ಮೋದಿ ಸರಕಾರದಿಂದ 11 ಲಕ್ಷ ಕೋಟಿ ರೂ. ಲೂಟಿ: ದಿನೇಶ್ ಗುಂಡೂರಾವ್

Update: 2018-09-08 14:17 GMT

ಬೆಂಗಳೂರು, ಸೆ.8: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರವು 11 ಲಕ್ಷ ಕೋಟಿ ರೂ.ಲೂಟಿ ಮಾಡಿರುವುದಲ್ಲದೇ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಏರಿಸಿ ಜನ ಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಹಾಗೂ ಅಧಿಕಾರಕ್ಕೆ ಬಂದ ನಂತರ ಭಾರತದ ಶ್ರೀಮಂತರು ವಿದೇಶದಲ್ಲಿ ಇಟ್ಟಿರುವ ಕಪ್ಪು ಹಣವನ್ನು ವಾಪಸ್ ತರುತ್ತೇವೆ. ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸುತ್ತೇವೆ ಸೇರಿದಂತೆ ಹಲವು ಆಶ್ವಾಸನೆಗಳನ್ನು ನೀಡಿದ್ದರು. ಆದರೆ, ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದರೂ ದೇಶದ ಯಾವುದೆ ಸಮಸ್ಯೆಗಳೂ ಬಗೆ ಹರಿಯಲಿಲ್ಲ. ಇದರ ಜೊತೆಗೆ ಪೆಟ್ರೋಲ್, ಡಿಸೇಲ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿ ಸಾಮಾನ್ಯ ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಹೀಗಾಗಿ, ಎನ್‌ಡಿಎ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಸೆ.10ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ ಎಂದು ತಿಳಿಸಿದರು.

2014ರ ಮೇ 16ರಂದು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 1 ಬ್ಯಾರಲ್‌ಗೆ 107.09 ಇತ್ತು. ಆದರೆ, ಈಗ ಅದರ ಬೆಲೆ 73 ಕ್ಕೆ ಇಳಿದಿದೆ. ಅಂದರೆ ಶೇ.40ರಷ್ಟು ಬೆಲೆ ಕಡಿಮೆಯಾಗಿದೆ. ಆದರೂ ಮೋದಿ ಸರಕಾರವು ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಏರಿಸುತ್ತಲೇ ಬಂದು ಕಾರ್ಪೊರೇಟ್ ಶಕ್ತಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಸಂಘಟಿತ ವಲಯವನ್ನು ಬೀದಿಗೆ ತಳ್ಳುತ್ತಿದ್ದಾರೆ. ಅಲ್ಲದೆ, ರೈತರಿಗೆ ಯಾವುದೆ ರೀತಿಯ ಸಹಾಯವನ್ನೂ ಮಾಡಿಲ್ಲ ಎಂದು ಕಿಡಿಕಾರಿದರು.

ಅಡಿಗೆ ಅನಿಲದ ಸಿಲೆಂಡರ್‌ನ ಬೆಲೆ ಮೇ 2014ರಲ್ಲಿ 414 ರೂಪಾಯಿ ಇತ್ತು. ಇಂದು 754 ರೂ.ಗೆ ಏರಿದೆ. ಅಂದರೆ ಪ್ರತಿ ಸಿಲೆಂಡರ್‌ನ ಬೆಲೆಯು 340 ರೂ.ಹೆಚ್ಚಾಗಿದೆ. ಪಡಿತರ ಪದ್ಧತಿಯಲ್ಲಿ ಪ್ರತಿ ಸಿಲೆಂಡರ್‌ನ ಬೆಲೆ ಮೇ 2014ರಲ್ಲಿ 412 ರೂ.ಇದ್ದದ್ದು, ಇಂದು 496ಕ್ಕೆ ಏರಿದೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪದೇ ಪದೇ ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಜಿಎಸ್‌ಟಿ ಪರಿಮಿತಿಗೆ ತರಬೇಕೆಂದು ಒತ್ತಾಯಿಸುತ್ತಿದ್ದರೂ ಎನ್‌ಡಿಎ ಸರಕಾರವು ಯಾವುದಕ್ಕೂ ಮನ್ನಣೆಯನ್ನು ನೀಡದೆ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತದೆ ಎಂದು ಹೇಳಿದರು.

ಭಾರತೀಯರು ಇಷ್ಟು ದುಬಾರಿ ಹಣವನ್ನು ನೀಡಿ ಪೆಟ್ರೋಲ್, ಡಿಸೇಲ್ ಖರೀದಿಸುತ್ತಿದ್ದರೆ, ಮೋದಿ ಸರಕಾರವು ಡಿಸೇಲ್‌ನ್ನು ಲೀಟರ್‌ಗೆ 34 ರೂ.ನಂತೆ 15 ವಿದೇಶಿ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ, ಪೆಟ್ರೋಲ್‌ನ್ನು ಲೀಟರ್‌ಗೆ 37ರೂ.ನಂತೆ 29 ವಿದೇಶಿ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಅಲ್ಲದೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕಾ, ಮಲೇಷಿಯಾ ಮತ್ತು ಇಸ್ರೇಲ್ ರಾಷ್ಟ್ರಗಳು ನಮ್ಮ ತೈಲಗಳನ್ನು ಖರೀದಿಸುತ್ತಿದ್ದಾರೆ. ಮೋದಿ ಸರಕಾರವು ರಾಷ್ಟ್ರದ ಜನಕ್ಕೆ ಮೋಸ ಮಾಡುತ್ತಲೆ ಇದ್ದಾರೆ. ಅಲ್ಲದೆ, ಮೋದಿ ಅವರು ಯಾವುದೇ ಸಭೆಯನ್ನೂ ಕರೆಯುತ್ತಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.      

ಬೆಂಗಳೂರಿನಲ್ಲಿಯೆ ಏರ್ ಶೋ ನಡೆಸುವುದಾಗಿ ಹೇಳಿದ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. 

ನೀತಿಗೆಟ್ಟ ಪಕ್ಷ ಬಿಜೆಪಿ

ಬಿಜೆಪಿ ಪಕ್ಷ ನೀತಿಗೆಟ್ಟ ಪಕ್ಷವಾಗಿದ್ದು, ಅವರ ಸಿದ್ಧಾಂತಗಳ ವಿರುದ್ಧ ಮಾತನಾಡಿದರೆ ಆ ವ್ಯಕ್ತಿಗಳನ್ನು ಹೆದರಿಸುವ, ಬೆದರಿಸುವ ಕೆಲಸವನ್ನು ಮಾಡುತ್ತಾರೆ. ತಪ್ಪು ಮಾಡಿದವರನ್ನು ಶಿಕ್ಷಿಸಲು ಕಾನೂನು ಇದ್ದರೂ, ಬಿಜೆಪಿ ನಾಯಕರು ಹಾದಿ ಬೀದಿಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿಯುತ್ತಾರೆ. ಇಂತಹ ಹೇಳಿಕೆಗಳನ್ನು ನೀಡಲು ಅವರಿಗೆ ನಾಚಿಕೆ ಆಗುವುದಿಲ್ಲವೆ?

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News