ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದ ಐದು ಮಂದಿ ಉಸಿರುಗಟ್ಟಿ ಸಾವು

Update: 2018-09-10 05:15 GMT

ಹೊಸದಿಲ್ಲಿ,ಸೆ.10 : ಪಶ್ಚಿಮ ದಿಲ್ಲಿಯ ಮೋತಿ ನಗರ್ ಪ್ರದೇಶದಲ್ಲಿ ಮ್ಯಾನ್ ಹೋಲ್ ಒಂದನ್ನು ಸ್ವಚ್ಛಗೊಳಿಸುವ ಸಂದರ್ಭ ವಿಷಗಾಳಿಯಿಂದ ಉಸಿರುಗಟ್ಟಿ ಐದು ಮಂದಿ ಮೃತಪಟ್ಟ ದಾರುಣ ಘಟನೆ ರವಿವಾರ ವರದಿಯಾಗಿದೆ.

ಮೃತಪಟ್ಟ ಸರ್ಫರಾಝ್, ಪಂಕಜ್, ರಾಜಾ, ಉಮೇಶ್ ಮತ್ತು ವಿಶಾಲ್ 22ರಿಂದ 30 ವರ್ಷ ವಯಸ್ಸಿನವರಾಗಿದ್ದರು. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಉಳಿದ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಷ್ಟರೊಳಗಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.

ರವಿವಾರ ಅಪರಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಕ್ಯಾಪಿಟಲ್ ಗ್ರೀನ್-ಡಿಎಲ್‍ಎಫ್ ಅಪಾರ್ಟ್‍ಮೆಂಟ್ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿ ಐದು ಮಂದಿ ಕಾರ್ಮಿಕರು ಡ್ರೈನೇಜ್ ಗುಂಡಿಯಲ್ಲಿ ಸಿಲುಕಿದ್ದಾರೆಂದು ಮಾಹಿತಿ ನೀಡಿದ್ದರು.

ಸ್ಥಳೀಯ ಹೌಸ್ ಕೀಪಿಂಗ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಮತ್ತು ಸರ್ಫರಾಝ್ ಅವರನ್ನು ಡ್ರೈನೇಜ್ ಗುಂಡಿಯನ್ನು  ಪ್ರವೇಶಿಸುವಂತೆ ಗುತ್ತಿಗೆದಾರ ಒತ್ತಾಯಿಸಿದರೆನ್ನಲಾಗಿದೆ. ಮೊದಲು ಒಳ ಹೊಕ್ಕಿದ್ದ ಮೂವರು ಹೊರ ಬಾರದೇ ಇದ್ದಾಗ ಅವರಿಬ್ಬರನ್ನು ಬಲವಂತ ಪಡಿಸಲಾಯಿತೆಂದು ತಿಳಿದು ಬಂದಿದೆ. ಅವರಿಗೆ ಯಾವುದೇ ಜೀವರಕ್ಷಕ ಸಾಧನವನ್ನೂ ನೀಡಿರಲಿಲ್ಲವೆನ್ನಲಾಗಿದೆ.

ಈ ಘಟನೆಗೆ ಎಎಪಿ ಸರಕಾರವೇ ಕಾರಣ, ಡ್ರೈನೇಜ್ ಸ್ವಚ್ಛಗೊಳಿಸಲು ಆಧುನಿಕ ತಂತ್ರಜ್ಞಾನ ಬಳಸುವುದಾಗಿ ಅವರು ತಿಳಿಸಿದ್ದರೂ ಈಗಲೂ ಹಳೆಯ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ, ಎಂದು ಬಿಜೆಪಿ ನಾಯಕ ಭರತ್ ಭೂಷಣ್ ಮದನ್ ಆರೋಪಿಸಿದ್ದಾರೆ.

ಘಟನೆ ನಡೆದ ಪ್ರದೇಶದ ಕೌನ್ಸಿಲರ್ ಸುನೀತಾ ಮಿಶ್ರಾ ಅವರು ಮೃತ ಕುಟುಂಬಗಳಿಗೆ ತಲಾ ರೂ 50 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News