ಮಾತಿನರಗಿಣಿ ಜನಪದ ಕತೆಗಾರ್ತಿ ನಿಂಗಮ್ಮ

Update: 2018-09-09 06:52 GMT

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಜನಪದ ಕತೆಗಾರ್ತಿ ನಿಂಗಮ್ಮನವರದು ಅಭೂತಪೂರ್ವ ಪ್ರತಿಭೆ ಎಂದರೆ ತಪ್ಪಾಗಲಾರದು. ಬೇರು ಮಂಡ್ಯ ಜಿಲ್ಲೆಯಾಗಿದ್ದರೂ ಚಿಗುರೊಡೆದು ಮರವಾಗಿ ಬೆಳೆದದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ. ನಿಂಗಮ್ಮ ತಾನೇ ಹೇಳಿದ ತನ್ನ ಪೂರ್ವಿಕರ ಕತೆ ಈ ರೀತಿ ಇದೆ.

ಈಗ್ಗೆ ಸುಮಾರು 200 ವರ್ಷಗಳ ಹಿಂದೆ ಅತ್ತಿಗುಪ್ಪೆ ಪ್ರದೇಶ (ಈಗಿನ ಕೆ.ಆರ್. ಪೇಟೆ) ಕ್ಷಾಮಡಾಮರಗಳಿಗೆ ತುತ್ತಾಯಿತು. ಕುಡಿಯಲು ನೀರಿಲ್ಲದೆ, ದನಕರುಗಳಿಗೆ ಮೇವಿಲ್ಲದೆ, ಅನಿವಾರ್ಯವಾಗಿ ದಾನಬಾಚಳ್ಳಿಯನ್ನು ತೊರೆದು ದೇವೇಗೌಡರು ತಮ್ಮ ಕುಟುಂಬ ಪರಿವಾರ ಸಮೇತರಾಗಿ ಕೊಡಗಿನ ಸೆರಗಿನಲ್ಲಿದ್ದ ಪಿರಿಯಾಪಟ್ಟಣಕ್ಕೆ ಬಂದರು. ಅಲ್ಲಿ ಚಿಕ್ಕನಾಯಕನಕೆರೆಯ ಸಮೀಪದ ಬಯಲಿನಲ್ಲಿ ನೆಲೆನಿಂತುದೇ ಅಲ್ಲದೇ ಪಿರಿಯಾಪಟ್ಟಣದ ಪೇಟೆ ಎಂಬ ಬಡಾವಣೆಯ ಆದ್ಯ ಸಂಸ್ಥಾಪಕರೆನಿಸಿಕೊಂಡರು. ಪ್ರಭಾವಶಾಲಿಯಾದ ಅವರು ಪಟೇಲರೂ ಆಗಿ ತಾಲೂಕಿನ ಆಡಳಿತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡರು. ಈ ದೇವೇಗೌಡರ ಮಗ ದೊಡ್ಡ ಕೆಂಪೇಗೌಡ: ಮೊಮ್ಮಗ ಇಮ್ಮಡಿ ದೇವೇಗೌಡ. ಈ ಇಮ್ಮಡಿ ದೇವೇಗೌಡರ ಚಿಕ್ಕಪ್ಪ ನಿಂಗೇಗೌಡ, ಚಿಕ್ಕಮ್ಮ ಶ್ರೀಮತಿ ಹೊನ್ನಮ್ಮ. ಈ ದಂಪತಿಯ ಏಕಮಾತ್ರ ಪುತ್ರಿಯೇ ಜನಪದ ಕತೆಗಾರ್ತಿ ನಿಂಗಮ್ಮ.

ಅವು ಸ್ವಾತಂತ್ರಪೂರ್ವ ದಿನಗಳು. ಪಿರಿಯಾಪಟ್ಟಣದ ಪೇಟೆಯ ಸಣ್ಣಯ್ಯನ ಬೀದಿಯಲ್ಲಿ ಬಂಗಾರಯ್ಯ ಎಂಬವರ ಮನೆಯಲ್ಲಿ ಆಯುರ್ವೇದ ವೈದ್ಯರಾದ ಕೇರಳಾಪುರದ ರಾಮಯ್ಯ ಎಂಬವರು ಬಾಡಿಗೆಗಿದ್ದರು. ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯಾದಿ ಕಲೆಗಳಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದರು. ಅವರಿಂದ ರಾಮಾಯಣ, ಮಹಾಭಾರತ ಮುಂತಾದ ಕಾವ್ಯಗಳನ್ನು ಓದಿಸಿಕೊಳ್ಳುವ ಆ ಊರಿನ ಸಹೃದಯ ಬಳಗವೊಂದಿತ್ತು. ಅದರ ಜೊತೆಯೇ ಪುಟ್ಟ ಹುಡುಗಿ ನಿಂಗಮ್ಮನೂ ಸೇರಿಹೋಗಿದ್ದಳು. ರಾಮಯ್ಯನವರು ಅಕ್ಕಪಕ್ಕದ ಮನೆಯ ಮಕ್ಕಳಿಗೆಲ್ಲ ಪಾಠ ಹೇಳಿಕೊಡುವುದರ ಜೊತೆಗೆ ಅವರಿಗೆ ರುಚಿಸುವ ಕಥೆಗಳನ್ನು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಕಥೆಗಳಿಗೆ ಹುಡುಗಿ ನಿಂಗಮ್ಮ ಮರುಳಾಗಿ ಹೋದಳು. ಸಂದರ್ಭ ಸಿಕ್ಕಾಗೆಲ್ಲ ಅವರನ್ನು ಕಾಡಿಬೇಡಿ ಕಥೆ ಹೇಳಿಸಿಕೊಳ್ಳುತ್ತಿದ್ದ ಆ ಮಗು ನಿಂಗಮ್ಮನನ್ನು ಕಂಡರೆ ರಾಮಯ್ಯನವರಿಗೂ ಅತಿಯಾದ ಅಭಿಮಾನ. ಹಾಗಾಗಿ ಅವರ ಕಥೆಗಳ ಖಜಾನೆ ನಿಂಗಮ್ಮನ ಕೈವಶವಾಯಿತು. ಇದರಿಂದ ಚಿಕ್ಕವಯಸ್ಸಿನಲ್ಲೇ ನಿಂಗಮ್ಮನಿಗೆ ಕೇಳುಗರಿಗೆ ಕಥೆ ಹೇಳುವ ಖಯಾಲಿ ಅಂಟಿಕೊಂಡಿತು. ಅಲ್ಲದೇ ಆ ಕಾಲಕ್ಕೆ ಅವಳು ಮಿಡ್ಲ್ ಸ್ಕೂಲ್ ಮೆಟ್ಟಿಲೂ ಹತ್ತಿದ್ದಳು. ಹಾಗಾಗಿ ಅವಳು ಓದಿದ ಹಾಗೂ ಕೇಳಿದ ಕಥೆಗಳನ್ನು ಇತರರಿಗೆ ಸೊಗಸಾಗಿ ನಿರೂಪಿಸುವುದರಲ್ಲಿ ಸಿದ್ಧಹಸ್ತಳೆನಿಸಿದಳು. ರಾಮಾಯಣ, ಮಹಾಭಾರತ, ಶಿವಶರಣರನ್ನು ಕುರಿತ ಪುರಾಣ ಕಥೆಗಳನ್ನೆಲ್ಲಾ ತನ್ನ ಸ್ಮತಿ ಕೋಶದಲ್ಲಿ ಸಂರಕ್ಷಿಸಿಕೊಂಡಿದ್ದಳು.

ಹೀಗೆ ಬಾಲ್ಯದಲ್ಲಿಯೇ ಅಪಾರ ಪ್ರತಿಭೆಯನ್ನು ಹೊಂದಿದ್ದ ನಿಂಗಮ್ಮನನ್ನು ವಯಸ್ಸಿಗೆ ಬಂದ ನಂತರ ದೇವೇಗೌಡರ ಸಂಬಂಧಿ ತಮ್ಮಯ್ಯ ಎಂಬವರಿಗೆ ಧಾರೆಯೆರೆದು ಕೊಡಲಾಯಿತು. ಆದರೇನು! ಸುಮಧುರವಾಗಿರಬೇಕಾಗಿದ್ದ ಸಾಂಸಾರಿಕ ಬದುಕು ಸಂಕಷ್ಟಗಳ ಹೊಳೆಯಲ್ಲಿ ತೇಲುವಂತಾಯಿತು. ಇದರ ಜೊತೆಗೇ ಮದುವೆಯಾಗಿ ಆರೇಳು ವರ್ಷಗಳಾದರೂ ಕರುಳಕುಡಿಗಳಾಗಲಿಲ್ಲ. ಕಟ್ಟಿಕೊಂಡ ಗಂಡ ಬೇರೊಂದು ಹೆಣ್ಣಿನೊಂದಿಗೆ ಕೂಡಾವಳಿ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದಾಗ ಈ ಅಶಾಂತಿ ಪರ್ವವನ್ನು ಅಂತ್ಯಗೊಳಿಸಬೇಕೆಂದು ನಿರ್ಧರಿಸಿದ ನಿಂಗಮ್ಮ ದಾಂಪತ್ಯದ ಸಂಕೋಲೆಯನ್ನು ಕಿತ್ತೊಗೆದು ಹೆಣ್ತನದ ಕಿಚ್ಚಿನಲ್ಲಿ ಉರಿದು ಹೋಗದೇ ಸಂಸಾರದ ಕೊಂಡವನ್ನು ಹಾದುಬಂದು ಸ್ವತಂತ್ರಳಾದಳು. ಗರತಿಯರನ್ನು ಗೌರವಿಸದ ಗಂಡುಗಳು ಹುಬ್ಬೇರಿಸಿ ನೋಡುವ ಗುಣದಿಂದಾಗಿ ನಿಂಗಮ್ಮ ನಾನಾ ವಿಧದ ನಿಂದನೆಗಳಿಗೆ ಗುರಿಯಾಗಬೇಕಾಯಿತು. ತಂದೆ-ತಾಯಿಗಳಿಲ್ಲದ ತವರು! ಅಣ್ಣ ಪಟೇಲ್ ದೇವೇಗೌಡರಿಲ್ಲದ ದೊಡ್ಡಮನೆ; ಏನೂ ತೋಚದ ನಿಂಗಮ್ಮನಿಗೆ ಎಲ್ಲಿಗೆ ಹೋಗಬೇಕೆಂಬುದೇ ತೋಚಲಿಲ್ಲ. ಸುದೈವವೆಂದರೆ ದೇವೇಗೌಡರ ಆರು ಜನ ಪತ್ನಿಯರೂ ನಿಂಗಮ್ಮನ ಹೊಲಮನೆಗಳನ್ನೆಲ್ಲಾ ಅವಳಿಗೆ ಬಿಟ್ಟುಕೊಡುವ ಔದಾರ್ಯ ಮೆರೆದದ್ದು!

ಈಗ ನಿಂಗಮ್ಮನಿಗೆ ದೇವೇಗೌಡರ ಮೊಮ್ಮಗಳಾದ ಪುಟ್ಟಮ್ಮನ ಮೂರನೇ ಗಂಡುಮಗುವನ್ನು ದತ್ತು ಕೊಟ್ಟು ಆಸ್ತಿ-ಪಾಸ್ತಿ ನೋಡಿಕೊಂಡು ಹಾಯಾಗಿರಲು ಸಲಹೆ ಮಾಡಿದರು. ಅದಕ್ಕೊಪ್ಪಿದ ನಿಂಗಮ್ಮ ಆ ಮಗುವನ್ನು ತನ್ನದಾಗಿಸಿಕೊಂಡಳು. ಸದಾಕಾಲ ಆ ಮಗುವನ್ನು ಕಂಕುಳಲ್ಲಿರಿಸಿಕೊಂಡೇ ಇರುತ್ತಿದ್ದಳು. ಹೀಗಿದ್ದ ನಿಂಗಮ್ಮನಿಗೆ ಮೈಯಲ್ಲೆಲ್ಲಾ ಕಜ್ಜಿ ಕಾಣಿಸಿಕೊಂಡು ಕೀವು ಸುರಿಯತೊಡಗಿತು. ಇದನ್ನು ಕಂಡ ದೇವೇಗೌಡರ ಪತ್ನಿಯರು ಅವಳನ್ನು ಅಸ್ಪಶ್ಯಳಂತೆ ಕಂಡು ಅವಳ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡರು. ಇಂತಹ ನೀಚತನದಿಂದ ನಲುಗಿದ ನಿಂಗಮ್ಮ ಗಾಯಗಳಿಗೆ ಔಷಧಿ ಹಾಕಿಸಿಕೊಳ್ಳಲು ಹೋದಾಗ ಅಲ್ಲಿ ಒಬ್ಬ ದಾದಿಯ ಸಹಾನುಭೂತಿಯನ್ನು ಗಳಿಸಿ ಅದು ಸ್ನೇಹವಾಗಿ ಪರಿಣಮಿಸಿತು. ನಿನ್ನನ್ನು ಈ ನರಕದಿಂದ ಪಾರುಮಾಡುತ್ತೇನೆ ಬಾ ಎಂದು ಹೇಳಿದ ದಾದಿಯೊಡನೆ ನಿಂಗಮ್ಮ ಯಾರಿಗೂ ತಿಳಿಯದಂತೆ ಹೋಗಿಬಿಟ್ಟಳು. ನಿಂಗಮ್ಮನ ಬಂಧುಗಳಿಗೆ ಅವಳು ಎಲ್ಲಿಗೆ ಹೋದಳು? ಯಾರ ಜೊತೆಯಲ್ಲಿ ಹೋದಳು? ಹೇಗೆ ಹೋದಳು? ಏನಾದಳು? ಎಂಬುದು ಯಾರಿಗೂ ಬೇಡವಾಗಿ ಅವಳ ಸುದ್ದಿಗೆ ಮಂಗಳ ಹಾಡಿ ಅವಳ ಆಸ್ತಿಪಾಸ್ತಿಯನ್ನು ಹಂಚಿಕೊಂಡರು.

ಆದರೆ ನಿಂಗಮ್ಮ ಆ ಕರುಣಾಮಯಿ ದಾದಿಯೊಂದಿಗೆ ಮೈಸೂರಿಗೆ ಬಂದಾಗ ಆ ಕರುಣೆಯ ಹಿಂದಿರುವ ಕ್ರೌರ್ಯ ಅವಳನ್ನು ದಿಕ್ಕುಗೆಡಿಸಿತು. ಅಡ್ಡದಾರಿಗೆಳೆಯಲು ಪ್ರಯತ್ನಿಸಿದ ದಾದಿಯಿಂದ ಹೇಗೋ ಪಾರಾದ ನಿಂಗಮ್ಮ ಊರಿಗೆ ಹಿಂದಿರುಗಲು ಮುಖವಿಲ್ಲದೆ, ನಿಷ್ಕಾರಣವಾಗಿ ಸಾಯಲು ಮನಸ್ಸಿಲ್ಲದೆ ಬದುಕಲು ಬೇರೆ ದಾರಿಯನ್ನು ಹಿಡಿಯಬೇಕಾಯಿತು. ಒಂಟಿ ಹೆಣ್ಣನ್ನು ಕಂಡ ನಗರದ ನೆಕ್ಕು ಬುದ್ಧಿಯ ನಾಯಿಗಳನ್ನು ಲೆಕ್ಕಿಸದೇ ಅಕ್ಕಮಹಾದೇವಿಯಂತೆ ಮುನ್ನುಗ್ಗಿದ ಅವಳು ಆ ಕಾಲಕ್ಕೆ ಪ್ರಸಿದ್ಧರಾದ ಚಾಮುಂಡಿಪುರಂ ಕಂಟ್ರಾಕ್ಟರ್ ಪುಟ್ಟಪ್ಪ ಎಂಬವರಲ್ಲಿ ಸಿಕ್ಕ ಆಶ್ರಯದಿಂದ ತಕ್ಕವಳಾಗಿ ಬದುಕಲು ಸಾಧ್ಯವಾಯಿತು. ಅವರಿವರ ಮನೆಗೆಲಸ ಮಾಡಿಕೊಂಡಿರುವಾಗಲೂ ಕಣ್ಣಿನಿಂದಲೇ ಕಚ್ಚಿಕೊಳ್ಳುವಂತೆ ನೋಡುತ್ತಿದ್ದ ಕಚ್ಚೆಹರುಕ ಮನೆಮಾಲಕರ ಹಲ್ಲುದುರಿಸಿ ಮನೆ ಕೆಲಸಕ್ಕೆ ಸಡ್ಡು ಹೊಡೆದು ಗಾರೆ ಕೆಲಸವನ್ನು ರೂಢಿಸಿಕೊಳ್ಳಬೇಕಾಯಿತು. ಹೀಗಿರುವಾಗ ಒಮ್ಮೆ ಬಂಡಿಕೇರಿಗೆ ಆಕಸ್ಮಿಕವಾಗಿ ಬಂದಿದ್ದ ಹುಯಿಲಾಳು ಗ್ರಾಮದ ರೇವಣಸಿದ್ದೇಶ್ವರ ಮಠದ ಶ್ರೀ ರೇವಪ್ಪ ಸ್ವಾಮಿಗಳಿಂದ ಗುರುಬೋಧನಾದೀಕ್ಷೆ ಪಡೆದು ನಿಂಗಮ್ಮ ತನ್ನ ಶೀಲ ಸದೃಢತೆಗೆ ಬೇಲಿ ಹಾಕಿಕೊಳ್ಳಬೇಕಾಯಿತು.

ಹೀಗೆ ಬದುಕಿನ ಸಿಹಿ-ಕಹಿಗಳನ್ನು, ಏರು-ಪೇರುಗಳನ್ನು ಕಂಡ ನಿಂಗಮ್ಮ ತನ್ನ ಮೊಮ್ಮಗಳು ಪುಟ್ಟಮ್ಮ ಕೆಂಪೇಗೌಡರ ಮಗ ಪಿ.ಕೆ. ಚಂದ್ರಶೇಖರ ಅವರಿಗೆ ಮೈಸೂರಿನಲ್ಲಿ ಕಾಣಿಸಿಕೊಂಡಿದ್ದು ಆಕಸ್ಮಿಕ. 1953-54ರ ಅವಧಿಯಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿ ಸಾರ್ವಜನಿಕ ಹಾಸ್ಟೆಲ್‌ನಲ್ಲಿದ್ದ ಚಂದ್ರಶೇಖರ್ ಅವರು ಆ ಹಾಸ್ಟೆಲ್ ರಸ್ತೆಯಲ್ಲಿ ಆಗಾಗ ಹಾದುಹೋಗುತ್ತಿದ್ದ ನಿಂಗಮ್ಮಳನ್ನು ನೋಡಿದಾಗಲೆಲ್ಲಾ ತಾನು ಚಿಕ್ಕ ಹುಡುಗನಾಗಿದ್ದಾಗ ಈ ಹೆಂಗಸನ್ನು ಎಲ್ಲಿಯೋ ನೋಡಿದಂತಿದೆಯಲ್ಲ ಎಂದು ಯೋಚಿಸಿ ಕೊನೆಗೂ ಅವರ ನೆನಪಿನಾಳದಿಂದ ನಿಂಗಮ್ಮ ಮೇಲೆದ್ದು ಬಂದಳು. ಅನುಮಾನದಿಂದಲೇ ಮಾತನಾಡಿಸಿದರೂ ಅವಳೇ ನಿಂಗಮ್ಮ ಎಂದು ಖಚಿತವಾದಾಗ ಆದ ಆನಂದ ಅಷ್ಟಿಷ್ಟಿಲ್ಲ. ಊರಿಗೆ ಈ ವಿಷಯ ತಿಳಿಸಿ ಕಾಗದ ಬರೆದುದಲ್ಲದೇ ಮರಿಮಗಳು ಕಮಲಳ ಮದುವೆಯ ನೆವದಿಂದ ನಿಂಗಮ್ಮ ಮರಳಿ ತನ್ನ ಗೂಡಿಗೆ ಸೇರಿದಳು. ಪಿರಿಯಾಪಟ್ಟಣದಲ್ಲಿ ತನ್ನ ಸಮಕಾಲೀನರೂ ಆತ್ಮೀಯರೂ ಆದ ದೊಡ್ಡ ಬೀದಿ ಪಾರ್ವತಮ್ಮ, ಪುಟ್ಟತಾಯಮ್ಮ, ಕೃಷ್ಣಾಚಾರ್‌ರ ಹೆಂಡತಿ ರಾಜಮ್ಮ, ಮೂಲೆಮನೆ ಪಾರ್ವತಮ್ಮನ ಮಗಳು ಭದ್ರಮ್ಮರ ಸಹವಾಸವನ್ನು ಮತ್ತೆ ಕಲ್ಪಿಸಿಕೊಂಡಳು. ಪಾರ್ವತಮ್ಮನ ಮನೆಯಲ್ಲಿ ಸೇರುತ್ತಿದ್ದ ಇವರೆಲ್ಲ ರಾಮಾಯಣ, ಮಹಾಭಾರತ, ಭಾಗವತ, ಶರಣಸಂಕಥಾ ಶ್ರವಣದಲ್ಲಿ ಮೈಮರೆಯುತ್ತಿದ್ದರು. ನಿಂಗಮ್ಮನ ಕಥೆ ಕೇಳುವುದೆಂದರೆ ಮೊಮ್ಮಕ್ಕಳು ಮರಿಮಕ್ಕಳಿಗಲ್ಲದೆ ಅಕ್ಕಿ ಮಾಡುವ, ಹಪ್ಪಳ ಒತ್ತುವ, ಸಂಡಿಗೆ ಹಾಕುವ, ಬೇಯಿಸ್ದೆಣ್ಣೆ ತೆಗೆಯುವ ಹೊಗೆಸೊಪ್ಪು ಬೇಯಿಸುವುದು ಎಲ್ಲರಿಗೂ ಪ್ರಿಯವಾದ ಕೆಲಸವಾಗಿತ್ತು. ನಿಂಗಮ್ಮನಿಂದ ಕಥೆ ಕೇಳಬಯಸುವವರು ಎಲೆ ಅಡಿಕೆ ತಂದು ಕುಟ್ಣದಲ್ಲಿ ಕುಟ್ಟಿಕೊಟ್ಟರೆ ಸಾಕಾಗುತ್ತಿತ್ತು. ಕೇಳಬೇಕೆನಿಸುವವರೆಗೂ ನಿಂಗಮ್ಮ ಕಥೆ ಹೇಳುತ್ತಲೇ ಇರುತ್ತಿದ್ದಳು. ಮಕ್ಕಳು ಎಲೆ ಅಡಿಕೆ ಕುಟ್ಟಿಕೊಡಲು ಮುಂದೆ ಬಂದರೆಂದರೆ ನಿಂಗಮ್ಮನಿಂದ ಕಥೆ ಹೇಳಿಸಲು ಸಿದ್ಧತೆಯೆಂದೇ ಅರ್ಥವಾಗುತ್ತಿತ್ತು. ಅವಳ ಕಥೆ ಹೇಳುವ ಕಲೆಗಾರಿಕೆಗೆ ಎಂಥವರೂ ಮರುಳಾಗುತ್ತಿದ್ದರು. ಪ್ರೊ. ರಾಗೌ ಅವರ ಮಾತಿನಲ್ಲಿ ಹೇಳುವುದಾದರೆ ನಿಂಗಮ್ಮ ಒಬ್ಬ ಅಪರೂಪದ ಕಥನಕಲಾವಿದೆ. ಅವಳು ಕಥೆ ಹೇಳುವ ವಿಶಿಷ್ಟ ಧಾಟಿಯಿಂದಾಗಿ ಕಥೆಗಳ ಮೇಲೆ ತನ್ನ ಛಾಪು ಮೂಡಿಸಿರುವುದನ್ನು ನೋಡುತ್ತೇವೆ ಎಂಬ ಮಾತು ನಿಜಕ್ಕೂ ಉತ್ಪ್ರೇಕ್ಷೆಯೆನಿಸಲಾರದು.

ನಿಂಗಮ್ಮ ಕಥೆಗಾರ್ತಿ ಮಾತ್ರವಲ್ಲದೇ ಜನಪದ ವೈದ್ಯೆಯೂ ಆಗಿದ್ದಳು. ಬಹುಶಃ ಅವಳಿಗೆ ಈ ವಿದ್ಯೆ ಕೇರಳಾಪುರದ ಪಂಡಿತ ರಾಮಯ್ಯನವರಿಂದ ಬಂದ ಕೊಡುಗೆಯಾಗಿರಬಹುದು. ಜಾಂಡೀಸ್, ಮೂಳೆರೋಗ, ಹಾವು ಕಡಿತ ಮುಂತಾದವುಗಳಿಗೆಲ್ಲ ಅವಳು ಔಷಧ ಕೊಡುತ್ತಿದ್ದಳು. ಗುಣಮುಖರಾದವರು ಕೊಡುತ್ತಿದ್ದ ಅಲ್ಪಸ್ವಲ್ಪ ಪುಡಿಗಾಸನ್ನೂ ತನ್ನ ಮೊಮ್ಮಕ್ಕಳೂ ಮರಿಮಕ್ಕಳೂ ಕೊಡುತ್ತಿದ್ದ ಹಣವನ್ನೂ ರಕ್ಷಿಸಿಟ್ಟುಕೊಳ್ಳುತ್ತಿದ್ದಳು. ಸಂಗ್ರಹಿಸಿದ ಹಣವನ್ನು ಶಿವರಾತ್ರಿಯಂದು ಹುಯಿಲಾಳು ಗುರುಗಳ ಪಾದಪೂಜೆಗೆ ವಿನಿಯೋಗಿಸುತ್ತಿದ್ದಳು. ಮಿಕ್ಕ ಹಣವನ್ನು ಬಡಹೆಣ್ಣುಮಕ್ಕಳ ಯೋಗಕ್ಷೇಮಕ್ಕೆ ಉಪಯೋಗಿಸುತ್ತಿದ್ದಳು. ಇದಲ್ಲವೇ ನಿಜವಾದ ಔದಾರ್ಯ!

ನಿಂಗಮ್ಮ ಮೃದುಭಾಷಿಯೂ ಅಲ್ಲ, ಮಿತಭಾಷಿಯೂ ಆಗಿರಲಿಲ್ಲ. ಅವಳು ಮಾತನಾಡುವುದು ಹಾಗೂ ಕಥೆ ಹೇಳುವುದು ಎರಡೂ ಲೀಲಾಜಾಲವಾಗಿ, ನಿರರ್ಗಳವಾಗಿ ಸಾಗುತ್ತಿತ್ತು. ತಾನು ಏನೇ ಹೇಳಿದರೂ ತರ್ಕಬದ್ಧ ಸಮರ್ಥನೆ ಅವಳಲ್ಲಿರುತ್ತಿತ್ತು.

ಆದರೆ ನಿಂಗಮ್ಮ ತನ್ನ ಮಗ ಡಾ. ಪಿ.ಕೆ. ರಾಜಶೇಖರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. ನಿಂಗಮ್ಮ ಕೊನೆಯ ದಿನಗಳಲ್ಲಿ ಮಾನಸ ಗಂಗೋತ್ರಿಯ ಅಧ್ಯಾಪಕ ವಸತಿಯಲ್ಲಿ ಡಾ. ರಾಜಶೇಖರ್ ಅವರೊಂದಿಗೆ ಕೆಲವು ತಿಂಗಳುಗಳ ಕಾಲ ಸುಖವಾಗಿದ್ದಳು. ಗೌರಿಹಬ್ಬವನ್ನು ಮುಗಿಸಿಕೊಂಡು ಮರಳಿ ಬರುವುದಾಗಿ ಹೇಳಿಹೋದ ನಿಂಗಮ್ಮ ತನ ಮೊಮ್ಮಗಳು ನಾಗಮ್ಮನ ಮನೆಯಲ್ಲಿ ಕಾಲುಜಾರಿ ಬಿದ್ದಳು. ಇದರಿಂದ ಸೊಂಟದ ಮೂಳೆ ಮುರಿದರೂ ಆಸ್ಪತ್ರೆಗೆ ಹೋಗಲೊಪ್ಪಲಿಲ್ಲ. ಅನ್ನ, ನೀರು ತೊರೆದ ನಿಂಗಮ್ಮ ದಿ. 13 ಅಕ್ಟೋಬರ್ 1989ನೇ ಶುಕ್ರವಾರದಂದು ಇಹಲೋಕ ತ್ಯಜಿಸಿದಳು. ಅವಳ ಮರಿಮಗ ಪಿ.ಕೆ. ವಾಸುದೇವ ಅವಳು ಬಯಸಿದ್ದಂತೆ ಶೈವಗುರುಗಳನ್ನು ಕರೆಸಿ ಗುರುಬೋಧನೆ ತೆಗೆದುಕೊಂಡಿರುವವರಿಗೆ ಮಾಡುವ ಪದ್ಧತಿಯಂತೆ ಅಂತ್ಯ ಸಂಸ್ಕಾರ ಮಾಡಿಸಿದರು. ನಿಂಗಮ್ಮನ ಪಾರ್ಥಿವ ಶರೀರ ನಮ್ಮಿಂದ ಮರೆಯಾದರೂ ಅವಳ ನೆನಪಿಗಾಗಿ ಅವಳು ಹೇಳಿದ ಕಥೆಗಳಲ್ಲಿ ಹದಿನೈದು ಕಥೆಗಳನ್ನು ಅವಳು ತೀರಿಕೊಂಡ ಹತ್ತು ವರ್ಷದ ನೆನಪಿಗಾಗಿ ಡಾ. ಪಿ.ಕೆ. ರಾಜಶೇಖರ ಅವರು ಮಾತಿನರಗಿಣಿ ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ. ಇದು ನಿಜಕ್ಕೂ ನಿಂಗಮ್ಮನ ಕಥನ ನಿರೂಪಣೆಯ ಕೌಶಲ್ಯಕ್ಕೆ ಒಂದು ನಿದರ್ಶನ ಎಂದು ಹೇಳಬಹುದು.

ನಿಂಗಮ್ಮನ ಕಥೆಗಳಲ್ಲಿ ಕೆಲವನ್ನು ಮಾತ್ರ ಡಾ.ಪಿ.ಕೆ. ರಾಜಶೇಖರ ಮತ್ತು ಸಹೋದರ ಪಿ.ಕೆ. ವಾಸುದೇವ ಹಾಗೂ ಸಹೋದರಿ ಪಿ.ಕೆ. ಗಾಯಿತ್ರಿ ಅವರು ಸಂಗ್ರಹಿಸಿದ್ದಾರೆ. ಏಕೆಂದರೆ ನಿಂಗಮ್ಮ ಎಷ್ಟು ಕಥೆಗಳನ್ನು ಹೇಳುತ್ತಿದ್ದಳೆಂಬುದು ಯಾರಿಗೂ ಗೊತ್ತಿಲ್ಲ. ಅವಳು ಹೇಳಿರುವ ಮಾತಿನರಗಿಣಿ ಸಂಕಲನದ ಕಥೆಗಳನ್ನು ಓದಿದವರು ಆ ಕಥೆ ಇಲ್ಲ, ಈ ಕಥೆ ಇಲ್ಲ ಎಂದು ಹೇಳುತ್ತಾರಾದರೂ ಆ ಕಥೆಗಳನ್ನು ನಿಂಗಮ್ಮನಷ್ಟು ಕಲಾತ್ಮಕವಾಗಿ, ಅಚ್ಚುಕಟ್ಟಾಗಿ ಹೇಳಲು ಆ ಯಾರಿಗೂ ಬರದೇ ಇದ್ದುದರಿಂದ ಆ ಕಥೆಗಳೆಲ್ಲ ಕತ್ತಲೆಯಲ್ಲೇ ಹೂತುಹೋದವು. ಅವಳ ಹೆಸರಿನ ಬೆಳಕಲ್ಲಿ ಕೆಲವು ಕಥೆಗಳು ಮಾತ್ರ ಉಳಿದಿವೆ.

ಹೀಗೆ ಕಷ್ಟಗಳ ಕಾರ್ಮೋಡಗಳ ನೆರಳಿನಲ್ಲಿ ನೋಯುತ್ತ, ನರಳುತ್ತ, ನಲುಗುತ್ತ, ನಡೆಯುತ್ತಿದ್ದ ನಿಂಗಮ್ಮ ತನ್ನ ಬದುಕನ್ನು ಕಥೆ ಹೇಳುವ ಕಲೆಗೆ ಒಡ್ಡಿಕೊಳ್ಳುವುದರ ಮೂಲಕ ಸುಖ ಸಂತೋಷಗಳನ್ನು ಕಂಡುಂಡು ತಾನೂ ನಕ್ಕಳು; ತನ್ನ ಕೇಳುಗರನ್ನು ನಕ್ಕುನಲಿಸಿ ಕೃತಾರ್ಥಳಾದಳು. ಹೀಗೆ ಶ್ರೋತೃಗಳ ಪಾಲಿಗೆ ಮಾತಿನರಗಿಣಿ ಆಗಿಯೇ ಉಳಿದ ಇಂತಹ ಶ್ರೇಷ್ಠ ಕಥೆಗಾರ್ತಿ ನಿಂಗಮ್ಮನನ್ನು ಪಡೆದ ನಾವು ಧನ್ಯರಲ್ಲವೇ!

ನಿಂಗಮ್ಮ ಕಥೆಗಾರ್ತಿ ಮಾತ್ರವಲ್ಲದೇ ಜನಪದ ವೈದ್ಯೆಯೂ ಆಗಿದ್ದಳು. ಬಹುಶಃ ಅವಳಿಗೆ ಈ ವಿದ್ಯೆ ಕೇರಳಾಪುರದ ಪಂಡಿತ ರಾಮಯ್ಯನವರಿಂದ ಬಂದ ಕೊಡುಗೆಯಾಗಿರಬಹುದು. ಜಾಂಡೀಸ್, ಮೂಳೆರೋಗ, ಹಾವು ಕಡಿತ ಮುಂತಾದವುಗಳಿಗೆಲ್ಲ ಅವಳು ಔಷಧ ಕೊಡುತ್ತಿದ್ದಳು. ಗುಣಮುಖರಾದವರು ಕೊಡುತ್ತಿದ್ದ ಅಲ್ಪಸ್ವಲ್ಪ ಪುಡಿಗಾಸನ್ನೂ ತನ್ನ ಮೊಮ್ಮಕ್ಕಳೂ ಮರಿಮಕ್ಕಳೂ ಕೊಡುತ್ತಿದ್ದ ಹಣವನ್ನೂ ರಕ್ಷಿಸಿಟ್ಟುಕೊಳ್ಳುತ್ತಿದ್ದಳು. ಸಂಗ್ರಹಿಸಿದ ಹಣವನ್ನು ಶಿವರಾತ್ರಿಯಂದು ಹುಯಿಲಾಳು ಗುರುಗಳ ಪಾದಪೂಜೆಗೆ ವಿನಿಯೋಗಿಸುತ್ತಿದ್ದಳು. ಮಿಕ್ಕ ಹಣವನ್ನು ಬಡಹೆಣ್ಣುಮಕ್ಕಳ ಯೋಗಕ್ಷೇಮಕ್ಕೆ ಉಪಯೋಗಿಸುತ್ತಿದ್ದಳು. ಇದಲ್ಲವೇ ನಿಜವಾದ ಔದಾರ್ಯ!

Writer - - ಪೂನಾಡಹಳ್ಳಿ ರಘು

contributor

Editor - - ಪೂನಾಡಹಳ್ಳಿ ರಘು

contributor

Similar News