ಮಂಡಾಳೆ ಟ್ರೂಪ್

Update: 2018-09-08 17:16 GMT

ಈ ಮಂಡಾಳೆ ಅಡಿಕೆ ಹಾಳೆಯಿಂದ ವಿಶೇಷವಾಗಿ ಮಳೆಗಾಲದ ಕೆಲಸಕ್ಕಾಗಿಯೇ ತಯಾರಿಸಿದ ಟೋಪಿ. ಅಡಿಕೆ ತೋಟದಲ್ಲಿ ಬಿದ್ದ ಆಯ್ದ ಅಡಿಕೆ ಹಾಳೆಗಳನ್ನು ತಂದು ಅದನ್ನು ಹರಿತವಾದ ಸಣ್ಣ ಹುಲ್ಲುಗತ್ತಿಯಿಂದ ಕೆರೆದು ಆ ಕತ್ತಿಯಲ್ಲೇ ಪಾಲೀಶು ಮಾಡಿ ಬಣ್ಣ ಬಣ್ಣದ ದಾರಗಳಿಂದ ಕಟ್ಟಿ ಅದಕ್ಕೊಂದು ಕಲಾತ್ಮಕ ಮೆರುಗನ್ನು ನೀಡಿ ವಿವಿಧ ತಲೆಯವರ ಅಳತೆಗೆ ತಕ್ಕಂತೆ ನಿರ್ಮಿಸಲಾಗುತ್ತದೆ. ಒಂದು ಕಾಲದಲ್ಲಿ ಮಲೆನಾಡು ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಗದ್ದೆ ತುಂಬ ಗೊರಬು ಮತ್ತು ಕಂಬಳಿಗಳದ್ದೇ ಸಾಮ್ರಾಜ್ಯವಿತ್ತು. ಗದ್ದೆಯ ಕೋಗುಗಳ ತುಂಬ ಬಗ್ಗಿ ಕೆಲಸ ಮಾಡುತ್ತಿದ್ದಾಗ ಮಂಡಾಳೆಯ ಮೇಲೆ ಕರಿ ಕಂಬಳಿಯನ್ನು ಹಾಕಿಕೊಂಡವರು ಪೆಂಗ್ವಿನ್ ಹಕ್ಕಿಗಳಂತೆ ಗೋಚರಿಸುತ್ತಿದ್ದರು. ಆದರೀಗ ಪ್ಲಾಸ್ಟಿಕ್‌ನ ಕೊಪ್ಪೆಗಳು ಬೆಳಗ್ಗೆಯೇ ಮದ್ಯಪಾನ ಮಾಡಿ ಗದ್ದೆ ಕೆಲಸಕ್ಕೆ ಇಳಿಯುವವರಂತೆ ತೂರಾಡುತ್ತಾ ಇರುತ್ತವೆ.

ಕೊಪ್ಪ ತಾಲೂಕಿನ ಸಿದ್ಧರ ಮಠ ಎಂಬ ಊರಿನ ಹತ್ತಿರ ಪಾಳು ಬಿದ್ದಿದ್ದ ಎರಡು ಎಕರೆ ಗದ್ದೆ ಪಡೆದು ಅಲ್ಲಿ ಭತ್ತ ಬೆಳೆವ ಯೋಜನೆ ‘ಮಂಡಾಳೆ’ ಟ್ರೂಪಿನದು. ಕೋಡಿಗಟ್ಟಲೆ ಗದ್ದೆಗಳು ಮಲೆನಾಡಲ್ಲಿ ಹಾಳು ಬಿದ್ದಿರುವುದು ಹೊಸತೇನಲ್ಲ. ಕಳೆದ ಹತ್ತಾರು ವರುಷಗಳಿಂದ ಮಕ್ಕಿ ಗದ್ದೆಗಳಿಂದ ಆರಂಭವಾದ ಬೀಳು ಬೀಳಿಸಿಕೊಳ್ಳುವ ಭತ್ತದ ಗದ್ದೆಗಳ ರಂಪಾಟಗಳು ಕಂಪ,ಅಗೇಡಿ,ಹೊಂಡದ ಗದ್ದೆಗಳಿಗೆಲ್ಲ ಈ ಪಾಳು ಬೀಳಿಸುವ ಪ್ರಕ್ರಿಯೆ ಮುಂದುವರಿಯುತ್ತಲೇ ಬಂದಿದೆ. ಬೊಂಬ್ಲಾಪುರ ಸಮೀಪದ ದಿಗಂತ್ ಬಿಂಬೈಲ್ ಈ ಬಾರಿಯ ಬೆಂಬಿಡದ ಕೊರೆವ ಮಳೆಯಲ್ಲೂ ಒಂದಷ್ಟು ಜನರನ್ನು ಅದರಲ್ಲೂ ತಮ್ಮ ಕ್ಲಾಸ್‌ಮೇಟ್‌ಗಳ ‘ಮಂಡಾಳೆ ಟ್ರೂಪ್’ ಎಂಬುದನ್ನು ಮಾಡಿಕೊಂಡರು. ಕಳೆದ ಜುಲೈನಲ್ಲೇ ಇವರ ನಾಟಿ ಕಾರ್ಯಕ್ರಮ ಮುಗಿಯಬೇಕಿತ್ತು. ಗದ್ದೆ ಕೊಡುತ್ತೇವೆ ಎಂದವರು ಕಡೆ ಗಳಿಗೆಯಲ್ಲಿ ಕಾರಣಾಂತರಗಳಿಂದ ಗದ್ದೆ ಕೊಡಲಿಲ್ಲ. ಆದರೆ ಮಂಡಾಳೆ ಟ್ರೂಪ್‌ನ ಸದಸ್ಯರ ಗದ್ದೆ ವಹಿಸಿಕೊಂಡು ನಾಟಿ ಮಾಡಲೇಬೇಕು ಎಂಬ ಒತ್ತಡ ಮಸ್ತಕಕ್ಕೇರಿತ್ತು. ಸ್ನಾತಕೋತ್ತರ ಪದವೀಧರ ಯುವಕ ಯುವತಿಯರೆಲ್ಲ ಒಟ್ಟಾಗುತ್ತಾರೆ. ಮೇಘಾ ಎಂಬ ಕನ್ನಡ ಎಂ.ಎ ವಿದ್ಯಾರ್ಥಿನಿ ಒಂದಷ್ಟು ಗದ್ದೆ ಪಡೆದು ಕಳೆದ ಶನಿವಾರ ಮತ್ತು ರವಿವಾರ ನಾಟಿ ಮಾಡುವ ಕ್ರಿಯೆಯಲ್ಲಿ ಮಗ್ನರಾಗುತ್ತಾರೆ. ಆದರೆ ನಾಟಿ ಮಾಡುವುದೆಂದರೆ ಹೇಳಿದಷ್ಟು ಸುಲಭದ ಕಸರತ್ತು ಅಲ್ಲವೇ ಅಲ್ಲ. ಏಕೆಂದರೆ ಪಾಳು ಬಿದ್ದ ಗದ್ದೆಯಲ್ಲಿ ಹತ್ತಾರು ಒಡು ವಟ್ಟೆಗಳು ಬದುಗಳು ಹುಲ್ಲು ಮತ್ತು ಗಿಡಗಂಟಿಗಳಿಂದ ಆವೃತ್ತವಾಗಿದ್ದವು. ಪ್ರತಿ ವರ್ಷ ಸಾಗುವಳಿಯಾದ ಗದ್ದೆಗಳ ಬದುಗಳನ್ನು ಸರಿಯಾದ ಹದಕ್ಕೆ ತರುವುದೇ ಕಷ್ಟದ ಕೆಲಸ. ಅಂಥದ್ದರಲ್ಲಿ ನಾಲ್ಕೈದು ವರ್ಷ ಪಾಳುಬಿದ್ದಿದ್ದ ಆ ಬದುಗಳನ್ನು ಗುದ್ದಲಿ ಹಿಡಿದು ಕಡಿಯುವುದೆಂದರೆ ಹತ್ತಾರು ಆಳುಗಳು ಬೇಕು. ಆದರೂ ಈ ಹುಡುಗರ ಉತ್ಸಾಹ ಎಲ್ಲೆ ಮೀರಿತ್ತು. ತಲೆಗೆ ಮಂಡಾಳೆ ಹಾಕಿಕೊಂಡು ಗುದ್ದಲಿ ಹಿಡಿದು ನಿಂತೇ ಬಿಟ್ಟರು. ಸಿದ್ಧ್ದರ ಮಠ ಸುತ್ತ ಮುತ್ತಲಿನ ಹಳ್ಳಿಗರು ಬೆರಗುಗಣ್ಣುಗಳಲ್ಲಿ ನೋಡ ಹತ್ತಿದರು. ಪಾಳು ಬಿದ್ದ ಗದ್ದೆಯಲ್ಲಿ ನವ ಮನಮೋಹಕ ಯುವಕ ಯುವತಿಯರ ಚಿಲಿಪಿಲಿ ಗುಟ್ಟುವಿಕೆ ಹುರಿಸಾಲು ಪಾರಿವಾಳ, ಹುರುಳಿ, ಗರ್ಗೆ, ಗಿಳಿ ನವಿಲುಗಳನ್ನೇ ಮೀರಿಸಿತ್ತು. ಇಡೀ ಗದ್ದೆ ಕೋಡಿಗಳು ಹುಡುಗ ಹುಡುಗಿಯರ ಓಡಾಟದಿಂದ ಫಲವತ್ತಾಗುತ್ತಿರುವೆನೆಂದು ಭೂಮಿ ಬೀಗತೊಡಗಿತು. ಅನುಭವಸ್ಥರ ಸಲಹೆಗಳೊಂದಿಗೆ ಹಳ್ಳ ಹಿಡಿದು ಹೋಗಿದ್ದ ಬದು, ಸಣ್ಣಂಚು,ಸಣ್ಣಂಚುಗಳನ್ನು ಅಂಚುಗಳನ್ನು ಹದಕ್ಕೆ ತಂದರು. ಒಡು ವಟ್ಟೆಗಳಿಗೆ ಮಿಡಿ ಹೆಣೆದು ಮಣ್ಣು ತುಂಬಿದರು. ನೋಡ ನೋಡುತ್ತಿದ್ದಂತೆ ಟಿಲ್ಲರೊಂದನ್ನು ಬಾಡಿಗೆಗೆ ಪಡೆದು ಗದ್ದೆಗೆ ಇಳಿಸಿ ಹೂಡಿಸಿಯೇ ಬಿಟ್ಟರು. ಕೋಣಗಳ ಮೂಲಕ ನೊಳ್ಳಿ ಹೊಡೆಯುತ್ತಿದ್ದಾಗ ಬರುತ್ತಿದ್ದ ಹುಮ-ಚಿಗ ಮತ್ತು ಓ... ಹುಮ್ಮಗಳು ಬಣ್ಣ ಬಣ್ಣದ ಕನಸು ಹೊತ್ತು ಗದ್ದೆಗಿಳಿದಿದ್ದ ಹುಡುಗರಲ್ಲಿ ಹೊಸ ಲೋಕವನ್ನೇ ತೆರೆಯಹತ್ತಿತು. ಮೇಲೆ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ನಾಟಿಯಲ್ಲಿ ನಿರತರಾದರು. . ಟಿಲ್ಲರಿನ ಶಬ್ದದೊಳಗೆ ಗೆಳೆಯ ಗೆಳತಿಯರ ಸೋಬಾನೆ, ಅಂಟಿಕೆ ಪಿಂಟಿಗೆ ಭಾವಗೀತೆಗಳು ಒಂದಾಗ ಹತ್ತಿದವು. ಮರೆತು ಹೋಗಿದ್ದ ಮಲೆನಾಡ ಜಾನಪದ ಮೂವತ್ತು ನಲವತ್ತು ಯುವಕ ಯುವತಿಯರ ಹಾಡುಗಳೊಂದಿಗೆ ಭೂಮಿ ಝೇಂಕರಿಸತೊಡಗಿತು. ನಾಟಿ ಕಾರ್ಯಕ್ರಮ ಎಂಬುದು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲ ತಾಣಗಳಿಗೆ ಹಾಕುವ ತಥಾಗಥಕ್ರಿಯೆ ಎಂದು ತಿಳಿದು ನಾನು, ದೇವಂಗಿ ಸುಭಾಶ್ ಮತ್ತು ಅರೋಚಿ ಹೋದಾಗ ಸಿದ್ಧರ ಮಠದ ಗದ್ದೆ ಕೋಗಿನಲ್ಲಿದ್ದ ಭಯಾನಕ ಭೀಕರ ಕಡು ಮೌನವನ್ನು ಹೊಡೆದೋಡಿಸಿ ಮಕ್ಕಳ ಲಾಲಿ ಹಾಡಿನಂತೆ ಸಹಸ್ರ ಸಂಖ್ಯೆಯ ನಿತ್ಯ ಹರಿದ್ವರ್ಣ ಗಿಡಗಂಟಿಗಳು ಓಲಾಡುತ್ತಿದ್ದವು. ಮೂವತ್ತೈದು ಮಂದಿ ಯುವಕ ಯುವತಿಯರು ನಾಟಿಯಲ್ಲಿ ಏದುಸಿರು ಬಿಡುತ್ತಿದ್ದರು. ಇವರ ಖುಷಿ, ಗಮ್ಮತ್ತು, ಶ್ರದ್ಧ್ದೆ,ಏಕಾಗ್ರತೆ ನೋಡಿದಾಗ ಹೃದಯ ತುಂಬಿ ಬಂತು. ಗಣಿತ ಶಾಸ್ತ್ರದಿಂದ ಹಿಡಿದು,ಇತಿಹಾಸ,ರಾಜಕೀಯ ಶಾಸ್ತ್ರ,ಸಮಾಜ ಶಾಸ್ತ್ರ, ಸಾಹಿತ್ಯಗಳಲ್ಲಿ ಎಂ. ಎ ಮಾಡಿದ್ದ ಯುವಕ ಯುವತಿಯರನ್ನು ಮಾತಾಡಿಸಿದಾಗ ಇವರ ಉತ್ಸಾಹದ ಕ್ಷಣಗಳು ದಂಗು ಬಡಿಸಿದವು. ಮೇಲಿನಿಂದ ಧೋ. . . ಎಂದು ಸುರಿವ ಮಳೆ, ಅದು ಸೃಷ್ಟಿಸುತ್ತಿದ್ದ ಬಗ್ಗಡದ ನೀರು, ಇವಕ್ಕೆಲ್ಲ ಕೇರ್ ಎನ್ನದ ಈ ಯುವಕ ಯುವತಿಯರ ಮನಸ್ಥಿತಿ ಹೊಸ ಭರವಸೆಗಳನ್ನೇ ಹೊತ್ತು ತಂದಿತು. ಮಲೆನಾಡ ಸಂಸ್ಕೃತಿ, ನಾಗರಿಕತೆ ಮರೆಯಾಗುವ ಸಂದರ್ಭದಲ್ಲಿ ದಿಗಂತ್ ಬಿಂಬೈಲ್ ಮತ್ತು ಅವರ ಗೆಳೆಯರು ಕೂಡಿ ಕೊಂಡು ಸೃಷ್ಟಿಸುತ್ತಿದ್ದ ಹುಮ್ಮಸ್ಸು ಮಲೆನಾಡ ಭರವಸೆಗಳಾಗಿ ಕಾಡಿದವು. ಹಾಡು- ಹಸೆ, ಸೋಬಾನೆ, ಅಂಟಿಕೆ ಪಿಂಟಿಗೆಗಳು ಇವರ ನಾಟಿಯಲ್ಲಿ, ಅಂಚು ಕಡಿಯುವಲ್ಲಿ, ಹೂಟಿ -ನೊಳ್ಳಿಯಲ್ಲಿ ಬಿಂಬಿತವಾಗುತ್ತಿವೆ. ಮೇಳಿಗೆಯಿಂದ ತಂದಿದ್ದ ಹದಿನೈದಿಪ್ಪತ್ತು ಮೆದೆ ಭತ್ತದ ಸಸಿಗಳು ಯುವತಿಯರ ಮೃದುವಾದ ಮುಗ್ಧ ಕೈಗಳಿಂದ ಮಣ್ಣಿನ ಗದ್ದೆಗಳಿಗೆ ಊರಲ್ಪಡುತ್ತಿದ್ದಾಗ ಭೂತಾಯಿಯು ಫಲವತ್ತಾಗಲು ಸಿದ್ಧವಾಗುವ ದೃಶ್ಯವನ್ನು ಒಳಗಣ್ಣಿಗೆ ತೋರಿಸ ಹತ್ತಿದಳು. ಅದೇ ಸಮಯಕ್ಕೆ ಅಂಬಾರಕ್ಕೇ ತೂತು ಬಿದ್ದಂತೆ ಹೊಯ್ಯುತ್ತಿದ್ದ ಮಳೆ ಬರಿಯ ಮಳೆಯಾಗದೆ ಹೂಮಳೆಯಾಗಿ ಇವರನ್ನೆಲ್ಲ ಹರಸುತ್ತಿದ್ದಳು. ಕಂಬಳಿ ಗೊರಬುಗಳು ಮಾಯವಾಗಿರುವ ಕಾಲ ಘಟ್ಟದಲ್ಲಿ ಪ್ಲಾಸ್ಟಿಕ್‌ನ ಕೊಪ್ಪೆಗಳು ಯುವತಿಯರ ತಲೆ ಮೇಲೆ ಬಂದವು. ಹುಡುಗರೋ ತಮ್ಮ ಗ್ರೂಪಿನ ಸಂಕೇತವಾದ ಮಂಡಾಳೆಯಲ್ಲಿ ಆ ಕೊರೆವ ತಂಡಿಯಲ್ಲೂ ಬೆವರಿಳಿಸ ತೊಡಗಿದರು.

ಈ ಮಂಡಾಳೆ ಅಡಿಕೆ ಹಾಳೆಯಿಂದ ವಿಶೇಷವಾಗಿ ಮಳೆಗಾಲದ ಕೆಲಸಕ್ಕಾಗಿಯೇ ತಯಾರಿಸಿದ ಟೋಪಿ. ಅಡಿಕೆ ತೋಟದಲ್ಲಿ ಬಿದ್ದ ಆಯ್ದ ಅಡಿಕೆ ಹಾಳೆಗಳನ್ನು ತಂದು ಅದನ್ನು ಹರಿತವಾದ ಸಣ್ಣ ಹುಲ್ಲುಗತ್ತಿಯಿಂದ ಕೆರೆದು ಆ ಕತ್ತಿಯಲ್ಲೇ ಪಾಲೀಶು ಮಾಡಿ ಬಣ್ಣ ಬಣ್ದದ ದಾರಗಳಿಂದ ಕಟ್ಟಿ ಅದಕ್ಕೊಂದು ಕಲಾತ್ಮಕ ಮೆರುಗನ್ನು ನೀಡಿ ವಿವಿಧ ತಲೆಯವರ ಅಳತೆಗೆ ತಕ್ಕಂತೆ ನಿರ್ಮಿಸಲಾಗುತ್ತದೆ. ಒಂದು ಕಾಲದಲ್ಲಿ ಮಲೆನಾಡು ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಗದ್ದೆ ತುಂಬ ಗೊರಬು ಮತ್ತು ಕಂಬಳಿಗಳದ್ದೇ ಸಾಮ್ರಾಜ್ಯವಿತ್ತು. ಗದ್ದೆಯ ಕೋಗುಗಳ ತುಂಬ ಬಗ್ಗಿ ಕೆಲಸ ಮಾಡುತ್ತಿದ್ದಾಗ ಮಂಡಾಳೆಯ ಮೇಲೆ ಕರಿ ಕಂಬಳಿಯನ್ನು ಹಾಕಿಕೊಂಡವರು ಪೆಂಗ್ವಿನ್ ಹಕ್ಕಿಗಳಂತೆ ಗೋಚರಿಸುತ್ತಿದ್ದರು. ಆದರೀಗ ಪ್ಲಾಸ್ಟಿಕ್‌ನ ಕೊಪ್ಪೆಗಳು ಬೆಳಗ್ಗೆಯೇ ಮದ್ಯಪಾನ ಮಾಡಿ ಗದ್ದೆ ಕೆಲಸಕ್ಕೆ ಇಳಿಯುವವರಂತೆ ತೂರಾಡುತ್ತಾ ಇರುತ್ತವೆ. ಈ ಮಂಡಾಳೆ ಗಂಡಸರ ಸೊತ್ತಾದರೆ ಈ ’ತಳಾಲೆ’ ಎಂಬುದು ಹೆಂಗಸರ ತಲೆಯ ಮೇಲೆ ಕೂರುತ್ತಿತ್ತು. ತಲೆಯ ಮೇಲೆ ತಳಾಲೆ ಎಂಬ ಸಿಂಪಲ್ ಹಾಳೆ ಟೋಪಿಯನ್ನು ಹಾಕಿ ಅದರ ಮೇಲೆ ಬಿದಿರು ಮತ್ತು ದೀರುಕನ ಎಲೆಯಿಂದ ತಯಾರಿಸಿದ ಈ ಗೊರಬು ಹಾಕಿಕೊಂಡೇ ಬೆಚ್ಚಗೆ ನಾಟಿಯಲ್ಲೋ, ಸಸಿ ಕೀಳುವುದರಲ್ಲೋ ನಿರತರಾಗುತ್ತಿದ್ದ ಹೆಂಗಸರು ತಮ್ಮ ಮೊಗಗಳನ್ನು ತೋರಿಸುವುದೇ ಅಪರೂಪ. ಮೇಲಿನಿಂದ ಬರ್ರೋ ಎಂದು ಸುರಿಯುತ್ತಿದ್ದ ಮಳೆ ತನ್ನ ಪಾಡಿಗೆ ತಾನು ಗೊರಬಿನ ಮೇಲೆ ಬಿದ್ದು ಹೋಗುತ್ತಿತ್ತು. ಗದ್ದೆಯ ಕೆಸರಲ್ಲಿ ಹೂತು ಹೋಗಿರುತ್ತಿತ್ತು. ಇನ್ನರ್ಧ ದಂತದಂತಹ ಬಿಳಿಯ ಕಾಲುಗಳ ಆಕಾರದ ಆಧಾರದಲ್ಲೇ ಹೆಂಗಸರನ್ನು ಗುರುತಿಸಬೇಕಿತ್ತು. ತಳಾಲೆ ಮತ್ತು ಗೊರಬು ಹಾಕಿಕೊಂಡು ಬಗ್ಗಿ ಸಸಿ ಕೀಳುವ ದೃಶ್ಯ ಮರೆತೇ ಹೋಗಿದೆ. ಈ ತಳಾಲೆ ತಲೆಗೆ ಅಡ್ಡಡ್ಡಲಾಗಿ ಹಾಕಿಕೊಳ್ಳಬೇಕು. ಏಕೆಂದರೆ ಹೆಂಗಳೆಯರ ದಟ್ಟ ಕೂದಲು ಉದ್ದುದ್ದ ಹಾಕಿಕೊಂಡರೆ ಅಡ್ಡ ಬರುತ್ತದೆ. ಈ ಕಾರಣದಿಂದ ಮಂಡಾಳೆಯನ್ನೇ ಅಡ್ಡಲಾಗಿ ತಲೆಗೆ ಹಾಕಿಕೊಂಡರೆ ತಳಾಲೆಯಾಗುತ್ತಿತ್ತು ಎನ್ನ ಬಹುದಾದರೂ ಮಂಡಾಳೆಯಷ್ಟು ಕಲಾತ್ಮಕವಾಗಿ ಈ ಟೋಪಿಯನ್ನು ಮಾಡುತ್ತಿರಲಿಲ್ಲ. ಏಕೆಂದು ನಾ ಕಾಣೆ. ಸೌಂದರ್ಯೋಪಾಸನೆಯ ದೃಷ್ಟಿಯಲ್ಲಿ ಗಂಡಸರಿಗಿಂತ ಹೆಂಗಸರು ಸಾವಿರ ಪಾಲು ಮುಂದಿದ್ದರೂ ತಮ್ಮ ತಳಾಲೆಯ ನೇಯ್ಗೆಯನ್ನು ಕಲಾತ್ಮಕಗೊಳಿಸದಿರಲು ಕಾರಣವೇನು ಎಂಬುದು ಇಂದಿಗೂ ಕಾಡುವ ಪ್ರಶ್ನೆಯಾಗಿದೆ. ಒಂದಷ್ಟು ಹೊತ್ತು ಇವರೊಂದಿಗೆ ಸಂವಾದಿಸಿ ಗದ್ದೆ ಕೋಡಿಯಿಂದ ಹೊರಬರುವಾಗ ಮನಸ್ಸೆಲ್ಲ ಪ್ರಫುಲ್ಲತೆಯ ಕೊಳವಾಗಿತ್ತು. ಮತ್ತೆ ಮತ್ತೆ ಈ ಹುಡುಗರ ಸಾಹಸ ಇಂಡಿಯಾವನ್ನು ಭಾರತದ ನೆಲೆಯಲ್ಲಿ ನೋಡುವತ್ತ ನಮ್ಮನ್ನು ತಳ್ಳಿತು. ನಮ್ಮ ಚಳವಳಿಗಳನ್ನು ಎಪ್ಪತ್ತು ಎಂಬತ್ತರ ದಶಕವನ್ನಿಟ್ಟಕೊಂಡೇ ನೋಡುವ ಸಿದ್ಧ ಮಾದರಿಯನ್ನು ಬಿಟ್ಟು ಈ ಕೆಳಕಂಡ ಯುವಕ ಯುವತಿಯರಾದ ನವೀನ್ ಹರಿಹರಪುರ, ಸುಬ್ರಮಣ್ಯ ಬೊಮ್ಲಾಪುರ, ಅನ್ವಿತ ಹೊಸಳ್ಳಿ, ಚೇತನ್ ಹಡ್ಲುಬೈಲ್, ಮೇಘನ, ಶಶಿ ಬೆತ್ತದಕೊಳಲು, ಪ್ರತೀಕ್ಷ, ರಕ್ಷಿತ್ ಆಚಾರ್ ಕಾಚ್ಗಲ್, ಮಧುಸೂದನ್ ಕೈಮರ, ಸುಕೇಶ್ ಹೊಸ್ಕೇರಿ, ಉದಯ್ ಕೊಪ್ಪ, ಸುಶ್ಮಿತ ವಿರತ್ಮಠ ಮತ್ತು ಹಲವರ ಮುಖಾಂತರ ನೋಡುವಷ್ಟು ನಮ್ಮ ವಯೋಮಾನದವರು ಬದಲಾಗಬೇಕೆನಿಸಿತು.

ಕೆಸರಲ್ಲಿ ಮಿಂದೆದ್ದಿದ್ದ ದಿಗಂತ್ ಅಡ್ಸ್ಲೆ (ಅಶ್ಲೇಷ)ಮಳೆಯ ಉಡ್ರಿನಲ್ಲಿ ಗಡಗಡ ನಡುಗುತ್ತಿದ್ದರು. ಗದ್ದೆ ಮಾಡಲು ಹಾಕಿದ ಬಂಡವಾಳ ಇಪ್ಪತ್ತೈದು ಸಾವಿರಕ್ಕೂ ಮಿಗಿಲಾಗುತ್ತಿರುವ ಬಗ್ಗೆ ಅವರ ಮನಸ್ಸು ಲೆಕ್ಕ ಹಾಕುತ್ತಿದ್ದಿರಲೂಬಹುದು. ಆದರೆ ದಿಗಂತ್ ಇವರನ್ನೆಲ್ಲ ಈ ಪಾಠ ಮಳೆಯಲ್ಲೂ ಒಟ್ಟು ಹಾಕುವ ಸಾಮರ್ಥ್ಯ ಪಡೆದುಕೊಂಡದ್ದಕ್ಕೆ ದಿಗಂತ್‌ಗೆ ಸೆಲ್ಯೂಟ್ ಮಾಡದಿರಲು ಸಾಧ್ಯವೆ

ಮಲೆನಾಡಿನ ಕೃಷಿ ಸಂಬಂಧಿತ ಕೆಲವು ಪದಗಳು 

►ಉಡ್ರು: ವಿಪರೀತ ಮಳೆಯಲ್ಲಿ ನೆಂದೂ ನೆಂದೂ ಉಂಟಾಗುವ ತಂಡಿ. ಮಳೆಗಾಲ ಶುರುವಾಗಿ ಎರಡು ತಿಂಗಳ ನಂತರ ಇದರ ಪ್ರಭಾವ ಜಾಸ್ತಿ. ಉಸಿರಾಟದಂತೆ ನಡುಕವೂ ದೇಹದ ಅವಿಭಾಜ್ಯ ಅಂಗವಾಗುತ್ತಾ ಹೋಗುತ್ತದೆ.

►ಒಡು: ನಾಟಿ ಮಾಡದ ಅಥವಾ ನಾಟಿ ಮಾಡದ ಗದ್ದೆಗಳ ಮೇಲೆ ಮಳೆಯ ನೀರು ಯಥೇಚ್ಛವಾಗಿ ಹರಿದ ರಭಸಕ್ಕೆ ಗದ್ದೆಯಲ್ಲಿ ಉಂಟು ಮಾಡುವ ಹೊಂಡಗಳು.

►ಮಕ್ಕಿ: ನೀರಿನ ಹರಿವಿಲ್ಲದ,ನೀರಿನ ಒರತೆಯೂ ಇಲ್ಲದ ಮೇಲ್ಭಾಗದ ಗದ್ದೆಗಳು.

►ಅಗೇಡಿ: ಸಸಿ ಪಾತಿಗಳಿಗಾಗಿಯೇ ಇಟ್ಟ ಗದ್ದೆಗಳು.

►ಕಂಪ: ಬೇಸಿಗೆ ಮಳೆಗಾಲವೆನ್ನದೆ ನೀರು ಹರಿಯುತ್ತಲೇ ಇರುವ ಪ್ರದೇಶ. ಕಾಲಿಟ್ಟರೆ ತೊಡೆಯವರೆಗೆ ಹೂತುಹೋಗುವಷ್ಟು ಕೆಸರು. ನಾಟಿ ಮಾಡಲು ಹೆಂಗಸರನ್ನು ಇಳಿಸುತ್ತಿರಲಿಲ್ಲ. ಎತ್ತುಗಳೂ ಇಲ್ಲಿ ಹೂಟಿ ಮಾಡಲು ಹೆದರುತ್ತಿದ್ದವು. ಗುದ್ದಲಿಯಿಂದ ಕೊಚ್ಚಿಯೇ ನಾಟಿ ಮಾಡಬೇಕಿತ್ತು. ದೀರುಕ : ಹುಳಿ ಹಣ್ಣು ಬಿಡುವ ಸಸ್ಯ. ಇದರ ಎಲೆಗಳು ಒಣಗಿದ ಮೇಲೆ ಬಹು ಗಟ್ಟಿ ಮತ್ತು ಗರಿ ಗರಿ.

►ಮುಂಡಾಳೆ ಟ್ರೂಪ್ ಸದಸ್ಯರು

ನವೀನ್ ಹರಿಹರಪುರ, ಸುಬ್ರಮಣ್ಯ ಬೊಮ್ಲಾಪುರ, ಅನ್ವಿತ ಹೊಸಳ್ಳಿ, ಚೇತನ್ ಹಡ್ಲುಬೈಲ್, ಮೇಘನಾ, ಶಶಿ ಬೆತ್ತದಕೊಳಲು, ಪ್ರತೀಕ್ಷಾ, ರಕ್ಷಿತ್ ಆಚಾರ್ ಕಾಚ್ಗಲ್, ಮಧುಸೂದನ್ ಕೈಮರ, ಸುಕೇಶ್ ಹೊಸ್ಕೇರಿ, ಉದಯ್ ಕೊಪ್ಪ, ಸುಶ್ಮಿತ ವಿರತ್ಮಠ ಹಲವಾರು ಮಂಡಾಳೆ ಮಿತ್ರರ ಶ್ರಮ ಈ ಅರ್ಥಪೂರ್ಣ ಕಾರ್ಯಕ್ರಮ.

Writer - ನೆಂಪೇ ದೇವರಾಜ್

contributor

Editor - ನೆಂಪೇ ದೇವರಾಜ್

contributor

Similar News