ಲೈಂಗಿಕ ಸಹಕಾರ ಅಪೇಕ್ಷೆ ಶಿಕ್ಷಾರ್ಹ ಅಪರಾಧ

Update: 2018-09-09 18:08 GMT

ಹೊಸದಿಲ್ಲಿ, ಸೆ.9: ನೂತನವಾಗಿ ಜಾರಿಗೆ ಬಂದಿರುವ ಭ್ರಷ್ಟಾಚಾರ ವಿರೋಧ ಕಾನೂನಿನ ಪ್ರಕಾರ ಲೈಂಗಿಕ ಸಹಕಾರಕ್ಕೆ ಕೋರಿಕೆ ಸಲ್ಲಿಸುವುದು ಅಥವಾ ಅದನ್ನು ಒಪ್ಪಿಕೊಳ್ಳುವುದು ಲಂಚ ನೀಡಿದಂತೆ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನುಬದ್ಧ ಸಂಭಾವನೆ ಹೊರತುಪಡಿಸಿ ಇತರ ಯಾವುದೇ ರೀತಿಯಲ್ಲಿ ಅನುಚಿತ ಲಾಭ ಪಡೆಯುವುದು ಅಥವಾ ತೃಪ್ತಿಪಡಿಸುವ ಪ್ರಕ್ರಿಯೆ( ದುಬಾರಿ ಮೊತ್ತದ ಕ್ಲಬ್ ಸದಸ್ಯತನ ಶುಲ್ಕ ಪಾವತಿಸುವುದು, ಆದರಾತಿಥ್ಯ ನೀಡುವುದು ಇತ್ಯಾದಿ) ಯನ್ನು 2018ರ ಭ್ರಷ್ಟಾಚಾರ ತಡೆ(ತಿದ್ದುಪಡಿ) ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ. ತೃಪ್ತಿ ಪಡಿಸುವ ಪ್ರಕ್ರಿಯೆಯಲ್ಲಿ ಲೈಂಗಿಕ ಸಹಕಾರ ಅಪೇಕ್ಷೆ ಕೂಡಾ ಸೇರಿದೆ. ಈ ಕಾಯ್ದೆಗೆ ರಾಷ್ಟ್ರಪತಿಯವರ ಅಂಗೀಕಾರ ಪಡೆದ ಬಳಿಕ ಜುಲೈಯಲ್ಲಿ ಜಾರಿಗೊಳಿಸಲಾಗಿದೆ. ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐಯಂತಹ ತನಿಖಾ ಸಂಸ್ಥೆಗಳು ಇನ್ನು ಮುಂದೆ ಲೈಂಗಿಕ ಸಹಕಾರ ಅಪೇಕ್ಷಿಸುವ ಅಧಿಕಾರಿಗಳ ಅಥವಾ ದುಬಾರಿ ಕೊಡುಗೆ ಬಯಸುವ ಅಧಿಕಾರಿಗಳನ್ನೂ ಈ ಕಾಯ್ದೆಯಡಿ ವಿಚಾರಣೆ ನಡೆಸಿ ಗರಿಷ್ಟ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಹೊರತುಪಡಿಸಿ ವಾಹನ ಅಥವಾ ಆಸ್ತಿ ಕೊಳ್ಳಲು ಡೌನ್‌ಪೇಮೆಂಟ್(ಆರಂಭಿಕ ಕಂತು) ಪಾವತಿಸುವುದು ಮುಂತಾದ ಕೊಡುಗೆ ನೀಡುವುದನ್ನೂ ಲಂಚ ಎಂದೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಜಿ.ವೆಂಕಟೇಶ್ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News