ಪ್ರೀಸ್ಕೂಲ್‌ನಲ್ಲಿ ದಾಖಲು ಮತ್ತು ಮಾಪನ ವಿಧಾನಗಳು

Update: 2018-09-09 06:28 GMT

►►ಅಧ್ಯಯನ ಮತ್ತು ಅರಿವು

ಯಾವ ವಿಷಯವನ್ನು ತೆಗೆದುಕೊಂಡರೆ ಸ್ಕೋಪ್ ಇರುತ್ತದೆ? ಯಾವುದರಿಂದ ಹೆಚ್ಚಿನ ಅಧಿಕಾರ, ಸಂಬಳ, ಸವಲತ್ತು ಎಲ್ಲಾ ದೊರಕುತ್ತದೆ ಎಂದೆಲ್ಲಾ ಯೋಚನೆ ಮಾಡುವ ಪೋಷಕರು ಅಥವಾ ಹಿರಿಯರು ಮಗುವಿನ ಈಗಿನ ಯಾವ ವರ್ತನೆ, ನಡವಳಿಕೆ, ಒಲವು, ನಿಲುವುಗಳು ಯಾವ ಬಗೆಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ? ಎಂತಹ ಮನಸ್ಥಿತಿಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದು ಯೋಚಿಸುವುದೇ ಇಲ್ಲ. ಇದೇ ಈಗಿನ ಪೋಷಕರ ಮತ್ತು ಶಿಕ್ಷಕರ ದೂರದೃಷ್ಟಿಯ ಕೊರತೆ.

ಶಿಕ್ಷಣ ಹೂರಣ

ಭಾಗ-8

ಮನೆಗಲಿಕೆಯೆಂಬುದು ನಿಜವಾದ ಶಿಕ್ಷಣ ಎಂಬ ಅರಿವು ನಮ್ಮ ಪೋಷಕರಿಗೆ ಬರುವವರೆಗೂ ಮಕ್ಕಳ ಕಲಿಕೆಯು ಗುಣಮಟ್ಟದ್ದಾಗುವುದಿಲ್ಲ. ಶಾಲೆಯಲ್ಲಿ ಅಲ್ಲ ನಿಜವಾದ ಶಿಕ್ಷಣ ಎಂಬುದು ಬಹಳಷ್ಟು ಜನಕ್ಕೆ ಗೊತ್ತೇಇಲ್ಲ. ಅದರಲ್ಲಿಯೂ ಶಾಲೆಯೆಂಬ ಸಾಮಾಜಿಕ ಶಿಕ್ಷಣ ಸಂಸ್ಥೆಯ ಪ್ರಾಯ ಬಹಳ ಚಿಕ್ಕದು. ಮನೆಗಲಿಕೆಯ ಅನುಭವದ ಕಾಲ ಸಮಾಜದಲ್ಲಿ ಬಹು ದೀರ್ಘವಾದದ್ದು. ಇರಲಿ, ಇಲ್ಲಿ ಹೇಳಲು ಹೊರಟಿರುವ ವಿಷಯವೇನೆಂದರೆ, ಶಿಕ್ಷಣದ ಭಾರವನ್ನು ಶಾಲೆಯ ಮೇಲೆ ಸಂಪೂರ್ಣವಾಗಿ ಹೊರಿಸಿ ಆರಾಮವಾಗಿ ಯಾರಾದರೂ ಪೋಷಕರು ಇದ್ದಾರೆಂದರೆ ಅವರಿಗೆ ತಿಳುವಳಿಕೆಯ ಕೊರತೆ ಇದೆ ಎಂದೇ ಅರ್ಥ. ಅದರಲ್ಲಿಯೂ ಶಾಲೆಗೆ ಹೋಗುವ ಮುನ್ನ ಮನೆಯಲ್ಲಿ ದೊರಕುವ ಶಿಕ್ಷಣದ ಬಗ್ಗೆ ಮತ್ತಷ್ಟು ಗುಣಮಟ್ಟದ ಚಿಂತನೆಯನ್ನು ನಡೆಸಬೇಕಿದೆ ಮತ್ತು ಯೋಜನೆಗಳನ್ನು ಮಾಡಬೇಕಿದೆ. ಮಲೇಶಿಯಾವೂ ಸೇರಿದಂತೆ ಎಷ್ಟೋ ಮುಂದುವರಿದ ರಾಷ್ಟ್ರಗಳು ಸಾರ್ವಜನಿಕವಾಗಿರುವ ಶಾಲಾಪೂರ್ವ (ಪ್ರೀಸ್ಕೂಲ್) ಕಲಿಕಾ ಕೇಂದ್ರಗಳು ತಾವು ಸೇರಿಸಿಕೊಳ್ಳುವ ಮಕ್ಕಳಿಗೆ ಕಲಿಸುವ ಕೆಲಸದ ಜೊತೆಜೊತೆಗೆ ಪೋಷಕರನ್ನೂ ಕೂಡ ತರಬೇತುಗೊಳಿಸುತ್ತಾರೆ. ಈ ತರಬೇತಿ ಪರೋಕ್ಷವಾಗಿರುತ್ತದೆ. ಆದರೆ ನೀಡುವ ಮಾರ್ಗದರ್ಶನ ಮಾತ್ರ ನೇರವಾಗಿರುತ್ತದೆ.

► ಶಾಲಾಪೂರ್ವ ಕಲಿಕಾ ಕೇಂದ್ರಗಳು

ಶಾಲಾಪೂರ್ವ ಕಲಿಕಾ ಕೇಂದ್ರಗಳು ಮಕ್ಕಳ ಕಲಿಕೆಯ ವಿಷಯದಲ್ಲಿ ಗಮನ ಹರಿಸಬೇಕಾದ ಮುಖ್ಯ ಅಂಶಗಳೆಂದರೆ, ಸೃಜನಶೀಲತೆಯನ್ನು ಮಕ್ಕಳಲ್ಲಿ ಬೆಳೆಸುವುದು. ಕೆಲಸಗಳನ್ನು ಮಾಡುವಲ್ಲಿ ಹೇಳಿದಷ್ಟು ಮಾಡುವ ಬದಲು ತಾನೇ ಆಲೋಚನೆ ಮಾಡುವ ಅಥವಾ ಚಿಂತನೆಗಳನ್ನು ಮಾಡುವಂತಹ ಗುಣಗಳನ್ನು ರೂಢಿಸುವುದು. ಇದನ್ನೆಲ್ಲಾ ಮಾಡಲು ಮಕ್ಕಳಿಗೆ ಆಕರ್ಷಿತವಾಗುವಂತೆ ಮಾಡಬೇಕು. ಶಿಕ್ಷಕರೇ ಆಗಲಿ, ಪೋಷಕರೇ ಆಗಲಿ ಮೊದಲು ಮಕ್ಕಳ ಮನರಂಜಿಸಿ ತಮ್ಮ ಆಕರ್ಷಣೆಗೆ ಒಳಗಾಗುವಂತೆ ಮಾಡಿದರೆ ಆಮೇಲೆ ಅವರಿಗೆ ಹೇಳಿಕೊಡುವುದು ಪಥ್ಯವಾಗುತ್ತದೆ. ಆದ್ದರಿಂದಲೇ ಆಟ ಮೂಲಕ ಪಾಠ ಮಾಡುವ ಕಡೆಗೆಯೇ ಎಲ್ಲಾ ಮುಂದುವರಿದ ರಾಷ್ಟ್ರಗಳೂ ಹೆಚ್ಚಿನ ಗಮನ ಕೊಡುವುದು. ಅವು ಬಹಳ ಹಿಂದೆಯೇ ಮಕ್ಕಳಿಗೆ ಬೋಧನಾ ಕಲಿಕೆಗಿಂತಲೂ ಆಟದ ಕಲಿಕೆಯೇ ಪರಿಣಾಮಕಾರಿ ಎಂಬುದನ್ನು ಕಂಡುಕೊಂಡಿವೆ. ಇಸ್ಲಾಂನಲ್ಲಿಯೂ ಕೂಡಾ ಪ್ರವಾದಿ ಮುಹಮ್ಮದರು ಮಗುವಿನ ಕಾಲಾವಧಿಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದು, ಎಲ್ಲವೂ ಏಳೇಳು ವರ್ಷಗಳ ಅವಧಿಯನ್ನು ಹೊಂದಿರುತ್ತವೆ. ಮೊದಲನೇ ಏಳುವರ್ಷದ ಅವಧಿಯನ್ನು ಮಕ್ಕಳು ತಮ್ಮ ಸಂತೋಷ ಮತ್ತು ಆನಂದವನ್ನು ಸೆಲೆಯಾಗಿಟ್ಟುಕೊಂಡು ಆಟದ ಮೂಲಕ ಕಲಿಯುವುದನ್ನು ಕೇಂದ್ರೀಕರಿಸುತ್ತದೆ. ಆಟದ ಮೂಲಕ ಕಲಿಯುವ ಮಕ್ಕಳು ಆ ಮೂಲಕ ತಮ್ಮ ವ್ಯಕ್ತಿತ್ವವನ್ನೇ ಬೆಳೆಸಿಕೊಳ್ಳುತ್ತಾರೆ. ಸಂಶೋಧನೆಗಳೂ ಕೂಡ ದೃಢೀಕರಿಸುವುದೇನೆಂದರೆ ಆಟೋಟದ ಮೂಲಕ ಕಲಿಯುವ ಮಕ್ಕಳ ಕಲಿಕೆಯು ಸಾಮಾನ್ಯ ಸಾಂಪ್ರದಾಯಕ ಮಾದರಿಯ ಕಲಿಕೆಗಿಂತಲೂ ಉತ್ತಮವಾಗಿರುತ್ತದೆ ಎಂಬುದು. ಅಲ್ಲದೇ ಆಟದ ಮೂಲಕ ಕಲಿಯುವ ಮಕ್ಕಳು ಸಮಸ್ಯೆಗಳು ಎದುರಾದಾಗ ಅವನ್ನು ಬಿಡಿಸುವಲ್ಲಿ ನಕಾರಾತ್ಮಕವಾದ ಗಾಂಭೀರ್ಯವನ್ನು ಹೊಂದದೆಯೇ ತಾವು ಆಟದ ಸಮಸ್ಯೆಗಳನ್ನು ಎದುರಿಸುವಂತೆಯೇ ಅವನ್ನೂ ಬಗೆ ಹರಿಸಿಕೊಳ್ಳಲು ಯತ್ನಿಸುತ್ತಾರೆ. ಮೇಲಾಗಿ ದೃಷ್ಟಿಕೋನವೇ ಆ ರೀತಿಯದ್ದಾಗಿರುತ್ತದೆ.

ಒಟ್ಟಾರೆ ಪೋಷಕರಾಗಲಿ, ಶಿಕ್ಷಕರಾಗಲಿ ತಮ್ಮ ಮಕ್ಕಳು ಪರಿಣಾಮಕಾರಿಯಾಗಿ ಕಲಿಯಬೇಕೆಂದರೆ ಆಟ ಆಡಿ, ಕತೆ ಹೇಳಿ, ಹಾಡಿ ಮತ್ತು ಕುಣಿಯಿರಿ. ಅದರಲ್ಲಿಯೇ ಕಲಿಕೆಯ ಅಂಶಗಳನ್ನು ಅಳವಡಿಸಿ. ಅಷ್ಟೇ. ಅದಕ್ಕಿಂತ ಉತ್ತಮದ ಕಲಿಕೆಯ ಅನುಭವವನ್ನು ಮಕ್ಕಳಿಗೆ ಕೊಡಲಾರಿರಿ. ಆಡುವುದು ಮಕ್ಕಳ ಜನ್ಮಸಿದ್ಧ ಹಕ್ಕು ಎಂಬುದನ್ನು ಎಂದಿಗೂ ಮರೆಯಬಾರದು.

► ದಾಖಲು ಮಾಡುವುದೇಕೆ?

ಕಲಿಕೆಯ ಹಂತಗಳಲ್ಲಿ ಮಕ್ಕಳ ಅಭಿವೃದ್ಧಿಯನ್ನು ದಾಖಲು ಮಾಡುವುದು ಕೂಡ ಅತಿ ಮುಖ್ಯವಾದುದು. ಶೈಕ್ಷಣಿಕ ಅಂಶಗಳನ್ನು ದಾಖಲು ಮಾಡುವಂತೆ ಮಗುವಿನ ವ್ಯಕ್ತಿತ್ವದ ವಿಕಾಸವನ್ನೂ ಕೂಡಾ ದಾಖಲು ಮಾಡಬೇಕು. ಶಿಕ್ಷಕರಿಗೆ ಮತ್ತು ಪೋಷಕರಿಬ್ಬರಿಗೂ ಈ ದಾಖಲೆಯು ಮಗುವನ್ನು ಅರಿಯಲು ಮತ್ತು ತರಬೇತಿಗಳನ್ನು ನೀಡಲು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಇದು ಮನೋವೈಜ್ಞಾನಿಕವಾಗಿ ಮಗುವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದು. ಈ ಅಧ್ಯಯನದ ದಾಖಲುಗಳನ್ನು ಮಾಡಬೇಕಾಗಿರುವುದು ಯಾವುದ್ಯಾವುದರ ಮೂಲಕವೆಂದರೆ,

1.ಕಲಿಕೆಯ ಸಮಯದಲ್ಲಿ ಮಕ್ಕಳ ಕ್ರಿಯೆಗಳಲ್ಲಿ ತೋರುವ ಒಲವುಗಳನ್ನು, ಒಡನಾಟದಲ್ಲಿರುವಾಗಿನ ವರ್ತನೆಗಳನ್ನು ಮತ್ತು ಅವರ ಪ್ರತಿಕ್ರಿಯೆಗಳನ್ನು ಗಮನಿಸಿಕೊಳ್ಳಬೇಕು.

2.ಶಿಕ್ಷಕರು ಅಥವಾ ತರಬೇತಿದಾರರು ನೀಡುವ ನಿರ್ದೇಶನಗಳನ್ನು ಮಕ್ಕಳು ಹೇಗೆ ತೆಗೆದುಕೊಳ್ಳುತ್ತಾರೆ? ಹೇಗೆ ಪ್ರತಿಕ್ರಿಯಿಸುತ್ತಾರೆ? ಹೇಗೆ ಸ್ಪಂದಿಸುತ್ತಾರೆ? ಇವೆಲ್ಲವೂ ಕೂಡ ಮುಖ್ಯವೇ.

3.ಕ್ರಿಯಾಶೀಲವಾಗಿ ಕಲಿಕೆಯಲ್ಲಿ ತೊಡಗಿರುವ ಸಮಯದಲ್ಲಿ ಮಕ್ಕಳು ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೋ, ನಿಧಾನವಾಗಿ ಸ್ಪಂದಿಸುತ್ತಾರೋ ಅಥವಾ ಪ್ರತಿಕ್ರಿಯಿಸುವುದೇ ಇಲ್ಲವೋ; ಹೀಗೆ ಎಲ್ಲವನ್ನೂ ತಿಂಗಳು ತಿಂಗಳೂ ಗಮನಿಸಿಕೊಳ್ಳಬೇಕು.

4.ತಮಗೆ ಬೋಧಿಸಿದ್ದನ್ನು ಅಥವಾ ತರಬೇತಿ ನೀಡಿದ್ದನ್ನು ತಾವು ಮಾಡುವುದು ಒಂದು ಅಂಶ. ಅದರಂತೆಯೇ ಇನ್ನೂ ಮುಖ್ಯವಾಗಿರುವುದು ಮತ್ತೊಬ್ಬರಿಗೆ ಹೇಗೆ ಅದನ್ನು ದಾಟಿಸುತ್ತಾರೆ ಎಂಬುದನ್ನು ಗಮನಿಸಬೇಕು. ವಾಚಿಕವಾಗಿ ಹೇಳುವುದು, ಜೊತೆಗೂಡಿ ಮಾಡುವುದು, ಹೇಳಿಕೊಡಲು ಹೋಗದೆಯೇ ಇರುವುದು; ಏನು ಮಾಡುತ್ತಾರೆ ಎಂಬುದನ್ನು ನೋಡಬೇಕು. ಇನ್ನೂ ಸ್ಪಷ್ಟವಾಗಿ ತಿಳಿಸುವುದಾದರೆ, ಇತರರಿಗೆ ಕಲಿಸುವ ಮೂಲಕ ತಾವು ಕಲಿಯುವುದನ್ನು ಮಕ್ಕಳಿಗೆ ಹೇಳಿಕೊಡಬೇಕು. ಇದು ಬಹಳ ಪರಿಣಾಮಕಾರಿಯಾದ ಕಲಿಕೆಯ ವಿಧಾನ. ಇದರಿಂದ ಅವರ ಸಾಮಾಜೋಮನಸ್ಥಿತಿಯ ವಿಕಾಸ ಉಂಟಾಗುತ್ತದೆ.

5.ಮಕ್ಕಳು ಬರೆದಿರುವ ಬರಹಗಳು, ಇಟ್ಟುಕೊಂಡಿರುವ ಪುಸ್ತಕಗಳು, ಮಾಡುವ ಕಲೆ ಮತ್ತು ಕರಕುಶಲ ಕೆಲಸಗಳು; ಇತ್ಯಾದಿಗಳನ್ನು ಮಾಡುವಾಗ ಅನುಸರಿಸುವ ಅಚ್ಚುಕಟ್ಟುತನ ಅಥವಾ ಬೇಜವಾಬ್ದಾರಿತನ ಅಥವಾ ಸೋಮಾರಿತನ; ಇತ್ಯಾದಿಗಳನ್ನೆಲ್ಲಾ ಗಮನಿಸಬೇಕು.

6.ಮಕ್ಕಳು ತಮ್ಮ ನಡವಳಿಕೆ, ಶೈಲಿ, ಮಾತು ಇತ್ಯಾದಿಗಳ ಮೂಲಕ ಇತರರಲ್ಲಿ ಯಾವ ರೀತಿಯ ಅಭಿಪ್ರಾಯ ಅಥವಾ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತಾರೆ ಎಂಬುದನ್ನು ಗಮನಿಸಬೇಕು.

7.ಕೇಸ್ ಸ್ಟಡಿ ಎಂಬುದು ಬಹಳ ವೌಲಿಕವಾದದ್ದು. ಇದು ಖಂಡಿತವಾಗಿ ಶಾಲೆಯಲ್ಲಿ ಮತ್ತು ಮನೆಯಲ್ಲಿ ಎರಡೂ ಕಡೆ ಆಗಬೇಕು. ಇದು ಅವರ ಕಲಿಕೆಯ ಅನುಭವದ ವಿಷಯಕ್ಕೆ ಮಾತ್ರವಲ್ಲದೇ ವ್ಯಕ್ತಿತ್ವ ವಿಕಸನದ ವಿಷಯದಲ್ಲಿಯೂ ಕೂಡ ಬಹಳ ಪ್ರಮುಖ ಪಾತ್ರವಹಿಸುತ್ತದೆ.

8.ಕಲಿಕೆಯ ಅನುಭವ ನೀಡುವುದೆಂದರೆ, ವ್ಯಕ್ತಿತ್ವದ ವಿಕಸನ ಎಂಬುದನ್ನು ಖಂಡಿತ ಮರೆಯಬಾರದು.

ಇಷ್ಟೆಲ್ಲಾ ಹೇಳುತ್ತಿರುವುದು ಪೂರ್ವಶಾಲಾ ಹಂತದಲ್ಲಿ ಎಂಬುದನ್ನು ಮರೆಯಬೇಡಿ. ಪ್ರೀಸ್ಕೂಲ್ ಹಂತದಲ್ಲಿ ಪೋಷಕರು ಏನೇನೆಲ್ಲಾ ನಿರ್ಲಕ್ಷಿಸುತ್ತಾರೆಯೋ ಅದೆಲ್ಲವೂ ಮುಂದೆ ಸಮಸ್ಯೆಗಳಾಗಿ ಕಾಡುವ ಸಾಧ್ಯತೆ ಗಳಿರುತ್ತವೆ. ಏಕೆಂದರೆ, ಮಕ್ಕಳ ಪ್ರತಿಯೊಂದು ವಿಷಯವೂ ಕೂಡಾ, ಅದು ನಕಾರಾತ್ಮಕವಾಗಿರುವುದೇ ಆಗಿರಲಿ, ಸಕಾರಾತ್ಮಕವೇ ಆಗಿರುವುದಾಗಲಿ ವಿಕಾಸ ಹೊಂದುತ್ತಾ, ಅಭಿವೃದ್ಧಿ ಹೊಂದುತ್ತಾ ಹೋಗುವುದು. ಇಲ್ಲೇ ಬಹು ದೊಡ್ಡ ಸಮಸ್ಯೆ ಇರುವುದು. ಮಕ್ಕಳ ಎಷ್ಟೋ ಗುಣಗಳು ಆಟದ ವಿಷಯಗಳಂತೆ ಅಥವಾ ಅಷ್ಟೇನೂ ಗಂಭೀರವಲ್ಲ ಎನಿಸುವ ವಿಷಯಗಳಂತೆ ತೋರುವವು ಮುಂದೆ ಮನಸ್ಥಿತಿಯ ಅಥವಾ ವರ್ತನಾ ವಿಚಾರದ ಗಂಭೀರ ಸಮಸ್ಯೆಯಾಗಿ ತೋರಬಹುದು.

► ಸಂಕೋಚವು ಸಂಕುಚಿತವಾಯಿತು

ಒಂದು ಕೇಸ್ ಸ್ಟಡಿಯನ್ನು ಗಮನಿಸೋಣ. ಒಬ್ಬ ಹುಡುಗ ಸಣ್ಣ ವಯಸ್ಸಿನಿಂದಲೂ ಹುಡುಗಿಯರ ಜೊತೆ ಆಡಲು ಇಷ್ಟಪಡುತ್ತಿರಲಿಲ್ಲ. ಶಾಲೆಯಲ್ಲಿ ಅವರ ಜೊತೆಗೆ ಕೂರುವುದು, ಆಡುವುದು, ವಸ್ತುಗಳನ್ನು ಹಂಚಿಕೊಳ್ಳುವುದು ಇತ್ಯಾದಿಗಳಲ್ಲಿಯೂ ಒಲವನ್ನು ತೋರುತ್ತಿರಲಿಲ್ಲ. ಸಾಮೂಹಿಕವಾಗಿ ನಡೆಸುವ ಚಟುವಟಿಕೆಗಳಲ್ಲಿ ಹುಡುಗಿಯರ ಕೈ ಹಿಡಿಯುವುದು, ಅವರನ್ನು ಮುಟ್ಟುವುದು ಕೂಡ ಅವನಿಗೆ ಸಹ್ಯವಾಗುತ್ತಿರಲಿಲ್ಲ. ಅವನ ಸ್ವಭಾವವೇ ಹಾಗೆ ಎಂದು ಪೋಷಕರೂ ಮತ್ತು ಶಿಕ್ಷಕರು ಮಾತಾಡಿಕೊಂಡು ಸುಮ್ಮನಾಗಿಬಿಟ್ಟರು. ಹೆಚ್ಚೆಂದರೆ ಇಷ್ಟು ಸಂಕೋಚಪಟ್ಟುಕೊಂಡರೆ ಹೇಗೆ ಎಂದು ತಿಳುವಳಿಕೆ ನೀಡಲು ಯತ್ನಿಸುತ್ತಿದ್ದರು. ಸರಿ, ಈ ಕತೆ ಇಷ್ಟಕ್ಕೇ ಮುಗಿಯಲಿಲ್ಲ. ಅವನು ಶಾಲೆ ಕಾಲೇಜುಗಳನ್ನು ಮುಗಿಸಿದ. ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡ. ಮದುವೆಯಾಯಿತು. ಈಗ ಆ ಹುಡುಗನ ಆ ಸಂಕೋಚದ ಸ್ವಭಾವ ಬಹು ದೊಡ್ಡ ಸಮಸ್ಯೆಯಾಗಿ ಕುಟುಂಬವನ್ನು ಕಾಡತೊಡಗಿತು. ತಾನು ತನ್ನ ಹೆಂಡತಿಯ ಜೊತೆ ಸಲಿಗೆಯಿಂದ ಇರುವುದಿರಲಿ, ಮಾತುಕತೆಗಳು ಮತ್ತು ಸಾಮಿಪ್ಯಗಳೆಲ್ಲಾ ಕೂಡಾ ಅಗತ್ಯ ಮತ್ತು ಅನಗತ್ಯಗಳನ್ನೇ ಆಧರಿಸುತ್ತಿದ್ದವು. ಭಾವನಾತ್ಮಕ ಅಂಶವಂತೂ ಇರಲೇ ಇಲ್ಲ. ಅದೂ ಇರಲಿ, ಅವನ ಹೆಂಡತಿಯ ಸೋದರರು, ಸೋದರ ಸಂಬಂಧಿಗಳು ಅಥವಾ ಸ್ನೇಹಿತರು ಅವಳ ಮೈ ಮುಟ್ಟಿ ಮಾತಾಡಿಸುವುದೋ ಅಥವಾ ಸಲುಗೆಯಿಂದ ವರ್ತಿಸುವುದೋ ಅವನಿಗೆ ಹಿಡಿಸುತ್ತಿರುತ್ತಿರಲಿಲ್ಲ. ಆ ಹುಡುಗಿಯೋ ಬಹಳ ಮುಕ್ತ ಮತ್ತು ಸ್ವತಂತ್ರ ಮನಸ್ಥಿತಿಯ ಧೋರಣೆಯ ಕುಟುಂಬದಿಂದ ಬಂದಿದ್ದವಳಾಗಿದ್ದಳು. ಅವಳ ಮನೆಯಲ್ಲಿ ಬರುವ ಆತ್ಮೀಯ ಬಂಧುಗಳು, ಆಪ್ತ ಸ್ನೇಹಿತರು ಭೇಟಿಯಾದಾಗ ಮತ್ತು ಬೀಳ್ಕೊಡುವಾಗ ಅಪ್ಪಿಕೊಳ್ಳುವುದು, ಹುಟ್ಟಿದ ಹಬ್ಬ ಅಥವಾ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮುತ್ತಿಡುವುದು ಕೂಡಾ ಸಹಜವಾದಂತಹ ವಿಷಯಗಳೇ ಆಗಿದ್ದವು. ಇದು ಅವನ ರುಗ್ಣ ಮನಸ್ಥಿತಿಗೆ ಮತ್ತಷ್ಟು ಇಂಧನವನ್ನು ಸುರಿಯುವುದೇ ಆಗಿತ್ತು. ಇದು ಅನುಮಾನಿಸುವುದಕ್ಕೆ ದಾರಿಯಾಗಿ, ಒಬ್ಬರನ್ನೊಬ್ಬರು ಅಪಮಾನಿಸುವುದಕ್ಕೂ ಕಾರಣವಾದವು. ಅದರಿಂದಾಗಿ ಮನಸ್ತಾಪಗಳು, ದೋಷಾರೋಪಣೆಗಳು ಮತ್ತು ಜಗಳಗಳು ಆಗುತ್ತಿದ್ದವು. ಕೊನೆಗೆ ಈಗ ಕುಟುಂಬವು ಕುಟುಂಬ ನ್ಯಾಯಾಲಯಕ್ಕೆ ಎಡತಾಕುವಂತಾಗಿದೆ. ಇಲ್ಲಿ ಗಮನಿಸಬೇಕಾಗ ಬಹುಮುಖ್ಯ ಅಂಶವೆಂದರೆ, ಮಗುವು ಯಾವುದೇ ಅತಿರೇಕದ ಅಥವಾ ಅಪರೂಪದ ಅಥವಾ ಅನುಚಿತ ವರ್ತನೆ ತೋರಿದರೆ ಸಮಾಲೋಚನೆ ಮಾಡಿಸುವ ಅಥವಾ ಪೋಷಕರು ಸಮಾಲೋಚನೆಗೆ ತೆರೆದುಕೊಳ್ಳುವ ಯೋಚನೆಯನ್ನೇ ಮಾಡುವುದಿಲ್ಲ. ಅದು ಹೊಳೆಯುವುದೂ ಇಲ್ಲ. ಶಾಲೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಅಕಾಡಮಿಕ್ ಪರ್ಫಾಮೆನ್ಸ್ ಅಷ್ಟೇ ಮುಖ್ಯವಾಗಿರುತ್ತದೆ. ಇನ್ನು ಮನೆಯವರಿಗೆ ಅದರ ಅರಿವೇ ಇಲ್ಲ. ನಾನು ಇಲ್ಲಿ ಹೇಳುತ್ತಿರುವ ಹುಡುಗನ ವಿಷಯದಲ್ಲಿ ಬಾಲ್ಯದಲ್ಲಿ ಯಾವುದನ್ನು ಸಂಕೋಚದ ಪ್ರವೃತ್ತಿ ಎಂದು ಅಂದುಕೊಳ್ಳುತ್ತಿದ್ದರೋ ಅದೇ ಮುಂದೆ ಸಂಕುಚಿತ ಮನೋಭಾವವಾಗಿ, ಅದಕ್ಕೂ ಮಿಗಿಲಾಗಿ ಮನೋರೋಗವಾಗಿ ಪರಿಣಮಿಸುತ್ತದೆ ಎಂಬುದನ್ನು ಆ ಹುಡುಗನ ಪೋಷಕರಾಗಲಿ, ಶಿಕ್ಷಕರಾಗಲಿ ಆಲೋಚಿಸಿರಲೇ ಇಲ್ಲ. ಯಾವ ವಿಷಯವನ್ನು ತೆಗೆದುಕೊಂಡರೆ ಸ್ಕೋಪ್ ಇರುತ್ತದೆ? ಯಾವುದರಿಂದ ಹೆಚ್ಚಿನ ಅಧಿಕಾರ, ಸಂಬಳ, ಸವಲತ್ತು ಎಲ್ಲಾ ದೊರಕುತ್ತದೆ ಎಂದೆಲ್ಲಾ ಯೋಚನೆ ಮಾಡುವ ಪೋಷಕರು ಅಥವಾ ಹಿರಿಯರು ಮಗುವಿನ ಈಗಿನ ಯಾವ ವರ್ತನೆ, ನಡವಳಿಕೆ, ಒಲವು, ನಿಲುವುಗಳು ಯಾವ ಬಗೆಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ? ಎಂತಹ ಮನಸ್ಥಿತಿಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದು ಯೋಚಿಸುವುದೇ ಇಲ್ಲ. ಇದೇ ಈಗಿನ ಪೋಷಕರ ಮತ್ತು ಶಿಕ್ಷಕರ ದೂರದೃಷ್ಟಿಯ ಕೊರತೆ. ಇಲ್ಲಿ ಮುಖ್ಯವಾಗಿ ಹೇಳಹೊರಟಿರುವುದು ಏನೆಂದರೆ, ಮಕ್ಕಳ ಶಾಲಾ ಅವಧಿಯಲ್ಲಿ ಅಕಾಡಮಿಕ್ ಆಗಿರುವುದು ಮಾತ್ರವಲ್ಲದೇ ವರ್ತನೆ, ಧೋರಣೆ, ಒಲವು, ನಿಲುವು, ಪ್ರತಿಕ್ರಿಯೆ, ಸ್ಪಂದಿಸುವ ರೀತಿ; ಹೀಗೆ ಎಲ್ಲಾ ಮನಸ್ಥಿತಿಯ ವಿಷಯಗಳನ್ನೂ ಕೂಡಾ ದಾಖಲು ಮಾಡುತ್ತಾ ಹೋಗುವುದು ಮಾತ್ರವಲ್ಲದೇ, ಅವುಗಳನ್ನು ವಿವೇಚಿಸುವ, ವಿಶ್ಲೇಷಿಸುವ, ತುಲನೆ ಮಾಡುವ ಬಗ್ಗೆಯೂ ಗಮನ ಕೊಟ್ಟು ಸಮಾಲೋಚನೆ ಅಥವಾ ಸಂದರ್ಭಗಳನ್ನು ಸೃಷ್ಟಿಸುವ ಮೂಲಕ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News