​ಯುಎಸ್ ಓಪನ್: ಇತಿಹಾಸ ಸೃಷ್ಟಿಸಿದ ನವೋಮಿ ಒಸಾಕ

Update: 2018-09-09 03:54 GMT

ನ್ಯೂಯಾರ್ಕ್, ಸೆ. 9: ಅಮೆರಿಕ ಅಗ್ರಕ್ರಮಾಂಕದ ಆಟಗಾರ್ತಿಯ ಏಕಸ್ವಾಮ್ಯವನ್ನು ಕೊನೆಗೊಳಿಸಿದ ಜಪಾನ್‌ನ ನವೋಮಿ ಒಸಾಕ, ಯುಎಸ್ ಓಪನ್ ಟೆನಿಸ್ ಮಹಿಳಾ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದರು.

ಉಕ್ಕಿನ ತೋಳಿನ ಆಟಗಾರ್ತಿ ಎಂದೇ ಖ್ಯಾತರಾದ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-4 ನೇರ ಸೆಟ್ಟುಗಳಿಂದ ಬಗ್ಗುಬಡಿದ ಒಸಾಕ, ಗ್ರ್ಯಾಂಡ್‌ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಜಪಾನಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆದರೆ ಈ ಐತಿಹಾಸಿಕ ಫೈನಲ್ ಹಲವು ನಾಟಕೀಯ ಬೆಳವಣಿಗೆ ಮತ್ತು ವಿವಾದಗಳಿಗೆ ಕಾರಣವಾಯಿತು. ದೇಶಕ್ಕೆ ಮೊಟ್ಟಮೊದಲ ಸಿಂಗಲ್ಸ್ ಕಿರೀಟ ಗೆದ್ದುಕೊಟ್ಟ ಹಿರಿಮೆಗೆ ಪಾತ್ರರಾಗಲು ಯುವ ಆಟಗಾರ್ತಿ ಒಸಾಕ ಹುಮ್ಮಸ್ಸಿನಲ್ಲಿದ್ದರೆ, 24 ಪ್ರಮುಖ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದು ಮಾರ್ಗರೆಟ್ ದಾಖಲೆಯನ್ನು ಸರಿಗಟ್ಟಲು ಸೆರೆನಾ ತುದಿಗಾಲಲ್ಲಿ ನಿಂತಿದ್ದರಿಂದ ಪಂದ್ಯಕ್ಕೆ ವಿಶೇಷ ಮಹತ್ವ ಬಂದಿತ್ತು.

ಆದರೆ ಒಸಾಕ ಅವರ ಐತಿಹಾಸಿಕ ಸಂಭ್ರಮಾಚರಣೆ ಬದಲು ಕೋರ್ಟ್‌ನಲ್ಲಿ ಚೀರಾಟ, ಕಣ್ಣೀರು ಹಾಗೂ ರಂಪಾಟ ಕಂಡುಬಂತು. ಟ್ರೋಫಿ ಹಾಗೂ 38 ಲಕ್ಷ ಡಾಲರ್ ಬಹುಮಾನ ಮೊತ್ತ ಸ್ವೀಕರಿಸಲು ಯುವ ಆಟಗಾರ್ತಿ ಪೋಡಿಯಂ ಏರಿದಾಗ ಸೆರೆನಾ ಅಭಿಮಾನಿಗಳ ಹತಾಶೆ, ಆಕ್ರೋಶ ಮುಗಿಲು ಮುಟ್ಟಿತು.

ಪೋರ್ಚ್‌ಗೀಸ್ ತೀರ್ಪುಗಾರರಾದ ಕಾರ್ಲೋಸ್ ರಮೋಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. "ಪ್ರತಿಯೊಬ್ಬರೂ ಆಕೆಗೆ ಬೆಂಬಲವಾಗಿದ್ದರು. ಆದರೆ ಈ ರೀತಿ ಕೊನೆಯಾಗಿರುವ ಬಗ್ಗೆ ನನಗೆ ಬೇಸರವಿದೆ. ಸೆರೆನಾ ಜತೆ ಯುಎಸ್ ಓಪನ್ ಫೈನಲ್‌ನಲ್ಲಿ ಆಡುವುದು ನನ್ನ ಕನಸಾಗಿತ್ತು. ನಿಮ್ಮೊಂದಿಗೆ ಆಡಿದ್ದಕ್ಕೆ ಹೆಮ್ಮೆ ಇದೆ" ಎಂದು ಒಸಾಕ ಹೇಳಿದರು.

ಮೊದಲ ಸೆಟ್ ಗೆದ್ದು ಪಂದ್ಯದಲ್ಲಿ ಒಸಾಕ ಹಿಡಿತ ಸಾಧಿಸಿದಾಗ, ಎರಡನೇ ಗೇಮ್‌ನಲ್ಲಿ 23 ಗ್ರ್ಯಾಂಡ್‌ಸ್ಲಾಂಗಳ ಒಡತಿಗೆ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಮೋಸ್ ಎಚ್ಚರಿಕೆ ನೀಡಿದರು. ಇದು ಸೆರೆನಾ ಆಕ್ರೋಶಕ್ಕೆ ಕಾರಣವಾಯಿತು. ಸಂಹಿತೆ ಉಲ್ಲಂಘಿಸಿ ಸೆರೆನಾ ಕೋಚ್ ಪ್ಯಾಟ್ರಿಕ್ ಮೊರಟೊಗ್ಲು ಸೆರೆನಾರತ್ತ ಕೈಸನ್ನೆ ಮಾಡಿದ್ದರು. ಹತಾಶೆಯಿಂದ ರ್ಯಾಕೆಟ್ ಅನ್ನು ಕೋರ್ಟ್‌ಗೆ ಬಡಿದ ಕಾರಣಕ್ಕೆ ಮತ್ತೆ ಅಮೆರಿಕನ್ ಆಟಗಾರ್ತಿ ವಿರುದ್ಧ ತೀರ್ಪುಗಾರರು ಪೆನಾಲ್ಟಿ ಪಾಯಿಂಟ್ ವಿಧಿಸಿದರು. 4-3 ಮುನ್ನಡೆಯಲ್ಲಿದ್ದ ಜಪಾನ್ ಆಟಗಾರ್ತಿ ಪೆನಾಲ್ಟಿ ಪಾಯಿಂಟ್ ಲಾಭದಿಂದ 5-3 ಮುನ್ನಡೆ ಪಡೆದರು. ಈ ಹಂತದಲ್ಲಿ ಸೆರೇನಾ, ಅಂಪೈರ್ ವಿರುದ್ಧ "ಸುಳ್ಳ, ನನ್ನ ಪಾಯಿಂಟ್ ಕದಿಯುತ್ತಿದ್ದಿ" ಎಂದು ಚೀರಿದರು. ಅಂತಿಮವಾಗಿ 6-4 ಅಂತರದಲ್ಲಿ ಎರಡನೇ ಸೆಟ್ ಗೆಲ್ಲುವ ಮೂಲಕ 20 ವಯಸ್ಸಿನ ಜಪಾನಿ ಯುವತಿ ಇತಿಹಾಸ ಸೃಷ್ಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News