ಉತ್ತರಪ್ರದೇಶ: ವಿಷ ಸೇವಿಸಿದ್ದ ಐಪಿಎಸ್ ಅಧಿಕಾರಿ ಸಾವು

Update: 2018-09-09 16:43 GMT

ಲಕ್ನೋ, ಸೆ. 9: ವಿಷ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದ 30 ವರ್ಷದ ಐಪಿಎಸ್ ಅಧಿಕಾರಿ ರವಿವಾರ ಕಾನ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

2014ನೇ ಬ್ಯಾಚ್‌ನ ಅಧಿಕಾರಿ ಸುರೇಂದ್ರ ಕುಮಾರ್ ದಾಸ್ ಅವರನ್ನು ಕಾನ್ಪುರ ನಗರ (ಪೂರ್ವ)ದ ಪೊಲೀಸ್ ಅಧೀಕ್ಷಕರನ್ನಾಗಿ ನಿಯೋಜಿಸಲಾಗಿತ್ತು. ಬುಧವಾರ ಅವರು ವಿಷ ಸೇವಿಸಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದುವರೆಗೆ ನಡೆದ ತನಿಖೆಯಲ್ಲಿ ಸುರೇಂದ್ರ ಕುಮಾರ್ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಗೂಗಲ್‌ನಲ್ಲಿ ಶೋಧ ನಡೆಸಿದ್ದರು. ತನ್ನ ಮನೆ ಕೆಲಸದ ಆಳಿನ ಮೂಲಕ ಮಾರುಕಟ್ಟೆಯಿಂದ ಇಲಿ ವಿಷ ತರಿಸಿ ಸೇವಿಸಿದ್ದರು. ‘‘ಅವರು ಚಿಕಿತ್ಸೆ ಸಂದರ್ಭ ರವಿವಾರ ಮೃತಪಟ್ಟರು. ಯುವ ಐಪಿಎಸ್ ಅಧಿಕಾರಿಯ ಕುಟುಂಬದ ಸದಸ್ಯರ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.’’ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

 ಅವರ ಹಲವು ಅಂಗಗಳು ಕಾರ್ಯಚರಿಸುವುದನ್ನು ನಿಲ್ಲಿಸಿದ್ದುವು ಎಂದು ಸುರೇಂದ್ರ ಕುಮಾರ್ ದಾಸ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ರಾಜೇಶ್ ಅಗರ್‌ವಾಲ್ ಹೇಳಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಒ.ಪಿ. ಸಿಂಗ್ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಡಿಜಿಪಿ, ಎಡಿಜಿ (ಕಾನೂನು ಸುವ್ಯವಸ್ಥೆ) ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ದಾಸ್ ಅವರ ನಿದನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News