ಪ್ರಳಯವೆಂಬ ಹುಸಿ ಭೀತಿಗೆ ವೈಜ್ಞಾನಿಕ ಮನೋಭಾವವೇ ಪರಿಹಾರ

Update: 2018-09-09 06:47 GMT

ಮಕ್ಕಳಲ್ಲಿ ಬಾಲ್ಯದಲ್ಲೇ ತರ್ಕಬದ್ಧವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸುವುದೇ ಇದಕ್ಕೆ ಪರಿಹಾರ ಮಾರ್ಗ. ಗಾಳಿ ಸುದ್ದಿಗಳನ್ನು ನಂಬದ ಹಾಗೆ, ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದಾಗ ಮಾತ್ರವೇ ಈ ರೀತಿಯ ಶೋಷಣೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸಂವಿಧಾನದ ಮೌಲ್ಯಗಳಿಗೆ ಒತ್ತು ಕೊಟ್ಟು ಮಾನವವಾದಿಗಳಾಗಿ ಬದುಕುವುದು ಹಾಗೂ ಪ್ರಶ್ನಿಸುವ ಮನೋಭಾವನ್ನು ಬೆಳೆಸಿದಾಗ ಮಾತ್ರವೇ ದೇಶ ವೈಜ್ಞಾನಿಕವಾಗಿ ಬೆಳೆಯಲು ಸಾಧ್ಯ.

‘ಜಗತ್ತೇ ನಾಶವಾದ ಪ್ರಳಯ. ಇಡೀ ಜಗತ್ತೇ ನೀರಿನೊಳಗೆ ಮುಳುಗಿದ ಪ್ರಳಯ’ ಎಂಬ ಕುರಿತಂತೆ ಹಲವಾರು ಉಲ್ಲೇಖಗಳನ್ನು ನಾವು ನೋಡುತ್ತೇವೆ. ಮಾನವನಿಗೆ ಪ್ರಳಯದ ಬಗ್ಗೆ ಅದರಲ್ಲೂ ಜಲಪ್ರಳಯದ ಬಗ್ಗೆ ಭಾರೀ ಭೀತಿ ಇದೆ. ಪ್ರಳಯ, ಜಲ ಪ್ರಳಯ ಎಂಬುದು ಪ್ರಕೃತಿಯ ಅಸಮತೋಲನದಿಂದ ಸೃಷ್ಟಿಯಾಗುತ್ತದೆಯೇ ಹೊರತು ಮೌಢ್ಯಗಳಿಂದಾಗಿ ಅಲ್ಲ. ಈ ಪ್ರಳಯದ ಬಗ್ಗೆ ಜನಸಾಮಾನ್ಯರಲ್ಲಿ ಭೀತಿ ಸಹಜ. ಕಾರಣ, ಪ್ರಳಯದ ವೇಳೆ ಮಾನವನ ಪ್ರಯಾಣದ ಸೀಮೆ ಸೀಮಿತವಾಗುತ್ತದೆ.

ದೂರ ಪ್ರಯಾಣಕ್ಕೆ ಸಾಧ್ಯವಾಗುವುದಿಲ್ಲ. ಒಂದು ಸ್ಥಳದಲ್ಲಿ ನೆರೆ, ಅತಿವೃಷ್ಟಿ, ಸುನಾಮಿ ಸಂಭವಿಸಿದಾಗ, ದೃಷ್ಟಿ ನೋಟ ಹೋಗುವವರೆಗೆ ನೀರೇ ಕಾಣುವುದು. ಆಗ ಜಗತ್ತೇ ಮುಳುಗಿದ ಮನೋಸ್ಥಿತಿಯನ್ನು ಸಹಜ ಮಾನವರು ಹೊಂದುತ್ತಾರೆ. ಕೆಲವು ವರ್ಷಗಳ ಹಿಂದೆ ಜಗತ್ತು 2000ನೇ ಇಸವಿಯಲ್ಲಿ ಅಂತ್ಯವಾಗುತ್ತದೆ ಎಂಬ ಭೀತಿಯನ್ನು ಹಬ್ಬಲಾಗಿತ್ತು. ಆ ಸಮಯದಲ್ಲಿ ಕೆಲವರ ಭವಿಷ್ಯದ ಪ್ರಕಾರ, ಬೆಂಗಳೂರು, ಕೊಡಗು ಮುಳುಗುತ್ತದೆ. ಆದರೆ ಪುಟ್ಟಪರ್ತಿ ಮುಳುಗುವುದಿಲ್ಲ. ಅಲ್ಲಿ ಪವಾಡ ಪುರುಷ ಇದ್ದಾನೆ ಎಂಬ ವದಂತಿಯನ್ನು ಹಬ್ಬಲಾಗಿತ್ತು. ಸಹಜವಾಗಿ ಬೆಂಗಳೂರು, ಕೊಡಗು ಇವುಗಳು ಎತ್ತರದ ಪ್ರದೇಶದಲ್ಲಿವೆ. ಅವುಗಳು ಮುಳುಗಬೇಕಾದರೆ ಈ ಪ್ರದೇಶ ಮುಳುಗಲೇ ಬೇಕು. ಅದರಲ್ಲೂ ದ.ಕ. ಜಿಲ್ಲೆಯಿಂದ ಹೊರಡುವ ವಾರಪತ್ರಿಕೆಯೊಂದು ವಿಶೇಷ ಪುರವಣಿಯನ್ನೇ ಪ್ರಕಟಿಸಿತ್ತು. ಇದರ ಹಿಂದಿದ್ದದ್ದು ಸ್ಥಾಪಿತ ಶಕ್ತಿ ಎಂಬ ಮಾತು ಕೇಳಿ ಬಂದಿತ್ತು. ಕರಾವಳಿಯೇ ಮುಳುಗಿ ಹೋಗುತ್ತದೆ ಎಂಬ ಭಯವನ್ನು ಹುಟ್ಟಿಸಿ, ಇದಕ್ಕಾಗಿ ಹಲವು ಮೌಢ್ಯಗಳೂ ಒಟ್ಟಾದವು. ಪ್ರಳಯ ಸಂಭವಿಸುತ್ತದೆ ಎಂಬ ಊಹಾಪೋಹದ ಜತೆಗೆ ಪ್ರಳಯದಿಂದ ರಕ್ಷಿಸಲು ತಥಾಕಥಿಕ ದೇವ ಮಾನವರು ಯಾಗ ಯಜ್ಞಗಳ ಮೂಲಕ ಪ್ರಳಯವನ್ನು ತಡೆಯುವ ಶಕ್ತಿಯನ್ನೂ ಪ್ರದರ್ಶಿಸುತ್ತಾರೆ.

ಆದರೆ ಇವೆಲ್ಲಾ ಸಾಧ್ಯವೇ ಇಲ್ಲ. ಪ್ರಕೃತಿಯು ಅಸಮತೋಲನಗೊಂಡು ಸಂಭವಿಸುವ ಅಥವಾ ಪ್ರಕೃತಿ ಸಹಜ ದುರಂತಗಳನ್ನು ಯಾವುದೇ ಶಕ್ತಿ ತಡೆಯುವುದಿಲ್ಲ ಎಂಬ ಕನಿಷ್ಠ ಜ್ಞಾನವನ್ನು ನಾವು ಹೊಂದಿರಬೇಕಾಗುತ್ತದೆ. ನನಗಾಗ 10 ವರ್ಷವಿರಬೇಕು. ಇಟಲಿಯ ತಜ್ಞನೊಬ್ಬ, ಇಡೀ ಜಗತ್ತೇ ಪ್ರಳಯದಿಂದ ಮುಳುಗಿ ಹೋಗುತ್ತದೆ ಎಂಬ ಪ್ರಚಾರ ಮಾಡಿದ್ದ. ನಾನು ಬಾಲಕನಾಗಿದ್ದರಿಂದ ಸಹಜವಾಗಿಯೇ ಭಯಗೊಂಡಿದ್ದೆ. ತಾಯಿ ಬಳಿ ಪದೇ ಪದೇ ಈ ಬಗ್ಗೆ ಪ್ರಶ್ನಿಸಿದ್ದೆ. ಅದಕ್ಕೆ ಅಮ್ಮ ನೋಡೋಣ, ಏನೂ ಆಗದು ಎಂದು ಧೈರ್ಯ ತುಂಬಿದ್ದರು. ಶಾಲೆಯಲ್ಲೂ ಈ ಬಗ್ಗೆ ಪ್ರಶ್ನಿಸಿದ್ದೆ.

ಆದರೆ ಸೂಕ್ತವಾದ ಉತ್ತರ ಸಿಕ್ಕಿರಲಿಲ್ಲ. ಭಯ ಮಾತ್ರ ಹೋಗಿರಲಿಲ್ಲ. ಹಾಗಾಗಿ ಆ ಪ್ರಳಯ ಎಂದು ಹೇಳಲಾಗಿದ್ದ ದಿನದಂದು ರಾತ್ರಿ ಬಹಳ ಹೊತ್ತಿನವರೆಗೂ ನಾನೂ ನಿದ್ದೆ ಮಾಡಿರಲಿಲ್ಲ. ಗಾಳಿ ಬರುತ್ತದೆ. ಇಡೀ ಭೂಮಿಯೇ ನೀರಿನಿಂದ ಮುಳುಗಿ ಹೋಗುತ್ತದೆ ಎಂಬ ಹೇಳಿಕೆಯಿಂದ ನಾನು ಅದ್ಯಾವ ರೀತಿಯಲ್ಲಿ ನೀರು ಬಂದು ಕೊಚ್ಚಿ ಹೋಗಿ ಬಿಡಬಹುದೇನೋ ಎಂಬ ಆತಂಕದಿಂದಲೇ ಮಲಗಿದ್ದೆ. ಅದು ಹೇಗೋ ತಡರಾತ್ರಿ ಬಳಿಕ ನನಗೆ ನಿದ್ದೆ ಹತ್ತಿತ್ತು. ಬೆಳಗ್ಗೆದ್ದು ನೋಡುವಾಗ ಎಲ್ಲವೂ ಸಹಜವಾಗಿತ್ತು. ಅದೇನೂ ಆಗಿರಲಿಲ್ಲ. ಆ ಬಳಿಕ ನನಗೆ ಪ್ರಳಯದ ಬಗ್ಗೆ ಇಂತಹ ಮಾತುಗಳನ್ನು ನಂಬಂದಂತೆ ಮಾಡಿತ್ತು. ಐದು ಗ್ರಹಗಳು ಒಂದೇ ದಿಕ್ಕಿನಲ್ಲಿ ಬಂದಾಗ ಅವುಗಳ ಗುರುತ್ವಾಕರ್ಷಣೆಯಿಂದಾಗಿ ಜಗತ್ತೇ ಅಂತ್ಯ ಎಂಬ ಭ್ರಮೆಗಳನ್ನೂ ಹುಟ್ಟಿಸುವುದುಂಟು. ಇನ್ನೂ ವಿಶೇಷವೆಂದರೆ, ಭವಿಷ್ಯ ನುಡಿಯಂತೆ ನಡೆದಾಗ ಯಾಕೆ ಪ್ರಳಯ ನಡೆದಿಲ್ಲ ಎಂಬುದನ್ನು ಒಬ್ಬೊಬ್ಬರು ಒಂದೊಂದು ರೀತಿಯ ವಾದದ ಮೂಲಕ ವ್ಯಾಖ್ಯಾನಿಸುತ್ತಾರೆ. 35 ವರ್ಷಗಳ ಹಿಂದೆ ಪೂರ್ವ ಕರಾವಳಿಯಲ್ಲಿ ಬಿರುಗಾಳಿ, ಚಂಡಮಾರುತದಿಂದ ಸಾವಿರಾರು ಮಂದಿ ಸಾವಿಗೀಡಾದರು. ಅದು ಮಂಗಳೂರಿಗೆ ಯಾವುದೇ ರೀತಿಯ ಅಪಾಯವನ್ನು ತಂದಿರಲಿಲ್ಲ. ಕಾರಣ, ಇಲ್ಲಿ ಪುಣ್ಯ ಪುರುಷರು ಭಜನೆ ಮಾಡುತ್ತಿದ್ದರು ಎಂಬ ವದಂತಿಯನ್ನೂ ಹಬ್ಬಲಾಗಿತ್ತು.

ಪ್ರಾಕೃತಿಕವಾಗಿ ಅಪಾಯಗಳು, ಅನಾಹುತಗಳು ಸಂಭವಿಸುವ ಸಂದರ್ಭ ಸಹಜವಾಗಿಯೇ ಯಾವುದೇ ರೀತಿಯ ಮಸೀದಿ, ಮಂದಿರ, ಚರ್ಚ್ ಎನ್ನದೆ ಎಲ್ಲವನ್ನೂ ತನ್ನ ಆಪೋಷಣಕ್ಕೆ ತೆಗೆದುಕೊಳ್ಳುತ್ತವೆ. ಹಾಗಿದ್ದರೂ ಪ್ರಳಯದ ಬಗ್ಗೆ ಹುಸಿ ಭೀತಿಯನ್ನು ಹುಟ್ಟಿಸಿ ಲಾಭ ಪಡೆಯುವ ದಂಧೆಕೋರರು ನಮ್ಮ ನಡುವೆ ಆಗಾಗ್ಗೆ ಹುಟ್ಟಿಕೊಂಡು ಮರೆಯಾಗುತ್ತಾರೆ. ಮನುಷ್ಯ ಸಹಜ ಭೀತಿ ಆ ಮಾತುಗಳನ್ನು ನಂಬಿ ಮೋಸ ಹೋಗುವುದು ನಡೆಯುತ್ತಲೇ ಇರುತ್ತದೆ. 2000ನೆ ಇಸವಿಯಲ್ಲಿ ಎಲ್ಲಾ ಕಂಪ್ಯೂಟರ್‌ಗಳು ನಾಶ ಆಗುತ್ತವೆ. ಅಂತರ್ಜಾಲ ಸ್ತಬ್ಧಗೊಳ್ಳುತ್ತ್ತವೆ ಎಂಬ ಭೀತಿ ಹುಟ್ಟು ಹಾಕಲಾಗಿತ್ತು. ಇಯರ್ 2ಕೆ ಪ್ರಳಯ ಎಂಬ ಹೆಸರಿನಲ್ಲಿ ಭಾರೀ ಪ್ರಚಾರವೂ ಆಗಿತ್ತು. ಹುಸಿ ವಿಜ್ಞಾನದ ಭಾಗವಾಗಿ ಈ ಪ್ರಳಯದ ಪ್ರಚಾರ ಜನರಲ್ಲಿ ಭಾರೀ ಆತಂಕವನ್ನು ತಂದೊಡ್ಡಿತ್ತು. ಆದರೆ ಹಾಗೇನೂ ಆಗಿಲ್ಲ. ಮಾನವ ತಾನು ಗಾಳಿ ವದಂತಿಗಳನ್ನು ನಂಬುವ ಪ್ರವೃತ್ತಿಯೇ ಇದಕ್ಕೆ ಕಾರಣ. ಮಾಧ್ಯಮಗಳಲ್ಲಿ ಈ ಬಗ್ಗೆ ಅಪಾರ ಪ್ರಚಾರವೂ ಜನರಲ್ಲಿ ತಪ್ಪು ಕಲ್ಪನೆಗಳಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ಬಾಲ್ಯದಲ್ಲೇ ತರ್ಕಬದ್ಧವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸುವುದೇ ಇದಕ್ಕೆ ಪರಿಹಾರ ಮಾರ್ಗ. ಗಾಳಿ ಸುದ್ದಿಗಳನ್ನು ನಂಬದ ಹಾಗೆ, ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದಾಗ ಮಾತ್ರವೇ ಈ ರೀತಿಯ ಶೋಷಣೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸಂವಿಧಾನದ ವೌಲ್ಯಗಳಿಗೆ ಒತ್ತು ಕೊಟ್ಟು ಮಾನವವಾದಿಗಳಾಗಿ ಬದುಕುವುದು ಹಾಗೂ ಪ್ರಶ್ನಿಸುವ ಮನೋಭಾವನ್ನು ಬೆಳೆಸಿದಾಗ ಮಾತ್ರವೇ ದೇಶ ವೈಜ್ಞಾನಿಕವಾಗಿ ಬೆಳೆಯಲು ಸಾಧ್ಯ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News