ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ಅಂಕುರ್ ಮಿತ್ತಲ್‌ಗೆ ಚಿನ್ನ

Update: 2018-09-08 11:59 GMT

ಚಾಂಗ್ವಾನ್(ದ.ಕೊರಿಯಾ), ಸೆ.8: ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಂಕುರ್ ಮಿತ್ತಲ್ ಪುರುಷ ಟ್ರಾಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಶೂಟರ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಇದೇ ವೇಳೆ ಶೂಟಿಂಗ್ ಟೀಮ್ ವಿಭಾಗದಲ್ಲಿ ಭಾರತದ ಶೂಟರ್‌ಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.

   ಶೂಟಿಂಗ್ ವಿಶ್ವಕಪ್‌ನಲ್ಲಿ ಹಲವುಬಾರಿ ಪದಕ ಜಯಿಸಿರುವ ಮಿತ್ತಲ್, ಚೀನಾದ ಯಿಯಾಂಗ್ ಹಾಗೂ ಸ್ಲೋವಾಕಿಯದ ಹ್ಯೂಬರ್ಟ್ ಅಂಡ್ರೆಝ್ 150ರಲ್ಲಿ ತಲಾ 140 ಅಂಕ ಗಳಿಸಿದರು. ಹೀಗಾಗಿ ಶೂಟ್-ಆಫ್ ಮೊರೆ ಹೋಗಲಾಯಿತು. ಶೂಟ್-ಆಫ್‌ನಲ್ಲಿ ಮಿತ್ತಲ್ ಚೀನಾ ಶೂಟರ್‌ರನ್ನು 4-3 ಅಂತರದಿಂದ ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಸ್ಲೋವಾಕಿಯದ ಶೂಟರ್ ಕಂಚಿನ ಪದಕವನ್ನು ಜಯಿಸಿದ್ದಾರೆ.

ಮಿತ್ತಲ್ ಅವರು ಮಾನವ್‌ಜಿತ್ ಸಿಂಗ್ ಸಂಧು ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನ ಶಾಟ್‌ಗನ್ ಇವೆಂಟ್‌ನಲ್ಲಿ ಚಿನ್ನ ಜಯಿಸಿದ ಭಾರತದ ಎರಡನೇ ಶೂಟರ್ ಎನಿಸಿಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಭಿನವ್ ಬಿಂದ್ರಾ, ಸಂಧು, ತೇಜಸ್ವಿನಿ ಸಾವಂತ್ ಹಾಗೂ ಓಂ ಮಿಥರ್ವಾಲ್ ಬಳಿಕ ಚಿನ್ನ ಜಯಿಸಿದ ಭಾರತದ ಐದನೇ ಶೂಟರ್ ಎನಿಸಿಕೊಂಡಿದ್ದಾರೆ.

ಸಹ ಆಟಗಾರರಾದ ಮುಹಮ್ಮದ್ ಅಸಬ್ ಹಾಗೂ ಶಾರ್ದೂಲ್ ವಿಹಾನ್‌ರೊಂದಿಗೆ ಟೀಮ್ ಇವೆಂಟ್‌ನಲ್ಲಿ ಸ್ಪರ್ಧಿಸಿದ ಮಿತ್ತಲ್ 409 ಅಂಕ ಗಳಿಸಿ ಕಂಚಿಗೆ ತೃಪ್ತಿಪಟ್ಟರು. 410 ಅಂಕ ಗಳಿಸಿದ ಚೀನಾ ಮೊದಲ ಸ್ಥಾನ ಪಡೆದರೆ, ಇಟಲಿ(411 ಅಂಕ)ಎರಡನೇ ಸ್ಥಾನ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News