ಜೊಕೊವಿಕ್‍ಗೆ 3ನೇ ಯುಎಸ್ ಕಿರೀಟ

Update: 2018-09-10 04:08 GMT

ನ್ಯೂಯಾರ್ಕ್,ಸೆ.10: ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸವಾಲನ್ನು 6-3, 7-6 (4), 6-3 ನೇರ ಸೆಟ್‍ಗಳಿಂದ ಸದೆಬಡಿದ ಅನುಭವಿ ಆಟಗಾರ ನೊವಾಕ್ ಜೊಕೊವಿಕ್ ಅವರು ರವಿವಾರ ರಾತ್ರಿ 3ನೇ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಇದು ಇವರಿಗೆ 14ನೇ ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿಯಾಗಿದ್ದು, ಇದರೊಂದಿಗೆ ಅತಿಹೆಚ್ಚು ಗ್ರ್ಯಾಂಡ್‍ಸ್ಲಾಂ ಸಿಂಗಲ್ಸ್ ಗೆದ್ದ ಆಟಗಾರರ ಪೈಕಿ ಪೀಟ್ ಸಾಂಪ್ರಸ್ ಜತೆ ಮೂರನೇ ಸ್ಥಾನಕ್ಕೆ ನೆಗೆದೇರಿದರು.

ಆಸ್ಟ್ರೇಲಿಯಾ ಓಪನ್ ಬಳಿಕ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 31 ವರ್ಷದ ಸೆರ್ಬಿಯನ್ ಆಟಗಾರ ಜೊಕೊವಿಕ್, ಸತತ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಮೂರನೇ ಪ್ರಶಸ್ತಿ ಗೆದ್ದರು. ಇದಕ್ಕೂ ಮುನ್ನ ಪ್ರಸಕ್ತ ಋತುವಿನಲ್ಲಿ ವಿಂಬಲ್ಡನ್ ಮತ್ತು ಫ್ಲಶಿಂಗ್ ಮೆಡೋಸ್ ಪ್ರಶಸ್ತಿಗೆ ಜೊಕೊವಿಕ್ ಪಾತ್ರರಾಗಿದ್ದರು. 2016ರ ಇದೇ ಅವಧಿಯಲ್ಲಿ ಜೊಕೊವಿಕ್ ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಗ್ರ್ಯಾಂಡ್‍ಸ್ಲಾಂ ಮಿಷಿನ್ ಎನಿಸಿಕೊಂಡಿದ್ದರು.

ಆರನೇ ಶ್ರೇಯಾಂಕದ ಆಟಗಾರ ಈ ಋತುವಿನ ಕೊನೆಯ ಗ್ರ್ಯಾಂಡ್‍ಸ್ಲಾಂನಲ್ಲಿ ತೀವ್ರ ಸೆಖೆ ಮತ್ತು ತೇವಾಂಶದಿಂದ ಸಮಸ್ಯೆ ಎದುರಿಸಿದರೂ, ಇಡೀ ಟೂರ್ನಿಯಲ್ಲಿ ಎರಡು ಸೆಟ್ ಮಾತ್ರ ಬಿಟ್ಟುಕೊಟ್ಟಿದ್ದಾರೆ ಎನ್ನುವುದು ಗಮನಾರ್ಹ. ಎರಡನೇ ಸುತ್ತಿನ ಬಳಿಕ ಜೊಕೊವಿಕ್ ಒಂದು ಸೆಟ್ ಕೂಡಾ ಎದುರಾಳಿಗೆ ಬಿಟ್ಟುಕೊಟ್ಟಿಲ್ಲ. ಪೀಟ್ ಸಾಂಪ್ರಸ್ 14ನೇ ಗ್ರ್ಯಾಂಡ್‍ಸ್ಲಾಂ ಗೆದ್ದ ಕೋರ್ಟ್‍ನಲ್ಲೇ ಫೈನಲ್ ಆಡಿದ ಜೊಕೊವಿಕ್ ಅವರ ಸಾಧನೆಯನ್ನು ಸರಿಗಟ್ಟಿದ್ದು ವಿಶೇಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News