ಭಾರತ ಬಂದ್‌ಗೆ ಜೆಡಿಎಸ್ ಬೆಂಬಲ: ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

Update: 2018-09-08 13:09 GMT

ಬೆಂಗಳೂರು, ಸೆ.8: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಸೆ.10ರಂದು ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್‌ಗೆ ಜೆಡಿಎಸ್ ಪಕ್ಷ ಕೂಡ ಬೆಂಬಲ ವ್ಯಕ್ತಪಡಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಶನಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 10 ಗಂಟೆಗೆ ನಗರದ ಪುರಭವನದ ಮುಂಭಾಗ ಜೆಡಿಎಸ್‌ನ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರವಿದೆ ಎಂಬ ಕಾರಣಕ್ಕಾಗಿ ಭಾರತ್ ಬಂದ್‌ಗೆ ಬೆಂಬಲ ನೀಡುತ್ತಿಲ್ಲ. ಬದಲಾಗಿ ಜನರ ಸಂಕಷ್ಟವನ್ನು ಹೋಗಲಾಡಿಸುವುದಕ್ಕಾಗಿ ಹಾಗೂ ಜನ ಸಾಮಾನ್ಯರ ಬದುಕು ಸುಧಾರಿಸಲಿ ಎಂಬ ಕಾರಣಕ್ಕಾಗಿ ಈ ಬಂದ್‌ನಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಕುಸಿದಿದೆ. ಆರ್ಥಿಕ ಅರಾಜಕತೆ ಎದ್ದು ಕಾಣುತ್ತಿದೆ. ಬ್ಯಾಂಕಿಂಗ್ ವ್ಯವಸ್ಥೆ ಬುಡಮೇಲು ಆಗಿದೆ. ಮಾತಿನಿಂದಲೇ ಮನೆ ಕಟ್ಟುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಡ ಮತ್ತು ಮಧ್ಯಮ ವರ್ಗದವರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೊಸದಿಲ್ಲಿಯಲ್ಲಿ ಹಾಗೂ ನಾನು ಮೈಸೂರು ವಿಭಾಗದಲ್ಲಿ ನಡೆಯುವ ಬಂದ್‌ನಲ್ಲಿ ಭಾಗವಹಿಸಲಿದ್ದೇವೆ ಎಂದು ಹೇಳಿದರು.

ಜನತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ಅವರಲ್ಲಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಅವರು ದೊಡ್ಡ ಮಟ್ಟದ ವೈಫಲ್ಯ ಅನುಭವಿಸಿದ್ದಾರೆ. ಗೋಮಾತೆ ಎಂದು ಪದೇ ಪದೇ ಬಿಜೆಪಿ ನಾಯಕರು ಮಾತನಾಡುತ್ತಾರೆ. ಆದರೆ, ಗೋಮಾಂಸ ಶೇ.10ರಷ್ಟಕ್ಕೂ ಹೆಚ್ಚು ರಫ್ತಾಗುತ್ತಿದೆ ಎಂದು ಹೇಳಿದರು. ಕಾರ್ಪೊರೇಟ್ ಶಕ್ತಿಗಳ ಏಜೆಂಟ್ ಆಗಿ ಕೇಂದ್ರ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ. ಕಪ್ಪು ಹಣಕ್ಕೆ ವಿರಾಮ ಆಡುತ್ತೇನೆ ಎಂದು ಹೇಳಿದ ಪ್ರಧಾನಿ ಅವರು ಹೊಸ ನೋಟುಗಳನ್ನು ಮುದ್ರಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದರು ಎಂದು ಆರೋಪಿಸಿದರು.

ಬಿಎಸ್‌ವೈ ವಿರುದ್ಧ ಕಿಡಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿಯಲ್ಲಿ ಎಲ್ಲರೂ ದೊಡ್ಡ ಹೋರಾಟಗಾರರೇ. ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ವಿರುದ್ಧ ಏಕೆ ಹೋರಾಟ ಮಾಡುತ್ತಿಲ್ಲ. ಅವರೇನು ವೈಶಂಪಾಯನ ಸರೋವರದಲ್ಲಿ ಅಡಗಿದ್ದಾರೆಯೇ ಎಂದು ಕಿಡಿಕಾರಿದರು. ಸಚಿವ ಡಿಕೆಶಿ ಅಷ್ಟೆ ಅಲ್ಲ, ಬೇರೆ ಯಾರಿಗೆ ಅನ್ಯಾಯವಾದರೂ ನಾವು ಅವರ ಪರ ನಿಲ್ಲುತ್ತೇವೆ. ಕೇಂದ್ರ ಸರಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಪ್ರಕಾಶ್, ವಕ್ತಾರ ರಮೇಶ್ ಬಾಬು, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಕೆ.ವಿ.ಅಮರನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News