ತಡೆಯಾಜ್ಞೆ ವಿಸ್ತರಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ರಾಮಚಂದ್ರಾಪುರ ಮಠ

Update: 2018-09-08 15:54 GMT

ಬೆಂಗಳೂರು, ಸೆ.8: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆಗೆ ರಚನೆ ಮಾಡಿರುವ ಮೇಲುಸ್ತುವಾರಿ ಸಮಿತಿಯ ಕಾರ್ಯಾರಂಭಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೊಸನಗರದ ರಾಮಚಂದ್ರಾಪುರ ಮಠ ಹಿಂಪಡೆದಿದೆ.

ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿ ರಾಜ್ಯ ಸರಕಾರವು 2008ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್ ವಿಭಾಗೀಯ, ದೇವಾಲಯದ ಆಡಳಿತ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಲು 2018ರ ಆ.10ರಂದು ಆದೇಶಿಸಿತ್ತು. ಆದರೆ, ಸೆ.10ರಿಂದ ಸಮಿತಿ ಕಾರ್ಯ ನಿರ್ವಹಣೆ ಆರಂಭಿಸಬೇಕು ಎಂದು ಇದೇ ವೇಳೆ ಸ್ಪಷ್ಟಪಡಿಸಿತ್ತು.

ಅದರಂತೆ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಕೆ.ಎ.ಎಸ್ ಅಧಿಕಾರಿ ಎಚ್.ಹಾಲಪ್ಪ ಅವರನ್ನು ಕಾರ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆ.28ರಂದು ಆದೇಶಿಸಿದ್ದರು. ಇದರಿಂದ ಮೇಲುಸ್ತುವಾರಿ ಸಮಿತಿ ಕಾರ್ಯಾರಂಭಕ್ಕೆ ನೀಡಿರುವ ತಡೆಯಾಜ್ಞೆ ವಿಸ್ತರಿಸಲು ಕೋರಿ ಮಠವು ಮತ್ತೊಂದು ಈಚೆಗೆ ಅರ್ಜಿ ಸಲ್ಲಿಸಿತ್ತು. ಈ ಮಧ್ಯೆ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಮಠವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸೆ.10ರವರೆಗೆ ಸಮಿತಿಯ ಕಾರ್ಯಾರಂಭಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಮಠವು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ಹಿಂಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News