ಸೆರೆನಾ ಮೊದಲ ಯುಎಸ್ ಓಪನ್ ಜಯಿಸಿದ್ದಾಗ ಚಾಂಪಿಯನ್ ಒಸಾಕಾಗೆ ಒಂದು ವರ್ಷ ವಯಸ್ಸು!

Update: 2018-09-09 06:56 GMT

 ನ್ಯೂಯಾರ್ಕ್, ಸೆ9: ಆರು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್‌ರನ್ನು 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದ ಜಪಾನ್‌ನ ಕಿರಿಯ ಆಟಗಾರ್ತಿ ನಯೊಮಿ ಒಸಾಕಾ ಯುಎಸ್ ಓಪನ್‌ನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

23 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಸೆರೆನಾ ಅವರು 1999ರಲ್ಲಿ ನ್ಯೂಯಾರ್ಕ್‌ನಲ್ಲಿ ಮೊದಲ ಬಾರಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದಾಗ ಒಸಾಕಾಗೆ ಕೇವಲ 1 ವರ್ಷ ವಯಸ್ಸು.

20ರ ಹರೆಯದ ಒಸಾಕಾ ಟೆನಿಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಂಡಿರುವ ಜಪಾನ್‌ನ ಮೊದಲ ಆಟಗಾರ್ತಿ ಹಾಗೂ ಚೀನಾದ ಲಿ ನಾ ಬಳಿಕ ಏಶ್ಯಾದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಪಾನ್ ಹಾಗೂ ಹೈಟಿ ಮೂಲದ ದಂಪತಿಗೆ ಜನಿಸಿರುವ ಒಸಾಕಾಗೆ ಬಾಲ್ಯದಲ್ಲಿ ಸೆರೆನಾ ಅವರೇ ರೋಲ್‌ಮಾಡಲ್ ಆಗಿದ್ದರು. ತನ್ನ 15ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ಒಸಾಕಾ ಫ್ಲೋರಿಡಾದ ಮಿಯಾಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೆರೆನಾರೊಂದಿಗೆ 8 ವರ್ಷ ಕೆಲಸ ಮಾಡಿರುವ ಜರ್ಮನಿಯ ಸಸ್ಚಾ ಬಜಿನ್ ಅವರು ಒಸಾಕಾಗೆ ಕೋಚಿಂಗ್ ನೀಡುತ್ತಿದ್ದಾರೆ.

2016ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚೊಚ್ಚಲ ಗ್ರಾನ್‌ಸ್ಲಾಮ್ ಪಂದ್ಯವನ್ನಾಡಿದ್ದ ಒಸಾಕಾ 2ನೇ ಸುತ್ತಿನಲ್ಲಿ ಎಲಿನಾ ಸ್ವಿಟೋಲಿನಾರನ್ನು ಸೋಲಿಸಿದ್ದರು. ಆದರೆ, 3ನೇ ಸುತ್ತಿನಲ್ಲಿ ಮಾಜಿ ಚಾಂಪಿಯನ್ ವಿಕ್ಟೋರಿಯ ಅಝರೆಂಕಾಗೆ ಸೋಲುಂಡಿದ್ದರು.

2018ರಲ್ಲಿ ಇಂಡಿಯನ್ ವೆಲ್ಸ್‌ನಲ್ಲಿ ಮೊದಲ ಬಾರಿ ಡಬ್ಲುಟಿಎ ಪ್ರಶಸ್ತಿ ಜಯಿಸಿದ್ದರು. 2018ರ ಜುಲೈನಲ್ಲಿ 17ನೇ ರ್ಯಾಂಕಿಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News