ಭತ್ತವನ್ನೇ ಬೆಳೆಯಲು ಕಾರಣವೇನು?

Update: 2018-09-08 17:56 GMT

 ►ಭತ್ತವನ್ನೇ ಬೆಳೆಯಲು ಕಾರಣವೇನು?

 ►ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ನಷ್ಟ ಜಾಸ್ತಿ ಎಂಬ ಮಾತು ಜನ ಜನಿತ ಆದರೂ ಭತ್ತ ಬೆಳೆಯಲು ಕಾರಣವೇನು?

 ►ನಗರದ ವ್ಯಾಮೋಹದಿಂದ ಕೃಷಿ ಬಡವಾಗುತ್ತಿದೆಯೆ?

 ►ಪಟ್ಟಣ ಮತ್ತು ಹಳ್ಳಿಯ ಆಯ್ಕೆ ಎದುರಾದಾಗ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ?

ಎಂಬ ನಾಲ್ಕು ಪ್ರಶ್ನೆಗಳಿಗೆ ಮಂಡಾಲೆ ಗ್ರೂಪ್‌ನ ದಿಗಂತ್ ಬಿಂಬೈಲ್ ಮತ್ತು ಈಗ ತಾನೆ ಪ್ರಥಮ ಎಂಎ ಮಾಡುತ್ತಿರುವ ಪ್ರಣೀತಾರಿಗೆ ಕೇಳಿದಾಗ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಪಟ್ಟಣದಲ್ಲಿರೋದೇ ಮೋಕ್ಷ ಅಲ್ಲ: ಪ್ರಣೀತಾ

               ಪ್ರಣಿತಾ ಎಂ ಟಿ, ಪ್ರಥಮ ಎಂಎ ವಿದ್ಯಾರ್ಥಿ

ಭತ್ತವನ್ನೇ ಬೆಳೆಯ ಬೇಕೆಂದು ನಿರ್ಧರಿಸಲು ಕಾರಣ?

   ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಉಕ್ತಿಯಂತೆ ಭತ್ತ ಮಲೆನಾಡಿಗರ ಪ್ರಮುಖ ಬೆಳೆ..

-ಪ್ರಣಿತಾ: ಇಲ್ಲಿನ ಹವಾಮಾನಕ್ಕೆ ಜನಜೀವನಕ್ಕೆ ಪೂರಕವಾಗಿರುವ ಬೆಳೆ ಈ ಭತ್ತ. ಇದು ಕೇವಲ ಬೆಳೆ ಮಾತ್ರವಲ್ಲ ಹಸಿದವರ ಹಸಿವ ನೀಗಿಸೋ ಪ್ರತ್ಯಕ್ಷ ದೈವ. ಆದರೆ ಪ್ರಸ್ತುತತೆಯಲ್ಲಿ ಕೃಷಿಯಿಂದ ವಿಮುಖರಾಗುವವರು ಒಂದೆಡೆಯಾದರೆ, ಭತ್ತದ ಗದ್ದೆಗಳಲ್ಲಿ ಅಡಿಕೆ, ರಬ್ಬರ್, ಕಾಫಿ ಮೊದಲಾದ ಬೆಳೆಗಳು ಸ್ಥಾನ ಪಡೆದಿರುವುದು ಗಮನಿಸಬೇಕಾದ ಮತ್ತೊಂದು ಅಂಶ ಆದ್ದರಿಂದ ಭತ್ತದ ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾದ ಅನಿವಾರ್ಯತೆಯೂ ಇತ್ತು

►ಭತ್ತ ಬೆಳೆಯುವುದರಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಮಾತಿದೆ, ಆದರೂ ಭತ್ತದತ್ತಲೇ ಏಕೆ ಆಕರ್ಷಣೆ?

-ನನಗೆ ತಿಳಿದಂತೆ ಹಿಂದಿನ ಕಾಲದ ಜನರ ಆದಾಯದ ಮೂಲ ಕೃಷಿ. ಅದರಲ್ಲೂ ಮುಖ್ಯವಾಗಿ ಭತ್ತದ ಕೃಷಿ ಇರುವ ಅಲ್ಪ ಸ್ವಲ್ಪ ಗದ್ದೆಯಲ್ಲೇ ಜೀವನ ನಿರ್ವಹಣೆ ಸಾಧ್ಯವಾಗುತ್ತಿತ್ತು.ಖಂಡಿತ ಈಗ ಕಾಲ ಬದಲಾಗಿದೆ ಆದರೆ ತಿನ್ನುವ ಕೈಗಳು ಕಡಿಮೆಯಾಗಿಲ್ಲ ಅದೆಷ್ಟೇ ಫಾಸ್ಟ್ ಫುಡ್ ಗಳು ತಾಂಡವವಾಡಿದರೂ ಹೊಟ್ಟೆಗೆ ಒಂದಲ್ಲಾ ಒಂದು ಬಾರಿ ಅನ್ನ ತಿನ್ನದಿರುವ ಮನುಜರಿಲ್ಲ

ಆದ್ದರಿಂದ ಈ ಭತ್ತ ನಾಟಿಯ ಮುಖ್ಯ ಉದ್ದೇಶ ಜಾಗೃತಿ ಮೂಡಿಸುವುದು ಮತ್ತು ಕಣ್ಮರೆಯಾಗುತ್ತಿರುವ ಗದ್ದೆಗಳನ್ನು ಪುನಃ ಮುಖ್ಯವಾಹಿನಿಗೆ ತರುವುದಾದ್ದರಿಂದ ಲಾಭ ನಷ್ಟದ ಕುರಿತು ಯೋಚನೆ ಮಾಡುವುದನ್ನು ಮೀರಿ ಆಲೋಚಿಸಬೇಕಿದೆ. ಹಾಗೆಂದು ಈ ಭತ್ತ ನಾಟಿ ನಷ್ಟವನ್ನುಂಟು ಮಾಡಿದೆ ಎಂಬುದು ಖಂಡಿತ ಈ ಮಾತಿನ ಅರ್ಥವಲ್ಲ. ಇದರಲ್ಲಿಯೂ ರೈತರ ಜೀವನ ಸುಧಾರಿಸಲು ಸಾಧ್ಯವಿದೆ

►ನಗರದ ವ್ಯಾಮೋಹದಲ್ಲಿ ಕೃಷಿ ಬಡವಾಗುತ್ತಿದೆಯೇ?

-ನಗರವೆಂದಾಕ್ಷಣ ಅದು ಸುಂದರವಾದ ಬಣ್ಣದ ಬದುಕು ಎಂಬ ಕಲ್ಪನೆಯೇ ಹೆಚ್ಚಾಗಿ ತುಂಬಿದೆ.ಕೋಟಿ ಹಣವಿದ್ದರೂ ಪಟ್ಟಣವು ಗೋಳು ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು ಎಂದು ದಾರ್ಶನಿಕ ಕವಿ ಕುವೆಂಪು ಹೇಳಿದ್ದು ಅಕ್ಷರಶಃ ಸತ್ಯ, ಪಟ್ಟಣದ ಸೌಕರ್ಯಗಳು ರಸ್ತೆ ಮಾಲ್‌ಗಳು, ಝಗಮಗಿಸುವ ಲೋಕಗಳು, ಉದ್ಯೋಗದ ವಿಫುಲ ಅವಕಾಶಗಳು ಇವೇ ಮುಖ್ಯವಾಗಿ ಯುವಜನತೆಯನ್ನು ತನ್ನ ತಾತ್ಕಾಲಿಕ ಖುಷಿಯ ಲೋಕಕ್ಕೆ ಸೆಳೆಯುತ್ತಿದೆ, ಹಾಗೆಂದು ಹಳ್ಳಿಯಲ್ಲಿಯೇ ಬದುಕಿರುವವರೆಗೂ ಇರಲೇಬೆಂಬ ವಿತಂಡವಾದ ನನ್ನದಲ್ಲ. ಪಟ್ಟಣದ ರಂಗು ರಂಗಿನ ಬದುಕಿಗಿಂತ ಇಲ್ಲಿನ ಆರೋಗ್ಯಕರ ವಾತಾವರಣ ಜೀವನ ನಡೆಸಲು ಪೂರಕವಾದದ್ದು

►ಪಟ್ಟಣ ಜೀವನ, ಹಳ್ಳಿ ಜೀವನ ಎಂದು ಬಂದಾಗ ನಿಮ್ಮ ಆಯ್ಕೆ?

-ಹಳ್ಳಿಯಲ್ಲಿರುವವರಿಗೆ ಹಳ್ಳಿ ಎಂದರೆ ಸಾಕಪ್ಪ ಜೀವನ, ಪಟ್ಟಣ ಜೀವನವೇ ಮೋಕ್ಷ ಎಂಬಂತಾಗಿದೆ, ಟಿವಿಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಝಗಮಗಿಸುವ ಪಟ್ಟಣಗಳ ಕಾಣುವ ಕಣ್ಗಳು ಹಳ್ಳಿಯ ನೆಮ್ಮದಿಯನ್ನು ಮರೆತು ಬಿಡುತ್ತಾರೆ, ನಾನೂ ಪಟ್ಟಣದಲ್ಲೇ ಬೆಳೆದವಳು, ಈಗ ವಿದ್ಯಾಭ್ಯಾಸ ಮಾಡುತ್ತಿದ್ದೇನೆ, ಹಳ್ಳಿಯ ಒಡನಾಟ ಇದ್ದರೂ ಸಹ ಗದ್ದೆ ನಟ್ಟೀ ಹೂಟೆ ಇವುಗಳ ಬಗ್ಗೆ ಗೊತ್ತಿತ್ತು ಆದರೆ ಮಾಡಿರಲಿಲ್ಲ, ಮೊನ್ನೆ ಮಂಡಾಳೆ ತಂಡದವರ ವತಿಯಿಂದ ನಡೆದ ಭತ್ತ ನಾಟಿಯಲ್ಲಿ ಮೊದಲ ಬಾರಿ ಭತ್ತದ ಸಸಿಗಳನ್ನು ನಾಟಿ ಮಾಡಿದಾಗ ಅದೇನೋ ಅವ್ಯಕ್ತ ಸಂತಸ, ಆ ಗೊಬ್ಬರ ಬೆರೆತ ಕೆಸರಿನಲ್ಲಿ ಓಡಾಟ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ದಿನವೂ ಚಪ್ಪಲಿ ಮೆಟ್ಟಿ ಓಡಾಡುವ ಭೂಮಿಯನ್ನ ಕೈಮುಗಿದು ತಾಯಿಯಂತೆ ಕಾಣುವ ರೀತಿ, ದೇಹ ಗಟ್ಟಿಗೊಳಿಸುವ ಹುರುಳಿ ಕಟ್ಟಿನ ಸಾರು, ಎಲ್ಲರೊಡನೆ ಗದ್ದೆಯಲ್ಲಿ ಊಟ ಮಾಡಿದ ಸಂತಸ, ಗದ್ದೆ ಕೆಲಸ ಮಾಡಿಲ್ಲದಿದ್ದರು ಮುಂದೆ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬಂದಿದೆ, ಕೃಷಿಯನ್ನ ದೇವರಾಗಿ ಪೂಜಿಸುವವರ ನಡುವೆಯೇ ಬದುಕು ಚೆನ್ನ.ನನಗಂತೂ ಪಟ್ಟಣಕ್ಕೆ ಹೋಲಿಸಿದರೇ ಹಳ್ಳಿಯೇ ಇಷ್ಟ ಇದರರ್ಥ ದಿನವಿಡೀ ತೋಟ ಗದ್ದೆಗಳಲ್ಲೇ ದುಡಿಯುತ್ತೇನೆಂದಲ್ಲ ವೈಯಕ್ತಿಕವಾಗಿ ವ್ಯವಸಾಯದ ಬದುಕು ನನಗೆ ಹೊಸತು ಆದರೆ ಹಳ್ಳಿಯ ಬದುಕಿಗೆ ಹೊಂದಿಕೊಂಡು ಮತ್ತು ಇತರರ ಹಸಿವ ನೀಗಿಸುವ ವ್ಯವಸಾಯಕ್ಕೆ ನನ್ನ ಬೆಂಬಲವಿದೆ. ಪಟ್ಟಣದಲ್ಲಿ ವಾಸ ಮಾಡಿದರೂ ಸಹ ಹಳ್ಳಿಯ ಬದುಕು ಹಳ್ಳಿಯ ಸಂಸ್ಕೃತಿಗಳ ಉಳಿವಿನ ಹಾದಿಯಲ್ಲಿ ನಾವಿರಬೇಕು ಎಂಬುದು ನನ್ನ ಮತ್ತು ಮಂಡಾಳೆ ಗ್ರೂಪ್‌ನ ಆಶಯ.

►ನಮ್ಮ ಹಿರಿಯರ ಹಾದಿ ಮರೆಯಲಾರೆವು: ದಿಗಂತ್ ಬಿಂಬೆಲ್ 

   

                            ದಿಗಂತ್ ಬಿಂಬೈಲ್

ಭತ್ತವನ್ನೇ ಬೆಳೆಯ ಬೇಕೆಂದು ನಿರ್ಧರಿಸಲು ಕಾರಣ?

-ದಿಗಂತ್: ಮಲೆನಾಡು ಭಾಗದಲ್ಲಿ ಮುಖ್ಯವಾದ ಆಹಾರ ಬೆಳೆ ಭತ್ತ, ಆದಿ ಕಾಲದಿಂದಲೂ ಬೇರೆ ಧಾನ್ಯಗಳ ಉಪಯೋಗ ಮಾಡಿದರೂ ಸಹ ಪ್ರಮುಖ ಆಹಾರ ಬೆಳೆಯಾಗಿ ಭತ್ತದ್ದೇ ಪಾರುಪತ್ಯ. ಇನ್ನು ಗದ್ದೆಗಳು ಕೇವಲ ಆಹಾರಕ್ಕಾಗಿ ಮಾತ್ರವಲ್ಲದೆ ಎಷ್ಟೋ ಜಲಚರವಾಸಿಗಳ, ಮತ್ಸ್ಯ ಸಂಕುಲದ ಉಳಿವಿಗೆ ಸಹಕಾರಿ. ಹಾಗೆಯೇ ಭತ್ತದ ಗದ್ದೆಗಳಲ್ಲಿ ನೀರು ಕಟ್ಟಿ ನಿಲ್ಲಿಸುವುದರಿಂದ ಅಂತರ್ಜಲಕ್ಕೆ ಮಹತ್ತರ ಕೊಡುಗೆ. ಜೊತೆಜೊತೆಯಲಿ ಮಲೆನಾಡ ಸಂಸ್ಕೃತಿಯ ಶ್ರೀಮಂತಿಕೆ ಭತ್ತದ ಗದ್ದೆಗಳಿಂದಲೇ ಹೆಚ್ಚಾದದ್ದು ಒಪ್ಪಲೇ ಬೇಕಾದ ನಿಜ ಸತ್ಯ. ಭೂಮಿಹುಣ್ಣಿಮೆ ಹಬ್ಬ, ದೀಪಾವಳಿಯ ದೀಪ ಹಚ್ಚುವ ಹಬ್ಬ, ಹೀಗೆ ಹಲವಾರು ಹಬ್ಬಗಳನ್ನು ಒಳಗೊಂಡು ಹೂಟಿ, ನಟ್ಟೀ, ಜ್ವತ್ಕ, ಮಿಣಿ, ನೇಗ್ಲು, ನೊಗ, ಕೊಯ್ಲು, ಕುತ್ರೆ, ಒಕ್ಲಾಟ ಎಂಬೆಲ್ಲವು ಬರೀ ಹೆಸರಲ್ಲ ಮಲೆನಾಡ ಸಂಸ್ಕೃತಿಯ ಅಡಿಪಾಯದ ಕಲ್ಲುಗಳು. ಈ ಸಂಸ್ಕೃತಿಯ ಉಳಿವಿಗಾಗಿ ಗದ್ದೆ ಮಾಡುವ ಮನಸ್ಸು ಮಾಡಿದೆವು.

 ►ಭತ್ತ ಬೆಳೆಯುವುದರಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚೆಂಬ ಮಾತಿದೆ, ಆದರೂ ಭತ್ತದತ್ತಲೇ ಏಕೆ ಆಕರ್ಷಣೆ?

 -ಹೌದು, ರೈತ ವರ್ಗಕ್ಕೆ ಭತ್ತದಿಂದ ಮೈ ತುಂಬ ಕೆಲಸವಾದರೂ ಲಾಭ ಅಷ್ಟಕಷ್ಟೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದೇ ಕೆಲಸದಿಂದ ಲಾಭ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಸ್ವಾರ್ಥದ ದುರಾಸೆಯ ಬದುಕಿನಲ್ಲಿ ಎಷ್ಟಿದ್ದರೂ ಕಡಿಮೆಯೇ, ಆದರೆ ನಮ್ಮ ಹಿರಿಯರು ಭತ್ತದ ಬೇಸಾಯದಿಂದಲೇ ಜೀವನ ನಡೆಸಿಕೊಂಡು ಬಂದಿದ್ದನ್ನು ಮರೆಯಬಾರದು. ಗಮನಿಸ ಬೇಕಾದ ವಿಚಾರ. ಹೆಚ್ಚಿನ ಉದ್ದಿಮೆಗಳಿರಲಿಲ್ಲ, ವಾಣಿಜ್ಯ ಬೆಳೆಗಳ ಹಾವಳಿ ಇಲ್ಲದ ದಿನಗಳಲ್ಲೇ ಜೀವನೋಪಾಯಕ್ಕಾಗಿ ಭತ್ತವನ್ನ ಅವಲಂಬಿಸಿ ಬದುಕಿ ಪೂರ್ವಜರು ನಮ್ಮವರು. ಈಗ ನಮಗೆಲ್ಲ ಇಷ್ಟೊಂದು ಸೌಲಭ್ಯಗಳಿರುವಾಗ ಕೃಷಿಯತ್ತ ಮೊಗ ಮಾಡುವ ಅನಿವಾರ್ಯತೆ ಇದೆ.

►ನಗರದ ವ್ಯಾಮೋಹದಲ್ಲಿ ಕೃಷಿ ಬಡವಾಗುತ್ತಿದೆಯೇ?

-ನಗರದ ವ್ಯಾಮೋಹ ಅದು ಸಾಮಾನ್ಯವಾದುದು. ನಾವಿರುವ ವಾಸ್ತವ ಯಾವಾಗಲೂ ಮುಳ್ಳು, ದೂರದ ಬೆಟ್ಟ ನುಣ್ಣಗೆ. ವಾಸ್ತವದ ಅರಿವಿಲ್ಲದೆ ಕರೆಯುವ ಪಟ್ಟಣದ ವಾಸಿಗಳಾಗುತ್ತಿದ್ದೇವೆ. ಜೊತೆಗೇ ಕೆಲವರ ಮನೆ ಪರಿಸ್ಥಿತಿಯೂ ಚೂರು ಪಾರು ದುಡಿಮೆಗಾಗಿ ಪಟ್ಟಣದತ್ತ ಮೊಗಮಾಡುವ ಅವಶ್ಯಕತೆ ಸೃಷ್ಟಿಸಿದೆ. ಕೃಷಿಯ ಅರಿವೇ ಇಲ್ಲದಂತೆ ಬದುಕಾಗಿರುವುದರಿಂದ ಪಟ್ಟಣದ ವಾಸ್ತವಗಳನ್ನೆಲ್ಲ ತಿಳಿಯುವ ವೇಳೆಗೆ ವಿಧಿಯಿಲ್ಲದೆ ಸಂಪೂರ್ಣ ಪಟ್ಟಣ ಜೀವನಕ್ಕೆ ಒಗ್ಗಿಕೊಂಡಂತಾಗಿ, ನಿಜವಾದ ನೆಮ್ಮದಿ ಸುಖ ಎಲ್ಲಿ ಎಂಬ ಹುಡುಕಾಟಕ್ಕೆೆ ಉತ್ತರ ಸಿಗುವ ವೇಳೆಗೆ ನಾವು ಬಡವಾಗಿರುತ್ತೇವೆ.

►ಹಳ್ಳಿ ಮತ್ತು ಪಟ್ಟಣ ಜೀವನದಲ್ಲಿ ಯಾವುದರ ಕುರಿತಾಗಿ ಆಸಕ್ತಿ ಹೆಚ್ಚು?

-ಉದ್ಯೋಗವನ್ನರಸಿ ಪಟ್ಟಣ ಸೇರುವ ಮಧ್ಯೆ ವಿದ್ಯಾಭ್ಯಾಸದ ಕಾರಣಗಳಿಂದ ಕೃಷಿಯತ್ತ ಗಮನ ಹರಿಸುವುದು ಕಡಿಮೆ. ಸೂಕ್ತ ಉದ್ಯೋಗವಿಲ್ಲದೆ ಪಟ್ಟಣಗಳಲ್ಲಿ ಒದ್ದಾಟ, ಊರಿಗೆ ಬಂದು ಕೃಷಿ ಮಾಡುವ ಎಂದರೆ ಕೃಷಿಯ ಕುರಿತು ಅಲ್ಪ ಜ್ಞಾನವೂ ಇರುವುದಿಲ್ಲ, ಹಾಗಾಗಿಯೇ ಈ ಕಾರ್ಯಕ್ರಮ ಮಂಡಾಳೆ ಮಿತ್ರರಿಂದ ಆಯೋಜನೆ ಆಗಿದ್ದು, ಪಟ್ಟಣದಲ್ಲಿ ನೆಲೆಸಿರುವ ಯುವಕರು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕೃಷಿಯತ್ತ ಒಲವು ಬರಲಿ, ಕೃಷಿ ಮಾಡುವ ರೀತಿಯ ಕುರಿತಾಗಿ ಜ್ಞಾನ ಬಂದು, ಅದರ ನೋವು ನೋವು ನಲಿವುಗಳಲ್ಲಿ ಹುದುಗಿರುವ ನೆಮ್ಮದಿಯ ಲೋಕ ತೆರೆದು ಹಳ್ಳಿಯತ್ತ, ಕೃಷಿಯತ್ತ ಮೊಗ ಮಾಡಲಿ ಎಂಬುದೇ ಉದ್ದೇಶ. ಕೃಷಿಯಲ್ಲಿ ನೆಮ್ಮದಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News