ಮುಂದಿನ ಐದು ವರ್ಷಗಳಲ್ಲಿ ಸೇನೆಯಲ್ಲಿ 1.5 ಲಕ್ಷ ಉದ್ಯೋಗ ಕಡಿತ ?

Update: 2018-09-10 08:16 GMT

ಹೊಸದಿಲ್ಲಿ,ಸೆ.10 : ಭಾರತೀಯ ಸೇನೆಯು ಮುಂದಿನ ನಾಲ್ಕೈದು ವರ್ಷಗಳ ಅವಧಿಯಲ್ಲಿ 1,50,000ಕ್ಕೂ ಅಧಿಕ ಉದ್ಯೋಗಗಳನ್ನು ಕಡಿತಗೊಳಿಸಲಿದ್ದು  ಸೇನೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಿ ಭವಿಷ್ಯದ ಯುದ್ಧಗಳಿಗೆ ಅದನ್ನು ಸನ್ನದ್ಧವಾಗಿಸುವ ಪ್ರಸ್ತಾಪವಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ತಿಳಿಸಿದೆ.

ಜೂನ್ 21ರಂದು ಆದೇಶಿಸಲಾದ ಕ್ಯಾಡರ್ ರಿವೀವ್  ಅಥವಾ ಪರಿಶೀಲನೆಯನ್ನು ಮಿಲಿಟರಿ ಕಾರ್ಯದರ್ಶಿ ಲೆಪ್ಟಿನೆಂಟ್ ಜನರಲ್  ಜೆ ಎಸ್ ಸಂಧು ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ತಂಡವು ತನ್ನ ಆರಂಭಿಕ ವರದಿಯನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ತಿಂಗಳಾಂತ್ಯಕ್ಕೆ ನೀಡಲಿದ್ದು ನವೆಂಬರ್ ನಲ್ಲಿ ಅಂತಿಮ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

"ಈ ತಂಡವು  ಮುಂದಿನ  ಎರಡು ವರ್ಷಗಳಲ್ಲಿ 50,000 ಸಿಬ್ಬಂದಿಗಳನ್ನು ಕಡಿತಗೊಳಿಸುವ ಹಾಗೂ  2022-23ರೊಳಗಾಗಿ 1 ಲಕ್ಷ  ಸಿಬ್ಬಂದಿಯನ್ನು ಕಡಿತಗೊಳಿಸುವ ಬಗ್ಗೆ ಯೋಚಿಸುತ್ತಿದೆಯಾದರೂ ಈ ನಿಟ್ಟಿನಲ್ಲಿ ಸದ್ಯ ಅಧ್ಯಯನವಷ್ಟೇ ನಡೆಯುತ್ತಿದೆ,'' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆಂದು ವರದಿ ತಿಳಿಸಿದೆ.

ವಿವಿಧ ಘಟಕಗಳ ವಿಲೀನ ಪ್ರಸ್ತಾವನೆಯೂ ಇದೆ. ತಂತ್ರಜ್ಞಾನದ ಅಳವಡಿಕೆಯ ಹೊರತಾಗಿಯೂ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ, ಸಿಬ್ಬಂದಿ ಕಡಿತದ ಜತೆಗೆ ಸೇನೆಯು ಹಳೆಯ ಉಪಕರಣಗಳ ಬದಲು ಆಧುನಿಕ ತಂತ್ರಜ್ಞಾನದ ಉಪಕರಣಗಳ ಬಳಸಬೇಕೆಂಬ ಸಲಹೆಯೂ ಬಂದಿದೆ. ಸೇನೆಯ ಭವಿಷ್ಯದ ಅಗತ್ಯಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಆಗಸ್ಟ್ 2017ರಲ್ಲಿ ಶೇಕತ್ದಾರ್ ಸಮಿತಿ ಶಿಫಾರಸಿನಂತೆ ಸೇನೆಯ ಯುದ್ಧ ಸಾಮಥ್ರ್ಯವನ್ನು ಹೆಚ್ಚಿಸಲು ಹಾಗೂ ವೆಚ್ಚಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತಲ್ಲದೆ 57,000 ಸೈನಿಕರಿಗೆ ಯುದ್ಧ ತರಬೇತಿ ನೀಡಲು ನಿರ್ಧರಿಸಲಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News