ಹರಿದ 200, 2000 ರೂ. ನೋಟು ಬದಲಾಯಿಸಬೇಕೇ?: ಆರ್ ಬಿಐ ಹೊಸ ನಿಯಮಗಳನ್ನು ತಿಳಿದುಕೊಳ್ಳಿ

Update: 2018-09-09 07:09 GMT

ಹೊಸದಿಲ್ಲಿ, ಸೆ.9: ಹರಿದ, ಚಿಂದಿಯಾದ ಅಥವಾ ವಿರೂಪಗೊಂಡ 2000 ರೂಪಾಯಿ ನೋಟುಗಳನ್ನು ಬದಲಿಸಲು ಬ್ಯಾಂಕಿನವರು ಒಪ್ಪುತ್ತಿಲ್ಲವೇ?.. ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಈ ಕುರಿತ ಹೊಸ ನಿಯಮಾವಳಿ ಪ್ರಕಟಿಸಿದೆ. ಈ ಹಿಂದಿನ ನಿಯಮಾವಳಿಯಲ್ಲಿ 2000 ರೂಪಾಯಿಯ ನೋಟಿನ ಉಲ್ಲೇಖ ಇಲ್ಲದ ಕಾರಣ ಸೃಷ್ಟಿಯಾಗಿದ್ದ ಸಮಸ್ಯೆಗೆ ಇದೀಗ ಪರಿಹಾರ ಸಿಕ್ಕಿದಂತಾಗಿದೆ.

2016ರ ಡಿಸೆಂಬರ್ 8ರಂದು ನೋಟು ಅಮಾನ್ಯ ನೀತಿ ಜಾರಿಗೆ ಬಂದ ಬಳಿಕ, ವಿವಿಧ ಗಾತ್ರದ ನೋಟುಗಳನ್ನು ಆರ್‍ಬಿಐ ಬಿಡುಗಡೆ ಮಾಡಿತ್ತು. 200 ರೂಪಾಯಿ ಮತ್ತು 2000 ರೂಪಾಯಿ ನೋಟುಗಳಲ್ಲದೇ, 10, 20, 50, 100 ಹಾಗೂ 500 ರೂಪಾಯಿಯ ಸಣ್ಣ ಗಾತ್ರದ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ಹೊಸ ಗಾತ್ರಗಳು ಆರ್‍ ಬಿಐ ನೋಟು ಮರುಪಾವತಿ ನಿಯಮಾವಳಿ- 2008ರಲ್ಲಿ ಸೇರಿಲ್ಲದ ಕಾರಣ ಬದಲಾವಣೆ ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ನಿಯಮಾವಳಿಗೆ ತಿದ್ದುಪಡಿ ತಂದು ಹೊಸ ಗಾತ್ರದ ನೋಟುಗಳನ್ನು ಸೇರಿಸಲಾಗಿದೆ.

ಆಯಾ ನೋಟಿನ ಸ್ಥಿತಿಗೆ ಅನುಸಾರವಾಗಿ ಸಾರ್ವಜನಿಕರು ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಹರಿದ, ಚಿಂದಿಯಾದ ಮತ್ತು ವಿರೂಪಗೊಂಡ ನೋಟುಗಳನ್ನು ಪೂರ್ಣ ಮೌಲ್ಯಕ್ಕೆ ಅಥವಾ ಅರ್ಧಮೌಲ್ಯಕ್ಕೆ ಬದಲಾಯಿಸಿಕೊಳ್ಳಬಹುದಾಗಿದೆ.

ಹರಿದ ನೋಟಿನಲ್ಲಿ ನೋಟಿನ ಅರ್ಧಕ್ಕಿಂತ ಹೆಚ್ಚು ಭಾಗ ಇದ್ದಲ್ಲಿ, 50 ರೂಪಾಯಿ ಅಥವಾ ಹೆಚ್ಚಿನ ಮೌಲ್ಯದ ನೋಟುಗಳಿಗೆ ಸಂಪೂರ್ಣ ಮೌಲ್ಯವನ್ನು ಪಡೆಯಬಹುದಾಗಿದೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ. ತಕ್ಷಣದಿಂದ ಹೊಸ ನಿಯಮಾವಳಿ ಜಾರಿಗೆ ಬಂದಿದೆ.

ಹರಿದ 2000 ರೂಪಾಯಿ ನೋಟಿನಲ್ಲಿ ತುಂಡಿನ ಗಾತ್ರ 88 ಚದರ ಸೆಂಟಿಮೀಟರ್‍ಗಿಂತ ಅಧಿಕವಿದ್ದರೆ ಸಂಪೂರ್ಣ ಮೌಲ್ಯದ ಮರುಪಾವತಿ ಪಡೆಯಬಹುದು. 44 ಚದರ ಸೆಂಟಿಮೀಟರ್‍ಗಿಂತ ಹೆಚ್ಚು ಗಾತ್ರ ಹೊಂದಿದ್ದರೆ ಅರ್ಧಮೌಲ್ಯ ಪಡೆಯಬಹುದು. ಹೊಸ 2000 ರೂಪಾಯಿ ನೋಟಿನ ವಿಸ್ತೀರ್ಣ 109.56 ಚದರ ಸೆಂಟಿಮೀಟರ್ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News