ಸೆ.10 ಕ್ಕೆ ಭಾರತ ಬಂದ್

Update: 2018-09-09 14:32 GMT

 ಹೊಸದಿಲ್ಲಿ,ಸೆ.9: ಇಂಧನಗಳ ಬೆಲೆಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದ್ದು,ಸಾಮಾನ್ಯ ಜನಜೀವನ ವ್ಯತ್ಯಯಗೊಳ್ಳಲಿದೆ. ಎಸ್‌ಪಿ,ಡಿಎಂಕೆ,ಎನ್‌ಸಿಪಿ,ಆರ್‌ಜೆಡಿಯಂತಹ ಪ್ರತಿಪಕ್ಷಗಳು ಬಂದ್‌ನ್ನು ಬೆಂಬಲಿಸಿವೆ. ರಾಷ್ಟ್ರವ್ಯಾಪಿ ಪ್ರತಿಭಟನೆಯೊಂದಿಗೆ ಕೈಜೋಡಿಸುವಂತೆ ಸಂಘಸಂಸ್ಥೆಗಳು ಮತ್ತು ಎನ್‌ಜಿಒಗಳನ್ನೂ ಕಾಂಗ್ರೆಸ್ ಕೋರಿಕೊಂಡಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಪಾಲುದಾರನಾಗಿರುವ ಜೆಡಿಎಸ್ ಕೂಡ ಬಂದ್‌ಗೆ ಬೆಂಬಲವನ್ನು ವ್ಯಕ್ತಪಡಿಸಿರುವುದರಿಂದ ರಾಜ್ಯಕ್ಕೂ ಬಂದ್‌ನ ಬಿಸಿ ತಟ್ಟಲಿದೆ.

 ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಮತ್ತು ಅಹ್ಮದ್ ಪಟೇಲ್,ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಮತ್ತು ಎನ್‌ಸಿಪಿಯ ತಾರಿಕ್ ಅನ್ವರ್ ಸೇರಿದಂತೆ ಹಿರಿಯ ಪ್ರತಿಪಕ್ಷ ನಾಯಕರು ರವಿವಾರ ಬಂಡುಕೋರ ಜೆಡಿಯು ನಾಯಕ ಶರದ್ ಯಾದವ ಅವರ ನಿವಾಸದಲ್ಲಿ ಸಭೆ ಸೇರಿ ಬಂದ್ ಕರೆಯ ನಿರ್ಧಾರವನ್ನು ಅಂತಿಮಗೊಳಿಸಿದರು.

ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಮಾತ್ರ ದೇಶಾದ್ಯಂತ ಬಂದ್ ಆಚರಿಸಲಾಗುವುದು ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ತಿಳಿಸಿದರು.

ಇಂಧನಗಳ ಮೇಲಿನ ಕೇಂದ್ರ ಅಬಕಾರಿ ಸುಂಕ ಮತ್ತು ರಾಜ್ಯಗಳ ವ್ಯಾಟ್ ಅನ್ನು ತಕ್ಷಣವೇ ಕಡಿತಗೊಳಿಸಬೇಕು ಹಾಗೂ ಪೆಟ್ರೋಲ್ ಮತ್ತು ಡೀಸಿಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೊಳಪಡಿಸಬೇಕು ಎನ್ನುವುದು ಪ್ರತಿಪಕ್ಷಗಳ ಬೇಡಿಕೆಗಳಲ್ಲಿ ಮುಖ್ಯವಾಗಿವೆ.

2014ರಿಂದೀಚಿಗೆ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳಲ್ಲಿ ಸುಮಾರು ಶೇ.50ರಷ್ಟು ಏರಿಕೆಯಾಗಿದ್ದರೆ ಅವುಗಳ ಮೇಲಿನ ಅಬಕಾರಿ ಸುಂಕಗಳು ಅನುಕ್ರಮವಾಗಿ ಶೇ.211 ಮತ್ತು ಶೇ.443 ರಷ್ಟು ಹೆಚ್ಚಾಗಿವೆ ಎಂದು ಸುರ್ಜೆವಾಲಾ ಹೇಳಿದರು.

ಎಡಪಕ್ಷಗಳು ಸೋಮವಾರ ಪ್ರತ್ಯೇಕ್ ಬಂದ್‌ಗೆ ಕರೆ ನೀಡಿದ್ದರೆ,ತಾನು ಬೀದಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇನೆ ಮತ್ತು ರಾಜ್ಯದಲ್ಲಿ ಬಂದ್‌ನ್ನು ಬಲವಂತದಿಂದ ಹೇರುವುದಿಲ್ಲ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಸ್ಪಷ್ಟಪಡಿಸಿದೆ. ಜೆವಿಎಂ ಮತ್ತು ಜೆಎಂಎಂನಂತಹ ಪ್ರಾದೇಶಿಕ ಪಕ್ಷಗಳೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಕಾಂಗ್ರೆಸ್ ಪಕ್ಷವು ಕರೆ ನೀಡಿರುವ ಬಂದ್‌ನ್ನು ಬೆಂಬಲಿಸುವುದಾಗಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸಮಿತಿ(ಎಂಎನ್‌ಎಸ್) ಮತ್ತು ತೆಲುಗು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ರವಿವಾರ ಪ್ರಕಟಿಸಿವೆ.

ತನ್ಮಧ್ಯೆ ರವಿವಾರವೂ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳಲ್ಲಿ ಏರಿಕೆಯಾಗಿದೆ. ಮುಂಬೈಯಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ 87.89 ರೂ. ಮತ್ತು ಡೀಸಿಲ್ ಬೆಲೆ 77.09 ರೂ.ಗೇರಿದ್ದರೆ ದಿಲ್ಲಿಯಲ್ಲಿ ಇವುಗಳ ಬೆಲೆ ಅನುಕ್ರಮವಾಗಿ 80.50 ಮತ್ತು 72.61 ರೂ.ಆಗಿವೆ.

ಕರ್ನಾಟಕದಲ್ಲಿ ಸರಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸೋಮವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

 ತಾನು ಬಂದ್ ಅನ್ನು ಬೆಂಬಲಿಸುವುದೂ ಇಲ್ಲ,ವಿರೋಧಿಸುವುದೂ ಇಲ್ಲ ಎಂದು ಹೇಳಿರುವ ಒಡಿಶಾದ ಆಡಳಿತಾರೂಢ ಬಿಜೆಡಿಯು, ಆದಾಗ್ಯೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದಲ್ಲಿಯ ಶಾಲೆಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News