ಹಸಿರು ವಲಯದಲ್ಲಿ ಅಕ್ರಮ ಬಡಾವಣೆ ನಿರ್ಮಾಣ: ಆರೋಪ

Update: 2018-09-08 16:31 GMT

ಬೆಂಗಳೂರು, ಸೆ.8: ಅನಧಿಕೃತವಾಗಿ ಯಶವಂತಪುರ ಕ್ಷೇತ್ರದ ತಾವರೆಕರೆ ಹೋಬಳಿಯ ವಿವಿಧ ಗ್ರಾಮಗಳ ಹಸಿರು ವಲಯದಲ್ಲಿ ನಿರ್ಮಿಸಿರುವ ಬಡಾವಣೆಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಗ್ರಾಮಗಳ ಹಸಿರು ವಲಯ ಪ್ರದೇಶದ 600 ಎಕರೆಗಳಲ್ಲಿ ನಿರ್ಮಾಣವಾಗಿರುವ ಎಲ್ಲಾ ಅನಧಿಕೃತ ಬಡಾವಣೆಗಳನ್ನು ಕೂಡಲೇ ತೆರವು ಮಾಡಬೇಕು. ಜತೆಗೆ ಕಬಳಿಕೆಯಾಗಿರುವ 600 ಎಕರೆ ವಿಸ್ತೀರ್ಣದ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಯಾವುದೇ ಸ್ಥಳದಲ್ಲಿ ಹಸಿರು ವಲಯ ಎಂದು ಗುರುತಿಸಲ್ಪಟ್ಟಿರುವ ಭೂಮಿಯನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ನಿಯಮವಿದೆ. ಅದನ್ನು ಉಲ್ಲಂಘಿಸಿ 2013-2014, 2017-2018 ಅವಧಿಯಲ್ಲಿ ಅಕ್ರಮ ರೆವಿನ್ಯೂ ಬಡಾವಣೆಗಳು ನಿರ್ಮಾಣಗೊಂಡು ಸರಕಾರಿ ಸ್ವತ್ತುಗಳನ್ನು ಕಬಳಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

1ಸಾವಿರ ಕೋಟಿಗೂ ಅಧಿಕ ಮೌಲ್ಯದ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಸಾವಿರಾರು ಮುಗ್ಧ ಜನರಿಗೆ ವಂಚನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವರೆಕೆರೆ ಹೋಬಳಿಯ ಯಲಚಗುಪ್ಪೆ, ಚೆನ್ನೇನಹಳ್ಳಿ, ವರ್ತೂರು, ನರಸೀಪುರ, ಗಂಗೇನಹಳ್ಳಿ ಮತ್ತು ಪೆದ್ದನ ಪಾಳ್ಯ ಗ್ರಾಮಗಳಿಗೆ ಸೇರಿರುವ 600 ಎಕರೆ ವಿಸ್ತೀರ್ಣದ ಹಸಿರು ವಲಯ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಕಾಂಗ್ರೆಸ್ ಮುಖಂಡ ರವಿ ಕುಮಾರ್ 300 ಎಕರೆಗೂ ಹೆಚ್ಚು ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಶ್ರೀಸಾಯಿ ರೆಸಿಡೆನ್ಸಿ ಎಂಬ ಹೆಸರಿನಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದ್ದಾರೆ ಎಂದು ಆಪಾದಿಸಿದರು.

ಹಸಿರು ವಲಯ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿದಲ್ಲದೇ ಸಾವಿರಾರು ಕೋಟಿ ರೂಪಾಯಿ ಮೊತ್ತದ ಸರಕಾರ ಜಮೀನುಗಳನ್ನು ಕಬಳಿಸಿರುವ ಈ ನೆಲಗಳ್ಳರ ವಿರುದ್ಧ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಒತ್ತಾಯಿಸಿದರು.

ಈ ಹಗರಣವನ್ನು ಲೋಕಾಯುಕ್ತ ಎಸಿಬಿ, ಬಿಎಂಟಿಎಫ್ ಅಲ್ಲದೇ ನಗರದ ಎಸಿಎಂಎಂ ನ್ಯಾಯಾಲಯದಲ್ಲೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ್, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧವು ದೂರು ದಾಖಲಿಸಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News