ಬಿಬಿಎಂಪಿ ಮೇಯರ್ ಆಯ್ಕೆಗೆ ತೀವ್ರ ಪೈಪೋಟಿ: ತೆರೆಮರೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ತಯಾರಿ

Update: 2018-09-08 16:21 GMT

ಬೆಂಗಳೂರು, ಸೆ.8: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಆರಂಭವಾಗಿದ್ದು, ಬಿಜೆಪಿ ತೆರೆಮರೆಯಲ್ಲಿ ಪಾಲಿಕೆಯ ಗದ್ದುಗೆಗೇರಲು ತಯಾರಿ ನಡೆಸುತ್ತಿದೆ.

ಪ್ರಸ್ತುತವಿರುವ ಮೇಯರ್ ಸಂಪತ್‌ರಾಜ್ ಹಾಗೂ ಉಪ ಮೇಯರ್ ಪದ್ಮಾವತಿ ಅವರ ಅವಧಿ ಇದೇ ತಿಂಗಳ 27 ಕ್ಕೆ ಕೊನೆಯಾಗಲಿದ್ದು, ಸೆ.28 ರಂದು ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಹೀಗಾಗಿ, ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದಲೂ ಮೂರು ಪಕ್ಷಗಳು ಅಧಿಕಾರಕ್ಕೇರಲು ತೀವ್ರ ಪೈಪೋಟಿಯಲ್ಲಿ ನಿರತವಾಗಿವೆ.

ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಮೇಯರ್ ಸ್ಥಾನ ದಕ್ಕಿಸಿಕೊಂಡಿದ್ದು, ಜೆಡಿಎಸ್‌ಗೆ ಉಪ ಮೇಯರ್ ಸ್ಥಾನ ನೀಡಲಾಗಿತ್ತು. ಅದೇ ರೀತಿ ಈ ಬಾರಿಯೂ ಕಾಂಗ್ರೆಸ್‌ಗೆ ಮೇಯರ್ ಹಾಗೂ ಜೆಡಿಎಸ್‌ಗೆ ಉಪ ಮೇಯರ್ ಸ್ಥಾನ ದೊರೆಯುವ ಸಾಧ್ಯತೆಯಿದೆ. ಇದರ ನಡುವೆ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವಲ್ಲಿ ನಿರತವಾಗಿರುವ ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅಧಿಕಾರ ದಕ್ಕಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದೆ.

ಹೆಚ್ಚಿದ ಆಕಾಂಕ್ಷಿಗಳ ಸಂಖ್ಯೆ: ಸಂಪತ್‌ರಾಜ್ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಈ ಬಾರಿ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿರಿಸಲಾಗಿದೆ. ಆದುದರಿಂದಾಗಿ, ಈ ಹುದ್ದೆಗೆ ಮಹಿಳಾ ಸದಸ್ಯರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇದುವರೆಗೂ ಗಂಗಾಂಬಿಕೆ ಮತ್ತು ಸೌಮ್ಯ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಈಗ ಲಾವಣ್ಯ, ಆಶಾ ಹಾಗೂ ಲತಾ ಕುಮಾರ್ ಮೇಯರ್ ಸ್ಥಾನ ಬೇಕು ಎಂದು ಲಾಬಿ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಐದಕ್ಕೇರಿದ್ದು, ಪಕ್ಷದ ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ.

ಜೆಡಿಎಸ್‌ನಲ್ಲಿ ತಿಕ್ಕಾಟ: ಪ್ರಸ್ತುತ ಉಪಮೇಯರ್ ಪದ್ಮಾವತಿ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದ್ದು, ಆ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಜೆಡಿಎಸ್‌ನಲ್ಲಿ 15 ಸದಸ್ಯರಿದ್ದು, ಅದರಲ್ಲಿ ಹೇಮಲತಾ ಗೋಪಾಲಯ್ಯ ಹಾಗೂ ಆನಂದ್ ಈಗಾಗಲೇ ಉಪಮೇಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಮಹಿಳೆಯರಿಗೆ ಉಪ ಮೇಯರ್ ಸ್ಥಾನವನ್ನು ನೀಡದಿರಲು ಪಕ್ಷದ ವರಿಷ್ಠರು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಆದುದರಿಂದಾಗಿ, ಅನಿವಾರ್ಯವಾಗಿ 8 ಜನ ಮಹಿಳಾ ಸದಸ್ಯರು ಉಪ ಮೇಯರ್ ರೇಸ್‌ನಿಂದ ದೂರ ಸರಿಯುವಂತಾಗಿದೆ.

ಇದೀಗ ಉಳಿದಿರುವ ಐದು ಸದಸ್ಯರಾದ ದೇವದಾಸ್, ಭದ್ರೇಗೌಡ, ಇಮ್ರಾನ್ ಪಾಷಾ, ಎನ್.ರಾಜಶೇಖರ್ ಹಾಗೂ ಮಹದೇವ್ ಉಪಮೆಯರ್ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ.

ಶಾಸಕರ ಬೆಂಬಲ ಯಾರಿಗೆ: ಹಿಂದಿನ ಮೂರು ಅವಧಿಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳನ್ನು ಕೊಡಿಸುವಲ್ಲಿ ವಿಫಲರಾಗಿದ್ದ ಬೆಂಗಳೂರು ನಗರ ಶಾಸಕರು ಇದೀಗ ತಮ್ಮ ಅಭ್ಯರ್ಥಿ ಪರವಾಗಿ ಬ್ಯಾಟಿಂಗ್ ಬೀಸುತ್ತಿದ್ದಾರೆ.

ಶಾಂತಿನಗರ ಶಾಸಕ ಎನ್.ಎ.ಹಾರೀಶ್ ಸೌಮ್ಯ ಪರವಾಗಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಗಂಗಾಂಭಿಕೆ ಪರವಾಗಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲತಾ ಕುಮಾರ್ ಪರವಾಗಿ, ಶಾಸಕ ಮುನಿರತ್ನ ಆಶಾ ಸುರೇಶ್ ಪರವಾಗಿ ಹಾಗೂ ಕೆ.ಜೆ.ಜಾರ್ಜ್ ಲಾವಣ್ಯ ಪರವಾಗಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News