ಜಮೀನು ಮಾಲಕಿಗೆ ಬೆದರಿಕೆ ಪ್ರಕರಣ: ರಾಜ್ಯ ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

Update: 2018-09-08 15:49 GMT

ಬೆಂಗಳೂರು, ಸೆ.8: ಮಹದೇವಪುರ ವ್ಯಾಪ್ತಿಯ ಪಣತ್ತೂರಿನ ಯಲ್ಲಮ್ಮ ಹಾಗೂ ಬಿ.ಆರ್.ಭಾಸ್ಕರ್ ಎಂಬುವವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‌ಕುಮಾರ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಸಿವಿಲ್ ದಾವೆಯಲ್ಲಿ ಮಧ್ಯಪ್ರವೇಶಿಸದಂತೆ ಹಾಗೂ ತಮಗೆ ಬೆದರಿಕೆ ಹಾಕಿರುವ ಎಚ್‌ಎಎಲ್ ಎಸಿಪಿ ಶಿವಕುಮಾರ್, ಎಚ್‌ಎಎಲ್ ಇನ್ಸ್‌ಪೆಕ್ಟರ್ ಮೆಹಬೂಬ್ ಪಾಷ ವಿರುದ್ಧ ಕ್ರಮಕ್ಕೆ ನಿರ್ದೇಶನ ಕೋರಿ ಯಲ್ಲಮ್ಮ ಹಾಗೂ ಬಿ.ಆರ್. ಭಾಸ್ಕರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತ, ಡಿಸಿಪಿ ಅಬ್ದುಲ್ ಅಹದ್, ಎಸಿಪಿ ಶಿವಕುಮಾರ್ ಹಾಗೂ ಎಚ್‌ಎಎಲ್ ಇನ್ಸ್‌ಪೆಕ್ಟರ್ ಮೆಹಬೂಬ್ ಪಾಷಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದ್ದಾರೆ.

ಯಲ್ಲಮ್ಮ ತಮ್ಮ ಹೆಸರಿನಲ್ಲಿದ್ದ 1 ಎಕರೆ 19 ಗುಂಟೆ ಜಮೀನನ್ನು ಬಿ.ವಿ.ಭಾಸ್ಕರ್‌ಗೆ ಮಾರಾಟ ಮಾಡಿದ್ದರು. ನಂತರ ಅದೇ ಜಮೀನಿನಲ್ಲಿ ಭಾಸ್ಕರ್‌ರಿಂದ 18.4 ಗುಂಟೆ ಜಮೀನು ಖರೀದಿಸಿ ತಮ್ಮ ಮಗ ರಮೇಶ್ ಹೆಸರಿಗೆ ನೋಂದಣಿ ಮಾಡಿದ್ದರು. ಆದರೆ, ರಮೇಶ್ ಮೃತಪಟ್ಟಿರುತ್ತಾನೆ. ಈ ವೇಳೆ ರಮೇಶ್‌ನ ಪತ್ನಿ ಪಾರ್ವತಿ ಅತ್ತೆ ಹಾಗೂ ಮೂವರು ಮಕ್ಕಳನ್ನು ನೋಡಿಕೊಳ್ಳದೆ ಮನೆ ಬಿಟ್ಟು ಹೋಗಿದ್ದಳು. ಅಲ್ಲದೆ, ತನ್ನ ಗಂಡನ ಹೆಸರಿನಲ್ಲಿದ್ದ ಜಮೀನು ಮಾರಾಟ ಮಾಡಲಿಕ್ಕೆ ಮುಂದಾಗಿ, ಜಯರಾಮ್ ರೆಡ್ಡಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಳು. ಹೀಗಾಗಿ ಜಮೀನಿಗೆ ತಾನು ಹಣ ಹೂಡಿಕೆ ಮಾಡಿದ್ದು, ಜಮೀನಿನ ಒಂದು ಭಾಗ ನನಗೆ ಪಾಲು ಇದೆ, ಅಲ್ಲದೆ, ಮೊಮ್ಮಕ್ಕಳಿಗೂ ಭಾಗವನ್ನು ಹಂಚುವಂತೆ ಕೋರಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆದರೆ, ಪಾರ್ವತಿ, ಜಯರಾಮ್ ರೆಡ್ಡಿ ಜೊತೆ ಸೇರಿಕೊಂಡು ಕೇಸ್‌ನ ಪ್ರಮುಖ ಸಾಕ್ಷಿ ಬಿ.ಆರ್.ಭಾಸ್ಕರ್‌ಗೆ ಎಚ್‌ಎಎಲ್ ಎಸಿಪಿ ಹಾಗೂ ಇನ್ಸ್‌ಪೆಕ್ಟರ್ ಮೆಹಬೂಬ್‌ ಪಾಷರಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News