‘ನಾನು ಮೋಸ ಮಾಡಿಲ್ಲ, ರೆಫರಿ ರಾಮೋಸ್ ನನಗೆ ಮೋಸ ಮಾಡಿದ್ದಾರೆ’

Update: 2018-09-09 18:48 GMT

ನ್ಯೂಯಾರ್ಕ್, ಸೆ.9: ‘‘ ನಾನು ಮೋಸ ಮಾಡಿಲ್ಲ. ರೆಫರಿ ಕಾರ್ಲೊಸ್ ರಾಮೋಸ್ ನನಗೆ ಮೋಸ ಮಾಡಿದ್ದಾರೆ’’ ಎಂದು ಯುಎಸ್ ಓಪನ್ ಜಯಿಸಿ 24ನೇ ಗ್ರಾನ್ ಸ್ಲಾಮ್ ಟ್ರೋಫಿ ಧರಿಸುವ ಅವಕಾಶ ಕಳೆದುಕೊಂಡಿರುವ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಭಿಪ್ರಾಯಪಟ್ಟರು.

 ಆರು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್ ಅವರು ಶನಿವಾರ ನಡೆದ ಯುಎಸ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್ ನಲ್ಲಿ ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕಾ ವಿರುದ್ಧ ಸೋತು ಹೊರ ನಡೆದಿದ್ದರು.

 ಆಟದ ಎರಡನೇ ಸೆಟ್‌ನ ವೇಳೆ ಸೆರೆನಾ ಅವರು ಪ್ಲೇಯರ್ ಬಾಕ್ಸ್‌ನಿಂದ ಕೋಚ್ ಪ್ಯಾಟ್ರಿಕ್ ವೌರಟೊಗ್ಲು ಅವರಿಂದ ಕೈ ಸನ್ನೆ ಮೂಲಕ ಸಲಹೆ ಪಡೆಯುತ್ತಿದ್ದಾರೆ ಎಂಬ ಆರೋಪದಲ್ಲಿ ಸೆರೆನಾಗೆ ರೆಫರಿ ಕಾರ್ಲೊಸ್ ರಾಮೋಸ್ ಎಚ್ಚರಿಕೆ ನೀಡಿದರು. ಇದರಿಂದ ಕುಪಿತಗೊಂಡ ಸೆರೆನಾ ಟೆನಿಸ್ ರಾಕೆಟನ್ನು ನೆಲಕ್ಕೆ ಬಲವಾಗಿ ಕುಕ್ಕಿದರು. ಇದರಿಂದ ಆಕೆಯ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡ ರೆಫರಿ ಎದುರಾಳಿ ಒಸಾಕಾಗೆ ಪೆನಾಲ್ಟಿ ಅಂಕ ನೀಡಿದರು. ಇದು ಸೆರೆನಾರನ್ನು ಕೆರಳಿಸಿತು ಎನ್ನಲಾಗಿದೆ. ಪೆನಾಲ್ಟಿ ಅಂಕ ಪ್ರಯೋಜನ ಪಡೆದ ಒಸಾಕಾ ಗೆಲುವಿನ ನಗೆ ಬೀರಿದರು.

       ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ಸೆರೆನಾ ವಿಲಿಯಮ್ಸ್ ‘‘ನಾನು ಕೋಚ್ ಕಡೆಯಿಂದ ಸನ್ನೆ ಪಡೆದಿರುವುದಾಗಿ ಮತ್ತು ನಾನು ಮೋಸ ಮಾಡಿರುವುದಾಗಿ ಕೋಚ್ ರಾಮೋಸ್ ಆರೋಪಿಸಿದ್ದಾರೆ. ಆದರೆ ಆ ರೀತಿ ಮಾಡಿಲ್ಲ. ನನ್ನ್ನ ವಿರುದ್ಧ ಅಂತಹ ಆರೋಪ ಮಾಡಿರುವ ರಾಮೋಸ್ ಸುಳ್ಳುಗಾರ. ಆತ ನನ್ನಿಂದ ಪಂದ್ಯವನ್ನು ಕಸಿದುಕೊಂಡ ಮಹಾ ಕಳ್ಳ ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೆಫರಿ ರಾಮೋಸ್ ಜನಾಂಗೀಯ ನಿಂದನೆ ಮಾಡಿದ್ದಾರೆಂದು ಹೇಳಿರುವ ಸೆರೆನಾ ನಾನು ಸಮಾನತೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ ’’ ಎಂದ ಹೇಳಿದ್ದಾರೆ.

   ‘‘ಅಂತರ್‌ರಾಷ್ಟ್ರೀಯ ಟೆನಿಸ್‌ನಲ್ಲಿ ಲಿಂಗ ತಾರತಮ್ಯ ಇದೆ. ಇದಕ್ಕೆ ಕಾರ್ನೆಟ್ ಪ್ರಕರಣ ಉದಾಹರಣೆಯಾಗಿದೆ. ಯುಎಸ್ ಓಪನ್ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುವಾಗ ಉಲ್ಟಾ ಟೀ ಶರ್ಟ್ ಹಾಕಿದ್ದ ಅಲೈಜ್ ಕಾರ್ನೆಟ್, ಆ ನಂತರ ಆಟದ ಮಧ್ಯೆ ಟೀ ಶರ್ಟ್ ಬದಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕಾರ್ನೆಟ್‌ಗೆ ದಂಡ ವಿಧಿಸುವುದಾದರೆ ಶರ್ಟ್ ಬಿಚ್ಚಿ ಕುಳಿತುಕೊಳ್ಳುವ ಪುರುಷ ಆಟಗಾರರ ವಿರುದ್ಧ ಯಾಕೆ ಕ್ರಮ ಇಲ್ಲ ’’ ಎಂದು ಸೆರೆನಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News