ಎನ್‌ಟಿಪಿಸಿ, ಡಿವಿಸಿ ವಿದ್ಯುತ್ ಸ್ಥಾವರಗಳಿಂದ 2021ರೊಳಗೆ ಮಾಲಿನ್ಯ ನಿಯಂತ್ರಣ ಗುಣಮಟ್ಟ ಪಾಲನೆ: ಕೇಂದ್ರ

Update: 2018-09-09 15:49 GMT

ಹೊಸದಿಲ್ಲಿ,ಸೆ.9: ಡಿಸೆಂಬರ್ 31,2021ರೊಳಗೆ ಗಂಧಕದ ಆಕ್ಸೈಡ್ ಮತ್ತು ಮಾಲಿನ್ಯಕಾರಕಗಳ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಗುಣಮಟ್ಟವನ್ನು ಪಾಲಿಸುವಂತೆ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ(ಎನ್‌ಟಿಪಿಸಿ) ಮತ್ತು ದಾಮೋದರ ಕಣಿವೆ ನಿಗಮ(ಡಿವಿಸಿ)ಗಳಿಗೆ ನಿರ್ದೇಶ ನೀಡಲಾಗಿದೆ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಎನ್‌ಟಿಪಿಸಿ 48 ಉಷ್ಣ ವಿದ್ಯುತ್‌ಸ್ಥಾವರಗಳನ್ನು ಮತ್ತು ಡಿವಿಸಿ ಇಂತಹ ಒಂಭತ್ತು ಸ್ಥಾವರಗಳನ್ನು ಹೊಂದಿದ್ದು,ಇವೆಲ್ಲ ತೀವ್ರ ವಾಯುಮಾಲಿನ್ಯಗೊಂಡಿರುವ ಪ್ರದೇಶಗಳಲ್ಲಿವೆ ಎಂದು ಸರಕಾರವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

 500 ಮೆ.ವ್ಯಾ.ಸಾಮರ್ಥ್ಯದ ಈ ಎಲ್ಲ 57 ಸ್ಥಾವರಗಳು ಕೇಂದ್ರ ಸರಕಾರದ ಅಧೀನದಲ್ಲಿವೆ. ಆದರೆ 500 ಮೆ.ವ್ಯಾ.ಗೂ ಹೆಚ್ಚಿನ ಸಾಮರ್ಥ್ಯದ ಕೆಲವು ಖಾಸಗಿ ಮತ್ತು ರಾಜ್ಯ ಸರಕಾರದಡಿಯ ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳೂ ಕಾರ್ಯಾಚರಿಸುತ್ತಿವೆ. ಇವುಗಳ ಮೇಲೆ ಬಲವಂತದಿಂದ ಅಧಿಕಾರ ಚಲಾಯಿಸಲು ಅಥವಾ ಅವುಗಳ ಪರವಾಗಿ ಯಾವದೇ ಬದ್ಧತೆಯನ್ನು ನೀಡಲು ಕೇಂದ್ರ ವಿದ್ಯುತ್ ಸಚಿವಾಲಯಕ್ಕೆ ಸಾಧ್ಯವಿಲ್ಲ ಎಂದು ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್.ನಾಡಕರ್ಣಿ ಅವರು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠಕ್ಕೆ ತಿಳಿಸಿದರು.

ಪರಿಸರ ಮತ್ತು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದಲ್ಲಿ ಸಹಕರಿಸುವಂತೆ ಸೂಚಿಸಿ ಸರ್ವೋಚ್ಚ ನ್ಯಾಯಾಲಯವು ಈ ಖಾಸಗಿ ಘಟಕಗಳಿಗೆ ನೋಟಿಸನ್ನು ಹೊರಡಿಸಿದೆ. ರಾಜ್ಯ ಸರಕಾರಗಳ ಸ್ಥಾವರಗಳಿಗೂ ನೋಟಿಸ್ ನೀಡಿರುವ ಅದು ಮುಂದಿನ ವಿಚಾರಣೆಯನ್ನು ಅ.11ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News