ಚಿತ್ರರಂಗದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

Update: 2018-09-08 13:36 GMT

ಬೆಂಗಳೂರು, ಸೆ. 8: ಕನ್ನಡ ಚಿತ್ರರಂಗದ ಒಗ್ಗಟ್ಟು ಪ್ರದರ್ಶಿಸುವ ಎರಡು ದಿನಗಳ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿತ್ರರಂಗದ ಪ್ರತಿಯೊಂದು ವಿಭಾಗಗಳ ಕಲಾವಿದರು, ತಂತ್ರಜ್ಞರು, ನಟ, ನಟಿಯರು, ನಿರ್ದೇಶಕರು ಸೇರಿದಂತೆ ಇಡೀ ಚಿತ್ರರಂಗವೇ ಪಾಲ್ಗೊಳ್ಳಲಿದೆ.

ನಟ ಸುದೀಪ್ ಆಸಕ್ತಿಯಿಂದಾಗಿ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ ರೂಪಗೊಂಡಿದ್ದು, ಎರಡನೇ ಬಾರಿ ಪಂದ್ಯಾವಳಿ ನಡೆಯುತ್ತಿದೆ. ಇಂದು ಮಧ್ಯಾಹ್ನ ಆರಂಭಿಕ ಪಂದ್ಯವಾಗಿ ಸುದೀಪ್ ನಾಯಕತ್ವದ ಕದಂಬ ಲಯನ್ಸ್ ಮತ್ತು ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ ತಂಡಗಳು ಮುಖಾಮುಖಿಯಾಗಿದ್ದವು.

ಬಳಿಕ ರಾತ್ರಿ 8.30ರವರೆಗೂ ನಾಲ್ಕು ಪಂದ್ಯಗಳು ನಡೆದಿದ್ದು, ಇಂದು ಸೆಮಿಫೈನಲ್‌ನಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, 6 ಗಂಟೆಗೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಚಿತ್ರರಂಗದ ಪ್ರಮುಖ ನಟ, ನಟಿಯರು ಕಾರ್ಯಕ್ರಮವನ್ನು ನೀಡಲಿದ್ದಾರೆ. ಅನಂತರ ರಾತ್ರಿ 8.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್, ಚಿತ್ರ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಚಿತ್ರರಂಗದ ಅನೇಕರು ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News