ಬೆಂಗಳೂರು: ಕಾಲೇಜಿನಲ್ಲಿಯೇ ಗಾಂಜಾ ಮಾರಾಟ; ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಐವರ ಬಂಧನ

Update: 2018-09-08 13:35 GMT

ಬೆಂಗಳೂರು, ಸೆ.8: ಕಾಲೇಜಿನಲ್ಲಿಯೆ ಗಾಂಜಾ ಮಾರಾಟ ಮಾಡುತ್ತಿದ್ದ ಇಂಜಿನಿಯರ್ ವಿದ್ಯಾರ್ಥಿ ಸೇರಿ 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶ ಮೂಲದ ಲಕ್ಷ್ಮಣ್(23), ಕಂಚರಪಾಳ್ಯದ ಮಣಿಕಂಠ(23), ಅನ್ನಸಂದ್ರಪಾಳ್ಯದ ಜುಬೇರ್ ಪಾಷ(32), ರಾಜಾಜಿನಗರದ ಶಿವಪ್ರಸಾದ್(25), ಕುಮಾರಸ್ವಾಮಿ ಲೇಔಟ್ ನಿವಾಸಿ ಶ್ರೇಯಸ್(20) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಎರಡೂವರೆ ಕೆಜಿ ಗಾಂಜಾ, ಒಂದು ಕಾರು, 1500 ರೂ.ನಗದು, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

ಆರೋಪಿ ಮಣಿಕಂಠ ವಿಶಾಖಪಟ್ಟಣದ ಲಕ್ಷ್ಮಣ್ ಎಂಬಾತನಿಂದ ಗಾಂಜಾ ಖರೀದಿಸಿಕೊಂಡು ನಗರದ ಜುಬೇರ್ ಜತೆ ಸೇರಿ ಸಾಫ್ಟ್‌ವೇರ್ ಉದ್ಯೋಗಿಗಳು, ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು. ದಯಾನಂದ್ ಸಾಗರ್ ಕಾಲೇಜಿನಲ್ಲಿ ಇಂಜಿನಿಯರ್ ಓದುತ್ತಿದ್ದ ಶ್ರೇಯಸ್, ಗಾಂಜಾ ವ್ಯಸನಿಯಾಗಿದ್ದು, ಹೆಚ್ಚಿನ ಹಣ ಸಂಪಾದಿಸಲು ಆರೋಪಿ ಶಿವಪ್ರಸಾದ್ ಜತೆ ಸೇರಿ ಗಾಂಜಾ ಖರೀದಿಸಿ ತನ್ನ ಕಾಲೇಜಿನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ಗಾಂಜಾ ವ್ಯಸನಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳೆಲ್ಲರೂ ಸಿಕ್ಕಿಬಿದಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News