ಅಲೆಮಾರಿ ಸಮುದಾಯದ ನಾಯಕರಿಗೆ ದೇವರಾಜ ಅರಸು ಪ್ರೇರಣೆಯಾಗಲಿ: ಎಚ್.ವಿಶ್ವನಾಥ್

Update: 2018-09-08 14:34 GMT

ಬೆಂಗಳೂರು, ಸೆ.8: ಅಲೆಮಾರಿ ಸಮುದಾಯವನ್ನು ಸರ್ವೋತೋಮುಖವಾಗಿ ಅಭಿವೃದ್ಧಿ ಪಡಿಸಲು ಸಮುದಾಯದ ನಾಯಕರಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪ್ರೇರಣೆಯಾಗಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆಶಿಸಿದರು.

ಶನಿವಾರ ಅಲೆಮಾರಿ ಬುಡಕಟ್ಟು ಮಹಾಸಭಾ ನಗರದ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರಿಗೆ ನಾಯಕತ್ವ ತರಬೇತಿ, ಅರಿವು ಕಾರ್ಯಕ್ರಮ ಹಾಗೂ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇವರಾಜ ಅರಸು ದಲಿತರು ಹಾಗೂ ತಬ್ಬಲಿ ಅಲೆಮಾರಿಗಳನ್ನು ಗುರುತಿಸಿ ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಲು ನೆರವಾದರು. ಅಲೆಮಾರಿ ಸಮುದಾಯದ ವೆಂಕಟಪ್ಪ, ಕೆ.ಎಚ್.ರಂಗನಾಥ್‌ರನ್ನು ಮಂತ್ರಿಯನ್ನಾಗಿ ಮಾಡಿದರು. ಭೂ ಸುಧಾರಣೆಯನ್ನು ತಂದು ಈ ಸಮುದಾಯಗಳಿಗೆ ಭೂಮಿಹಕ್ಕು ಕೊಡಿಸಿದರು. ಹೀಗಾಗಿ ಅರಸು ದಾರಿಯಲ್ಲಿ ಅಲೆಮಾರಿ ಸಮುದಾಯದ ನಾಯಕರು ಸಾಗಬೇಕೆಂದು ಅವರು ಸಲಹೆ ನೀಡಿದರು.

ನಾವು ಅಂಬೇಡ್ಕರ್, ಗಾಂಧಿ, ಕೃಷ್ಣರಾಜ ಒಡೆಯರ್, ಅರಸು ಹಾಕಿಕೊಟ್ಟ ಮಾರ್ಗದಲ್ಲಿ ತಳ ಸಮುದಾಯಗಳೆಲ್ಲಾ ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಸಮುದಾಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಬೇಕಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಲೆಮಾರಿಗಳ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು, ಸಮುದಾಯದ ಒಳಿತಿಗೆ ಪ್ರಯತ್ನಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪರಿಷತ್ ಸದಸ್ಯ ಉಗ್ರಪ್ಪ ಮಾತನಾಡಿ, ನಮ್ಮಲ್ಲಿ ಸಾಮಾಜಿಕ ನ್ಯಾಯ ಹೇಳುವವರೆಲ್ಲಾ ಸುಳ್ಳು ಹೇಳುತ್ತಾರೆ. ಪ.ಜಾತಿಯಲ್ಲಿ 101 ಜಾತಿಗಳಿಗೆ ಶೇ.15, 51 ಬುಡಕಟ್ಟುಗಳಿಗೆ ಶೇ.3, ನಗಣ್ಯ ಅಲೆಮಾರಿಗಳಿಗೆ ಶೇ.1 ಮೀಸಲಾತಿಯೂ ಇಲ್ಲವಾಗಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಿಗಬೇಕು. ಅಲೆಮಾರಿಗಳಿಗೆ ಸರಕಾರ ಪ್ರತ್ಯೇಕ ಜಮೀನು ಕೊಂಡು ನೀರಾವರಿ, ಎಲ್ಲಾ ಸೌಲಭ್ಯಗಳನ್ನು ಕೊಟ್ಟು, ತಲಾ 2 ಎಕರೆ ಜಮೀನು ಕೊಟ್ಟರೆ, ಅಲೆಮಾರಿ ಜೀವನವನ್ನು ತೊರೆದು, ಒಂದು ಕಡೆ ನೆಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರಂಗತಜ್ಞ ಹಾಗೂ ಅಲೆಮಾರಿ ಬುಡಕಟ್ಟು ಸಭಾದ ಪ್ರದಾನ ಕಾರ್ಯದರ್ಶಿ ಡಾ.ಎ.ಆರ್.ಗೋವಿಂದಸ್ವಾಮಿ ಮಾತನಾಡಿ, ಸಾಮಾಜಿಕವಾಗಿ ತಬ್ಬಲಿಗಳಾಗಿರುವ ಅಲೆಮಾರಿಗಳಾದ ಹಾವಾಡಿಗರು, ಕರಡಿ ಆಡಿಸುವವರು, ಕೋಲೆ ಬಸವನ ಆಟ, ದೊಂಬರಾಟದವರಿಗೆ ಪ್ರಾಣಿ ದಯಾ ಸಂಘ, ಪೊಲೀಸರು ಹಾಗೂ ಪಟ್ಟಭದ್ರರಿಂದ ರಕ್ಷಣೆ ಒದಗಿಸಿ ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದರು.

ಪಂಚತತ್ವ ಯೋಜನೆಗಳ ಅಡಿಯಲ್ಲಿ ಇವರ ಅಭಿವೃದಿಗೆ ಸರಕಾರ ಮುಂದಾಗಬೇಕು. ಇವರನ್ನು ವೈದ್ಯ ಕಲೆ, ಕರಕುಶಲತೆ, ಪ್ರದರ್ಶನ ಕಲೆ, ಪ್ರಾಣಿ ಸಾಕಾಣಿಕೆ, ನೈಸರ್ಗಿಕ ವಿನ್ಯಾಸದಂತ ಜ್ಞಾನ ಪರಂಪರೆಗಳನ್ನು ಉಳಿಸಿ ಬೆಳೆಸುವುದು ಅಗತ್ಯ. ಪ್ರತಿ ಜಿಲ್ಲೆಯಲ್ಲೂ ಅಲೆಮಾರಿ ಕಾಲನಿ ನಿರ್ಮಾಣ ಅಗತ್ಯ, ಕಲಾ ಅಕಾಡೆಮಿ ರಾಷ್ಟ್ರೀಯ ಪ್ರದರ್ಶನ ಶಾಲೆ ಕಟ್ಟಬೇಕು, ಅಲೆಮಾರಿ, ಅರೆಅಲೆಮಾರಿಗಳ ಕುರಿತು ಇನ್ನಷ್ಟು ಅಧ್ಯಯನಗಳು, ಸಂಶೋದನೆಗಳು ಆಗಬೇಕೆಂದು ಅವರು ಆಶಿಸಿದರು.

ಅಲೆಮಾರಿ ಭಾಂದವರು ನಾವು ಭಿಕ್ಷುಕರಲ್ಲ, ಸೋಮಾರಿಗಳಲ್ಲ, ಕುಡುಕರಲ್ಲ ಮತ್ತು ಅಮುಖ್ಯರಲ್ಲ, ನಾವು ಸ್ವಾಭಿಮಾನಿಗಳು, ನಮ್ಮ ಓಟಿಗೂ ಬೆಲೆಯಿದೆಯೆಂದು ತಮ್ಮ ನರೆಹೊರೆಗೆ ಸಾಬೀತು ಪಡಿಸಬೇಕು ಹಾಗೂ ಯುವಕರು ನಾಯಕತ್ವ ಗುಣವನ್ನು ಅಳವಡಿಸಿಕೊಂಡು ಅರಿವನ್ನು ಪಡೆಯಬೇಕು ಎಂದು ಅವರು ತಿಳಿಸಿದರು.

ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ಬಾಲಗುರುಮೂರ್ತಿ ಮಾತನಾಡಿ, ಅಲೆಮಾರಿಗಳಿಗೆ ಅಲೆಮಾರಿ ಬುಡಕಟ್ಟು ಮಹಾಸಭಾದ ಹೋರಾಟದ ಫಲವಾಗಿ ಅಲೆಮಾರಿ ಕೋಶ ಸ್ಥಾಪನೆಯಾಗಿ ಅಲೆಮಾರಿಗಳೂ ಕೂಡ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಹರ್ಷದ ಸಂಗತಿ ಎಂದರು.

ಸಮತಾಸೈನಿಕ ದಳ ಹಾಗೂ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷ ವೆಂಕಟಸ್ವಾಮಿ, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ಸುಡುಗಾಡು ಸಿದ್ದ ಸಮುದಾಯದ ರಾಜ್ಯಾಧ್ಯಕ್ಷರು, ಬಿ.ಎಚ್.ಮಂಜುನಾಥ್, ಶಿಳ್ಳೆಕ್ಯಾತ ಸಮುದಾಯದ ರಾಜ್ಯಾಧ್ಯಕ್ಷರು, ಅಲೆಮಾರಿ ಮುಖಂಡರಾದ ಕುಳ್ಳಾಯ್ಯಪ್ಪ, ಸಿರಿವಾಟಿ ನರಸಿಂಹಲು, ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News