ಕೇವಲ 2,000 ರೂ.ವೆಚ್ಚದಲ್ಲಿ ಅಪಘಾತಗಳಿಂದ ಆನೆಗಳನ್ನು ರಕ್ಷಿಸುತ್ತಿರುವ ರೈಲ್ವೆ ಇಲಾಖೆಯ ಪ್ಲಾನ್‌‘ಬೀ’

Update: 2018-09-08 11:02 GMT

ಇತ್ತೀಚಿಗೆ ಈಶಾನ್ಯ ಭಾರತದಲ್ಲಿ ರೈಲುಗಳು ಢಿಕ್ಕಿ ಹೊಡೆದು ಆನೆಗಳು ಸಾವನ್ನಪ್ಪುತ್ತಿರುವುದು ಕಳವಳವನ್ನುಂಟು ಮಾಡಿದೆ. ಈ ಅಮಾಯಕ ಪ್ರಾಣಿಗಳನ್ನು ಸಾವಿನಿಂದ ರಕ್ಷಿಸಲು ನಾರ್ಥ್‌ಈಸ್ಟ್ ಫ್ರಾಂಟಿಯರ್ ರೈಲ್ವೆ(ಎನ್‌ಎಫ್‌ಆರ್) ಕುತೂಹಲಕಾರಿ ಪರಿಹಾರವೊಂದನ್ನು ಕಂಡುಕೊಂಡಿದೆ. ಆನೆಗಳು ರೈಲ್ವೆ ಹಳಿಗಳ ಬಳಿ ಸುಳಿಯದಂತಿರಲು ಪ್ಲಾನ್ ‘ಬೀ’ಯೋಜನೆಗೆ ಭಾರತೀಯ ರೈಲ್ವೆಯು ಇತ್ತೀಚಿಗೆ ಚಾಲನೆ ನೀಡಿದೆ. ಈ ಯೋಜನೆಯಡಿ ಅಸ್ಸಾಮಿನ ಗುವಾಹಟಿ ಪ್ರದೇಶದಲ್ಲಿ ರೈಲುಹಳಿಗಳ ಬಳಿ ಸಾಧನವೊಂದನ್ನು ಅಳವಡಿಸಲಾಗಿದ್ದು,ಇದು ತನ್ನಲ್ಲಿಯ ಧ್ವನಿವರ್ಧಕದ ಮೂಲಕ ಜೇನ್ನೊಣಗಳ ಹಿಂಡಿನ ಗುಂಯ್‌ಗುಡುವ ಶಬ್ದವನ್ನು ಹೊರಡಿಸುತ್ತದೆ. ಆನೆಗಳು, ವಿಶೇಷವಾಗಿ ತಮ್ಮ ಸಂವೇದನಾಶೀಲ ಸೊಂಡಿಲುಗಳಿಗೆ ಜೇನ್ನೊಣಗಳ ಕಡಿತಕ್ಕೆ ಹೆದರಿಕೊಳ್ಳುವುದರಿಂದ ಈ ಶಬ್ದವನ್ನು ಕೇಳಿ ಜೇನ್ನೊಣಗಳ ದಂಡೇ ಇದೆ ಎಂದು ಭಾವಿಸಿ ಹಳಿಗಳ ಸಮೀಪ ಬರುವ ಸಾಹಸ ಮಾಡುವುದಿಲ್ಲ.

ಈ ಸಾಧನದ ಮೂಲಕ ಹೊರಹೊಮ್ಮುವ ಜೇನ್ನೊಣಗಳ ಗುಂಯ್‌ಗುಡುವಿಕೆಯ ಶಬ್ದ 600 ಮೀ.ದೂರದವರೆಗೂ ಸ್ಪಷ್ಟವಾಗಿ ಕೇಳುತ್ತದೆ. ಈ ಅಂತರದೊಳಗಿರುವ ಆನೆಗಳು ಸುಲಭವಾಗಿ ಈ ಶಬ್ದವನ್ನು ಕೇಳಬಲ್ಲವು. ಹೀಗಾಗಿ ತಮ್ಮ ಪಾಲಿಗೆ ಅಪಾಯಕಾರಿಯಾದ ರೈಲ್ವೆ ಹಳಿಗಳ ಸಮೀಪ ಸುಳಿದಾಡಲು ಹಿಂಜರಿಯುತ್ತವೆ ಮತ್ತು ರೈಲುಗಳು ಢಿಕ್ಕಿ ಹೊಡೆದು ಸಾವನ್ನಪ್ಪುವುದರಿಂದ ಪಾರಾಗುತ್ತವೆ. ಕುತೂಹಲದ ವಿಷಯವೆಂದರೆ ಇಂತಹ ಪ್ರತಿಯೊಂದು ಸಾಧನಕ್ಕೆ ರೈಲ್ವೆ ಇಲಾಖೆಯು ಕೇವಲ 2,000 ರೂ.ಗಳನ್ನು ವ್ಯಯಿಸುತ್ತಿದೆ!

 ರೈಲ್ವೆ ಇಲಾಖೆಯ ಅಂಕಿಅಂಶಗಳಂತೆ 2013ರಿಂದೀಚಿಗೆ ರೈಲುಗಳು ಢಿಕ್ಕಿ ಹೊಡೆದು 70 ಆನೆಗಳು ಮೃತಪಟ್ಟಿವೆ. ಎನ್‌ಎಫ್‌ಆರ್ ದಾಖಲೆಗಳಂತೆ 2016ರಲ್ಲಿ 16 ಆನೆಗಳು ಮತ್ತ್ತು 2017ರಲ್ಲಿ ಕನಿಷ್ಠ 12 ಆನೆಗಳು ರೈಲುಗಳಿಗೆ ಬಲಿಯಾಗಿವೆ. ಈ ವರ್ಷದ ಫೆಬ್ರವರಿಯಲ್ಲಿ ಅಸ್ಸಾಮಿನಲ್ಲ್ಲಿ ರೈಲೊಂದು ಆನೆಗಳ ಗುಂಪಿಗೆ ಢಿಕ್ಕಿ ಹೊಡೆದು ನಾಲ್ಕು ಆನೆಗಳು ಸಾವನ್ನಪ್ಪಿದ್ದವು.

ಆನೆಗಳು ತಿರುಗಾಡುವ ಮಾರ್ಗಗಳ ಬಗ್ಗೆ ರೈಲುಗಳ ಚಾಲಕರಿಗೆ ಎಚ್ಚರಿಕೆ ನೀಡಲು ಅಲ್ಲಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದೆ. ಆನೆಗಳನ್ನೊಳಗೊಂಡ ಶೇ.90ರಷ್ಟು ಅಪಘಾತಗಳು ರಾತ್ರಿ 9ರಿಂದ ಬೆಳಿಗ್ಗೆ 7 ಗಂಟೆಯ ನಡುವೆ ಸಂಭವಿಸುತ್ತವೆ. ಆನೆಗಳು ರೈಲುಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಎನ್‌ಎಫ್‌ಆರ್‌ನೊಂದಿಗೆ ಕೈಜೋಡಿಸಿದೆ. ಆನೆಗಳ ಇರುವಿಕೆ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲು ವಾಟ್ಸ್‌ಆ್ಯಪ್ ಗುಂಪನ್ನೂ ರಚಿಸಲಾಗಿದೆ. ಅಲ್ಲದೆ ಈಶಾನ್ಯ ಭಾರತದಾದ್ಯಂತ ಹಲವು ಕಡೆಗಳಲ್ಲಿ ರೈಲುಗಳಿಗೆ ಪ್ರತಿ ಘಂಟೆಗೆ 30ರಿಂದ 50 ಕಿ.ಮೀ.ವೇಗಮಿತಿಯನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News