ಸಮ್ಮಿಶ್ರ ಸರಕಾರದಿಂದ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬದಲು: ಬಿಜೆಪಿ ಆರೋಪ

Update: 2018-09-08 14:27 GMT

ಬೆಂಗಳೂರು, ಸೆ.8: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರದಲ್ಲಿ ಪ್ರಜಾತಂತ್ರ ವಿರೋಧಿ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಮನಸ್ಸಿಗೆ ಬಂದಂತೆ ಬದಲಿಸಿರುವುದು ಸಾಕ್ಷಿ ಎಂದು ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.

ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ ವಾರವಷ್ಟೇ(ಸೆ.3ರಂದು) 266 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿತ್ತು. ಆದರೆ, ಕೇವಲ ಮೂರು ದಿನಗಳಲ್ಲಿ ಇತ್ತೀಚೆಗೆ ಚುನಾವಣೆಗಳು ನಡೆದ 25 ಕಡೆಗಳಲ್ಲಿ ಮೀಸಲಾತಿಯನ್ನು ಬದಲಾಯಿಸಲಾಗಿದೆ ಎಂದು ದೂರಿದರು.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಕೊಳಕು ರಾಜಕಾರಣದ ಭಾಗವಾಗಿ ಕಾಂಗ್ರೆಸ್-ಜೆಡಿಎಸ್ ಸರಕಾರ ಈ ನಿರ್ಧಾರ ಕೈಗೊಂಡಿದೆ. ಚುನಾವಣೆಯಲ್ಲಿ ಅಧಿಕಾರ ಮತ್ತು ಹಣ ದುರ್ಬಳಕೆ ಮಾಡಿದಾಗ್ಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತಗಳಿಸುವುದು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ರಾಜ್ಯದ ಮತದಾರರು ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮೂಲಕ ಸರಕಾರ ರಚಿಸಿರುವ ಅವಕಾಶವಾದಿ ರಾಜಕಾರಣದ ವಿರುದ್ಧ ಮತ ಚಲಾಯಿಸಿದ್ದರು. ಆದರೆ, ಮತದಾರರ ಇಚ್ಛೆಗೆ ವಿರುದ್ಧವಾಗಿ ಸ್ಥಳೀಯ ಸಂಸ್ಥೆಗಳಲ್ಲೂ ಅಧಿಕಾರ ಹಿಡಿಯಲು ಕಾಂಗ್ರೆಸ್-ಜೆಡಿಎಸ್ ಮಿತ್ರಕೂಟ ಹೊರಟಿದೆ ಎಂದು ರವಿಕುಮಾರ್ ತಿಳಿಸಿದರು.

ಒಮ್ಮೆ ನಿಗದಿಯಾದ ಮೀಸಲಾತಿಯನ್ನು ರಾಜಕೀಯ ಕಾರಣಗಳಿಗಾಗಿ ಬದಲಾವಣೆ ಮಾಡುವ ಮೂಲಕ ರಾಜ್ಯದ ಮತದಾರರನ್ನು ಸಮ್ಮಿಶ್ರ ಸರಕಾರ ಮೂರ್ಖರನ್ನಾಗಿಸಲು ಹೊರಟಿದೆ. ಬದಲಾವಣೆಗೆ ರೋಸ್ಟರ್ ನಿಗದಿಯಲ್ಲಿ ಉಂಟಾದ ಲೋಪ ಕಾರಣವೆಂದು ಸಬೂಬು ಹೇಳಲಾಗುತ್ತಿದೆ. ಆದರೆ, ಇಂತಹ ಲೋಪವಿದ್ದರೆ ಮೊದಲೇ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ಬರದೆ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಜನರು ಆಶೀರ್ವಾದ ಮಾಡಿದ ಕಡೆಗಳಲ್ಲಿ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡುವ ಏಕೈಕ ಉದ್ದೇಶದಿಂದ ಮಾಡಲಾದ ಮೀಸಲಾತಿ ಬದಲಾವಣೆಗಳನ್ನು ಕೈ ಬಿಟ್ಟು ಸೆ.3ರಂದು ನಿಗದಿಪಡಿಸಿದ ಮೀಸಲಾತಿಯನ್ನೆ ಮುಂದುವರೆಸಬೇಕು ಎಂದು ರವಿಕುಮಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News