉಗ್ರ ಪ್ರತಿಭಟನೆ ಬಿಸಿತಾಗಿಸುವುದಾಗಿ ಯಡಿಯೂರಪ್ಪ ಕಲ್ಲೆಸೆದಿದ್ದರು. ಬಜೆಟ್‌ನಲ್ಲಿ ಉತ್ತರ ಹಾಗೂ ಕರಾವಳಿ ಕರ್ನಾಟಕದ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಸರಕಾರದ ವಿರುದ್ಧ ಮತ್ತೊಂದು ಆಕ್ರೋಶ ಮೂಡಿಸಲು ಬಿಜೆಪಿ ಪ್ರಯತ್ನಿಸಿತ್ತು. ಸಮ್ಮಿಶ್ರ ಸರಕಾರಕ್ಕೆ ಮುಜುಗರ ತರುವ ಪ್ರಯತ್ನಗಳ ವಿರುದ್ಧ ರಕ್ಷಣಾತ್ಮಕ ನಡೆ ಅನುಸರಿಸಿದ ಮುಖ್ಯಮಂತ್ರಿ ಸಾಲ ಮನ್ನಾಮಾಡುವುದಾಗಿ ರೈತರಲ್ಲಿ ಭರವಸೆ ಮೂಡಿಸಿದ್ದರು.

ಸದನದಲ್ಲಿ ಅಂಕಿ ಅಂಶಗಳ ಸಮೇತ ಜಿಲ್ಲಾವಾರು ಅನುದಾನ ವಿವರ ಪ್ರಸ್ತಾಪಿಸಿ ಯಾವ ಜಿಲ್ಲೆಗಳನ್ನೂ ಕಡೆಗಣಿಸಲಾಗಿಲ್ಲ ಎಂದು ವಿರೋಧಿಗಳ ಬಾಯಿಮುಚ್ಚಿಸಿದ್ದರು ಕುಮಾರಸ್ವಾಮಿ. ಎರಡು ಪಕ್ಷಗಳ ಪ್ರಣಾಳಿಕೆಗಳನ್ನೂ ಸಮ್ಮಿಳಿತಗೊಳಿಸಿ, ರಾಜ್ಯದ ರೈತರ ರೂ. ಒಂದು ಲಕ್ಷವರೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿನ 49 ಸಾವಿರ ಕೋಟಿ ರೂ. ಸಾಲಮನ್ನಾ ಘೋಷಿಸಿ ಕುಮಾರಸ್ವಾಮಿ ರಾಜಕೀಯ ಪ್ರಬುದ್ಧತೆಗೆ ಸಾಕ್ಷಿಯಾದರು. ಅಲ್ಲದೆ ತೀರ ಇತ್ತೀಚಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸುಸ್ತಿ ಸಾಲಮನ್ನಾ ಜತೆಗೆ ಸಂಪುಟ ವಿಸ್ತರಣೆಯ ನಂತರ ಉಂಟಾಗಿದ್ದ ಆಂತರಿಕ ಅಸಹನೆಯನ್ನು ಕಡಿಮೆಗೊಳಿಸಿ ಕುಮಾರಸ್ವಾಮಿ ರಾಜಕೀಯ ಜಾಣ್ಮೆ ಪ್ರದರ್ಶಿಸಿದರು. ಮೀಟರ್ ಬಡ್ಡಿದಂಧೆೆಗೆ ಕಡಿವಾಣ ಹಾಕಲು ಸರಕಾರದಿಂದಲೇ ದೈನಂದಿನ ಸಾಲ, ಲೇವಾದೇವಿ ವ್ಯವಹಾರಗಳ ವಿರುದ್ಧ ರೈತರಿಗೆ ರಕ್ಷಣೆ ಒದಗಿಸಲು ಸುಗ್ರೀವಾಜ್ಞೆಗೆ ಕ್ರಮ, ಚಿನ್ನಾಭರಣ ಸಾಲಗಳ ಮೇಲೆ ನಾನ್‌ಬ್ಯಾಂಕಿಂಗ್ ಫೈನಾನ್ಸ್ ಸಂಸ್ಥೆಗಳ ವಿಪರೀತ ಬಡ್ಡಿ ಅಕ್ರಮವ್ಯವಹಾರಕ್ಕೆ ಕಡಿವಾಣ ಇವು ಕುಮಾರಸ್ವಾಮಿ ಸರಕಾರದ ದಿಟ್ಟನಿಲುವುಗಳು. ಇಲ್ಲಿ ದೇವೇಗೌಡರ ಮಾರ್ಗದರ್ಶನವನ್ನು ಮರೆವಂತಿಲ್ಲ.

ಒಂದೆಡೆ ಈ ಐತಿಹಾಸಿಕ ನಿರ್ಣಯಗಳನ್ನು ಜನತೆ ಪ್ರಶಂಸಿದರೆ ಇನ್ನೊಂದೆಡೆ ಸಮ್ಮಿಶ್ರ ಸರಕಾರದಲ್ಲಿನ ಅಸಹನೆ ಹಾಗೂ ಭಿನ್ನ್ನಾಭಿಪ್ರಾಯಗಳಿಂದಾಗಿ ತೆಗಳಿಕೆಯನ್ನೂ ಎದುರಿಸುವಂತಾಗಿದೆ. ಜೆಡಿಎಸ್‌ನ ರೇವಣ್ಣನವರಿಂದ ಆಡಳಿತದ ಆಂತರಿಕ ಹಸ್ತಕ್ಷೇಪ ವಾಗುತ್ತಿದೆ ಎಂದು ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರು ಕೆರಳಿದ್ದಾರೆ. ಇಂಧನ ಖಾತೆ ಹಂಚಿಕೆಯಲ್ಲಿ ಜೆಡಿಎಸ್‌ನ ರೇವಣ್ಣ ನಡೆಸಿದ್ದ ಲಾಬಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಕುಮಾರಸ್ವಾಮಿ ಹಾಗೂ ದೇವೇಗೌಡ ಸೂಕ್ಷ್ಮ ಗ್ರಹಿಕೆಯಿಂದಾಗಿ ಇಂಧನ ಖಾತೆಯ ಕ್ಯಾತೆ ತಹಬದಿಗೆ ಬಂದಿದೆ. ಆದರೆ ಇಲ್ಲಿ ಸುಲಲಿತ ಮೈತ್ರಿಗೆ ರೇವಣ್ಣನವರ ಸ್ವಯಂ ನಿಗ್ರಹವೂ ಅವಶ್ಯ.

ಇತ್ತ ಕಾಂಗ್ರೆಸ್‌ನ ಆರಂಭ ಶೂರತ್ವ ಮರೆಯಾದಂತಿದೆ. ಕಾಂಗ್ರೆಸ್ ಭಿನ್ನಮತೀಯರು ಸರಕಾರದ ವಿರುದ್ಧ ಟೀಕಿಸುತ್ತಾ ಕುಮಾರಸ್ವಾಮಿ ಕಾಲೆಳೆಯುವ ದುಸ್ಸಾಹಸದಲ್ಲಿಯೂ ಮುಂಚೂಣಿ ಸ್ಪರ್ಧೆೆಯಲ್ಲಿದ್ದಾರೆ. ಮತೀಯ ಶಕ್ತಿಗಳನ್ನು ದೂರವಿಟ್ಟು ಪ್ರಜಾಪ್ರಭುತ್ವ ರಕ್ಷಣೆಗಾಗಿಯೇ ಬೇಷರತ್ ಮೈತ್ರಿ ಎಂದಿತ್ತು ಕಾಂಗ್ರೆಸ್. ಮೊದಲು ಬೇಷರತ್ ಬೆಂಬಲ ನೀಡಿ ನಂತರದಲ್ಲಿ ಹಲವಾರು ಷರತ್ತುಗಳನ್ನು ಮುಂದಿಟ್ಟು ಬೇಡಿಕೆ ಪೂರೈಸಿಕೊಳ್ಳುವಲ್ಲಿಯೂ ಕಾಂಗ್ರೆಸ್ ಯಶ ಕಂಡಿದೆ. ಕಾಂಗ್ರೆಸ್ ಹೈಕಮಾಂಡ್‌ನ ಮೈತ್ರಿ ನಿರ್ಧಾರವನ್ನೇ ಪ್ರಶ್ನಿಸುವಂತೆ ಸಮ್ಮಿಶ್ರ ಸರಕಾರದ ವಿರುದ್ಧ ಅಸಮಾಧಾನದ ಹೊಗೆಯಾಡಿಸಿ ಬಿಜೆಪಿ ಪಾಳಯದ ಟೀಕೆಗಳಿಗೆ ಬಲ ತಂದುಕೊಟ್ಟದೆ. ಇವೆಲ್ಲಾ ಹಗ್ಗಜಗ್ಗಾಟದ ನಡುವೆ ಸರಕಾರ ಬಿದ್ದರೆ ತಾನು ಸರಕಾರ ರಚಿಸಬಹುದೇ ಎಂದು ಬಿಜೆಪಿ ಸಹಜವಾಗಿಯೇ ಕಾದುಕುಳಿತಿದೆ.

ಆದರೆ ಹಿಂದಿನ 2006ರ ಬಿಜೆಪಿ ಜೆಡಿಎಸ್ ಮೈತ್ರಿಯ ಕುಮಾರಸ್ವಾಮಿ ನೇತೃತ್ವದ ಸರಕಾರ ಕಾಂಗ್ರೆಸ್ ಆರೋಪಿಸುವ ಮತೀಯ ಶಕ್ತಿ ಹಣೆಪಟ್ಟಿಯಿಂದ ಹೊರತಾಗಿ ಸ್ಪಂದನಾಶೀಲತೆಯಿಂದ ಕೆಲಸ ಮಾಡಿದ್ದನ್ನು ಹೀಗಳೆಯುವಂತಿಲ್ಲ. ಇದರಿಂದಾಗಿ ಕುಮಾರಸ್ವಾಮಿ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು. ಇಂದು ಕಾಂಗ್ರೆಸ್ ಇರುವ ಸ್ಥಿತಿಯಲ್ಲಿ ಅಂದು ಬಿಜೆಪಿ ಇತ್ತು. ಅಂತಹ ಸಂದರ್ಭ ಬಿಜೆಪಿ-ಜೆಡಿಎಸ್ ಮೈತ್ರಿಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ ಬಿಜೆಪಿಯಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯಗಳು ಇಂದಿನಂತೆ ಬಹಿರಂಗ ಅಸಮಾಧಾನದ ರೂಪ ಪಡೆದಿರಲಿಲ್ಲ. ಅಂದಿನ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಈಗ ಬಿಜೆಪಿಯಂತೆ ವಿಪರೀತ ಜಿದ್ದಾಜಿದ್ದಿಗೆ ಬಿದ್ದಿರಲಿಲ್ಲ. ಅಂದು ಅನಂತಕುಮಾರ್ ಆ್ಯಂಡ್ ಟೀಮ್ ಯಡಿಯೂರಪ್ಪವಿರುದ್ಧ ಹೆಚ್ಚು ಸಕ್ರಿಯವಾಗಿತ್ತೇ ಹೊರತು ಜೆಡಿಎಸ್‌ನ ಕುಮಾರಸ್ವಾಮಿಯವರನ್ನು ಅಷ್ಟಾಗಿ ಗುರಿಯಾಗಿಸಿರಲಿಲ್ಲ. ಆದರೆ ಈಗಿನ ಮೈತ್ರಿ ಸರಕಾರದ ಪರಿಸ್ಥಿತಿಯೇ ಬೇರೆ. ಒಂದೆಡೆ ಬಿಜೆಪಿ ಎಡತಾಕುತ್ತಿದ್ದರೆ, ಕಾಂಗ್ರೆಸ್ ಭಿನ್ನಮತೀಯರು ಕುಮಾರಸ್ವಾಮಿಯನ್ನೇ ಗುರಿಯಾಗಿಸಿದ್ದಾರೆ. ಅದರೆ ಇದು ಮಿತಿಮೀರಿದರೆ ಮೈತ್ರಿಗೆ ಹಾನಿಯಾಗಲಿದೆ.

ಕಾಂಗ್ರೆಸ್ ಈ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ 78 ಸ್ಥಾನಗಳಿಗೆ ಸೀಮಿತವಾಗಿದ್ದರೂ ಪಡೆದ ಮತಗಳಿಕೆ ಶೇ. 38 ಆಗಿದ್ದು ಬಿಜೆಪಿಗಿಂತಲೂ ಹೆಚ್ಚು ಹಾಗೂ 2013ರ ಮತಗಳಿಕೆಗಿಂತಲೂ ಹೆಚ್ಚು. ಇದು ಕಾಂಗ್ರೆಸ್‌ಗೆ ಆಶಾದಾಯಕ. ಹೀಗಿರುವಾಗ ಭಿನ್ನ ಮತೀಯ ಚಟುವಟಿಕೆಗಳು ಹೆಚ್ಚಾಗಿ ಮೈತ್ರಿ ಸರಕಾರಕ್ಕೆ ಧಕ್ಕೆ ಆದರೆ ಲೋಕಸಭೆ ಚುನಾವಣೆ ಹತ್ತಿರವಿರುವುದರಿಂದ ಕಾಂಗ್ರೆಸ್‌ನ ಅಸ್ತಿತ್ವಕ್ಕೆ ಸಂಚಕಾರವಾಗುವ ಬೆಳೆವಣಿಗೆಗೆ ಕಾರಣವಾಗಲಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವದ ಸಮತೋಲನ ದೃಷ್ಟಿಯಿಂದಲೂ ಮಾರಕ. ಸಮ್ಮಿಶ್ರ ಪರಿಕಲ್ಪನೆಗೆ ಸಂವಿಧಾನದ ಹೊಸ ಭಾಷ್ಯ ಅಗತ್ಯ: ಸರಕಾರ ರಚನೆಯ ಸಂದರ್ಭ ಬಹುಮತ ಪಡೆಯುವ ಸಂಖ್ಯಾಬಲವೇ ಪ್ರಮುಖವಾಗಬೇಕು. ಬಹುಮತವಿರುವ ಮೈತ್ರಿಗೆ ರಾಜ್ಯಪಾಲರು ಆಹ್ವಾನ ನೀಡುವುದೇ ಸಂವಿಧಾನಿಕವಾಗಿಯೂ ನ್ಯಾಯಬದ್ಧಕ್ರಮ. ಹೀಗೆ ಮೈತ್ರಿ ಸರಕಾರ ರಚನೆಯಾದರೂ ಅನಿಶ್ಚಿತತೆ, ಅಭದ್ರತಾ ಭಾವನೆ ಮರೆಯಾಗುವುದಿಲ್ಲ. ಈ ರೀತಿಯ ಅಭದ್ರತೆ ಇದ್ದರೆ ಸರಕಾರದ ಆಡಳಿತಯಂತ್ರಕ್ಕೆ ಅಡಚಣೆ ಉಂಟಾಗುತ್ತದೆ. ಇದು ಪ್ರಜಾಪ್ರಭುತ್ವ ವಿಫಲತೆಯ ದಾರಿಹಿಡಿಯಲು ಕಾರಣವಾಗುತ್ತದೆ. ಆದ್ದರಿಂದಲೇ ಮುಂದಿನ ದಿನಗಳಲ್ಲಿ ಹೆಚ್ಚು ಕಾಣಬಹುದಾದ ಸಮ್ಮಿಶ್ರ ಸರಕಾರದ ಪರಿಕಲ್ಪನೆಗೆ ಸಂವಿಧಾನ ಹೊಸ ಭಾಷ್ಯ ಬರೆಯಬೇಕಿದೆ.

ಹೇಗೆ ಪ್ರಜೆಗಳು ಒಮ್ಮೆ ಮಾಡಿದ ಮತದಾನವನ್ನು ಹಿಂಪಡೆಯಲು ಸಾಧ್ಯವಿಲ್ಲವೋ ಹಾಗೆಯೇ ಸಮ್ಮಿಶ್ರ ಸರಕಾರದ ಪರಸ್ಪರ ಬೆಂಬಲ ಹಾಗೂ ಮುಖ್ಯಮಂತ್ರಿಯ ಆಯ್ಕೆಯನ್ನು ಕನಿಷ್ಠ 3ವರ್ಷಗಳವರೆಗೆ ಮುಂದುವರಿಸಲು ಸಂವಿಧಾನ ನಿರ್ದಾಕ್ಷಿಣ್ಯತೆ ಹೆಚ್ಚಿಸಿಕೊಳ್ಳಬೇಕಿದೆ. ರಾಜಕೀಯ ನಾಯಕರು ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪದೇಪದೇ ಪ್ರಯೋಗಿಸುವ ಅವಿಶ್ವಾಸ ನಿರ್ಣಯವನ್ನು 3ವರ್ಷಗಳ ಕಾಲಮಿತಿ ಹಾಕಿಕೊಳ್ಳಬೇಕಿದೆ. ಒಂದು ವೇಳೆ ಮುಖ್ಯಮಂತ್ರಿ ಭ್ರಷ್ಟದಾರಿ ಹಿಡಿದರೆ ಸೂಕ್ತ ವಾಗ್ದಂಡನಾತ್ಮಕ ಕ್ರಮಗಳ ಮೂಲಕ ಅಧಿಕಾರದಿಂದ ಕೆಳಗಿಳಿಸುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ರಾಜಕೀಯ ದೊಂಬರಾಟ ಹೆಚ್ಚಾಗಿ, ಅಭದ್ರತೆ ಉಂಟಾಗಿ ಮನಸೋಇಚ್ಛೆ ಚುನಾವಣೆಗಳು ನಡೆದು ಆರ್ಥಿಕ ಸ್ಥಿತಿ ಅಯೋಮಯವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಕೊಡಲಿ ಪೆಟ್ಟು ಬೀಳಲಿದೆ.

Writer - ರಘುಪ್ರಸಾದ್ ಜೆ., ಮೈಸೂರು

contributor

Editor - ರಘುಪ್ರಸಾದ್ ಜೆ., ಮೈಸೂರು

contributor

Similar News