ಫಿಜಿಯೊ ಥೆರಪಿಯ ಲಾಭಗಳು ಗೊತ್ತೇ....?

Update: 2018-09-10 11:11 GMT

ಫಿಜಿಯೊ ಥೆರಪಿ ಎಂಬ ಶಬ್ದವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಹೆಚ್ಚಿನವರಿಗೆ ಈ ಚಿಕಿತ್ಸಾ ವಿಧಾನದ ಬಗ್ಗೆ ತಿಳಿದಿಲ್ಲ. ಫಿಜಿಯೊ ಥೆರಪಿ ಎನ್ನುವುದು ದೈಹಿಕ ಚಿಕಿತ್ಸಕರು ಗಾಯ, ಕಾಯಿಲೆ, ಅಂಗವಿಕಲತೆಗೆ ಸಂಬಂಧಿಸಿದಂತೆ ರೋಗಿಗಳ ದೈಹಿಕ ಸ್ಥಿತಿಯಲ್ಲಿನ ಏರುಪೇರುಗಳನ್ನು ಪರಿಶೀಲಿಸಿ ಅವರಿಗೆ ನೀಡುವ ಚಿಕಿತ್ಸೆಯಾಗಿದೆ.

ಜೆರಿಯಾಟಿಕ್,ವೆಸ್ಟಿಬ್ಯುಲರ್,ನ್ಯೂರಾಲಾಜಿಕಲ್,ಆರ್ಥೊಪೆಡಿಕ್ ಹೀಗೆ ಶರೀರದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ಫಿಜಿಯೊ ಥೆರಪಿ ಪದ್ಧತಿಗಳಿವೆ. ತಜ್ಞರು ರೋಗಿಗೆ ಪರಿಣಾಮಕಾರಿಯಾಗುವ ವಿಧಾನವನ್ನು ಅನುಸರಿಸುತ್ತಾರೆ.

ದೀರ್ಘಕಾಲೀನ ನೋವು ಅಥವಾ ಗಾಯಕ್ಕೆ ಚಿಕಿತ್ಸೆ ಪಡೆಯಲು ಫಿಜಿಯೊ ಥೆರಪಿ ಅತ್ಯುತ್ತಮ ಆಯ್ಕೆಗಳಲ್ಲೊಂದಾಗಿದೆ. ಇಂತಹ ಪರಿಣಾಮಕಾರಿ ಚಿಕಿತ್ಸೆಯ ಕೆಲವು ಲಾಭಗಳ ಬಗ್ಗೆ ಮಾಹಿತಿಗಳಿಲ್ಲಿವೆ........

► ಶಸ್ತ್ರಚಿಕಿತ್ಸೆಯ ಅಗತ್ಯವನ್ನು ನಿವಾರಿಸುತ್ತದೆ

 ಫಿಜಿಯೊ ಥೆರಪಿಯಿಂದ ನೋವು ಮತ್ತು ಗಾಯ ಗುಣಮುಖವಾಗುತ್ತದೆ ಮತ್ತು ನಿಮ್ಮ ದೈಹಿಕ ಆರೋಗ್ಯವು ಉತ್ತಮಗೊಳ್ಳುತ್ತದೆ ಎಂದಿದ್ದರೆ ಶಸ್ತ್ರಚಿಕಿತ್ಸೆಯು ಅಗತ್ಯವಾಗುವುದಿಲ್ಲ. ಫಿಜಿಯೊ ಥೆರಪಿಸ್ಟ್‌ಗಳು ಗಾಯಗೊಂಡ ಅಂಗಾಂಶಗಳು ಗುಣವಾಗುವಲ್ಲಿ ಮತ್ತು ಶರೀರದ ಚಲನಶೀಲತೆಯನ್ನು ಸುಧಾರಿಸುವಲ್ಲಿ ನೆರವಾಗುವ ಮೂಲಕ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ನಿವಾರಿಸುತ್ತಾರೆ. ನಿಮಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಹಿಂಜರಿಕೆಯಿದ್ದರೆ ಅದಕ್ಕೆ ಮುನ್ನ ಫಿಜಿಯೊ ಥೆರಪಿಯನ್ನು ಪಡೆದರೆ ಶಸ್ತ್ರಚಿಕಿತ್ಸೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಲು ನೆರವಾಗುತ್ತದೆ.

► ಶರೀರದ ಚಲನಶೀಲತೆ ಮತ್ತು ಸಮತೋಲನವನ್ನು ಹೆಚ್ಚಿಸುತ್ತದೆ

ದೀರ್ಘಕಾಲೀನ ನೋವು,ಗಾಯದಿಂದ ಅಥವಾ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಯ ಬಳಿಕ ನಡೆದಾಡುವುದು ರೋಗಿಗಳಿಗೆ ಕಷ್ಟವಾಗುತ್ತದೆ. ಶರೀರದ ಚಲನವಲನಗಳು ನಿರ್ಬಂಧಿಸಲ್ಪಟ್ಟು ಬರವಣಿಗೆ,ಆಹಾರ ಸೇವನೆ,ನಡಿಗೆ ಅಥವಾ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವಂತಹ ಚಟುವಟಿಕೆಗಳು ಕಠಿಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಚಲನಶೀಲತೆಯನ್ನು ಹೆಚ್ಚಿಸುವಲ್ಲಿ ಫಿಜಿಯೊ ಥೆರಪಿಯು ನೆರವಾಗುತ್ತದೆ.

► ನೋವನ್ನು ನಿಭಾಯಿಸುವಲ್ಲಿ ನೆರವಾಗುತ್ತದೆ

ದೀರ್ಘಕಾಲೀನ ನೋವಿಗೆ,ವಿಶೇಷವಾಗಿ ವಾತರೋಗಿಗಳಿಗೆ ಫಿಜಿಯೊ ಥೆರಪಿಯು ಪರಿಣಾಮಕಾರಿಯಾಗಿದೆ. ಈ ಚಿಕಿತ್ಸಾ ಪದ್ಧತಿಯಲ್ಲಿನ ಕೆಲವು ಸರಳ ವ್ಯಾಯಾಮಗಳು ಸಂದುಗಳು ಮತ್ತು ಮೃದು ಅಂಗಾಂಶಗಳ ಸುಲಭ ಚಲನೆಗೆ ನೆರವಾಗುತ್ತವೆ ಹಾಗೂ ಸ್ನಾಯುಗಳು ಮತ್ತು ಸಂದುಗಳ ಕಾರ್ಯನಿರ್ವಹಣೆಯನ್ನು ಸಾಧ್ಯವಾಗಿಸುತ್ತವೆ. ಈ ಚಿಕಿತ್ಸೆಯಿಂದ ನೋವನ್ನು ನಿವಾರಿಸಬಹುದು ಮತ್ತು ಚಿಕಿತ್ಸೆಯನ್ನು ಮುಂದುವರಿಸಿದರೆ ನೋವು ಮರಳದಂತೆ ತಡೆಯಬಹುದು.

► ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಪಾರ್ಶ್ವವಾಯು ಪೀಡಿತರಲ್ಲಿ ಚಲನಶೀಲತೆಯನ್ನು ಭಾಗಶಃ ಕಳೆದುಕೊಂಡಿರುವ ಅಂಗಗಳನ್ನು ಬಲಗೊಳಿಸುವಲ್ಲಿ ಫಿಜಿಯೊ ಥೆರಪಿಯು ನೆರವಾಗುತ್ತದೆ. ಅದು ದೇಹದ ಭಂಗಿಯನ್ನು,ಸಮತೋಲನವನ್ನು ಮತ್ತು ಚಲನಶೀಲತೆಯನ್ನು ಉತ್ತಮಗೊಳಿಸುವ ಮೂಲಕ ರೋಗಿಯು ಸ್ವತಂತ್ರವಾಗಿ ಓಡಾಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

► ಕ್ರೀಡಾಪಟುಗಳು ಗಾಯಗೊಳ್ಳುವುದನ್ನು ತಡೆಯುತ್ತದೆ

 ಫಿಜಿಯೊ ಥೆರಪಿಸ್ಟ್‌ಗಳು ರೋಗಿಯ ಶರೀರದಲ್ಲಿಯ ದುರ್ಬಲ ಭಾಗಗಳನ್ನು ಗುರುತಿಸಿ ಅವುಗಳನ್ನು ಬಲಗೊಳಿಸುವ ಚಿಕಿತ್ಸಾ ಯೋಜನೆಯನ್ನು ರೂಪಿಸುತ್ತಾರೆ. ಸ್ನಾಯುಗಳು ಅಥವಾ ಮೂಳೆಗಳ ದುರ್ಬಲ ಭಾಗಗಳನ್ನು ಗುರುತಿಸಿ,ವ್ಯಕ್ತಿಯು ಗಾಯಗೊಳ್ಳುವ ಸಾಧ್ಯತೆಗಳನ್ನು ಅಂದಾಜಿಸುವ ಮೂಲಕ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ. ಇದು ವ್ಯಕ್ತಿಯು ಮುಂದೆ ಗಾಯಗಳಿಗೆ ಗುರಿಯಾಗುವುದನ್ನು ತಪ್ಪಿಸುತ್ತದೆ. ಕ್ರೀಡಾಪಟುಗಳಿಗೆ ಸಂಭಾವ್ಯ ಅಪಾಯಗಳಿಂದ ದೂರವಿರಲು ಫಿಜಿಯೊ ಥೆರಪಿ ಅತ್ಯಗತ್ಯವಾಗಿದೆ.

► ವೃದ್ಧಾಪ್ಯದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ

ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಅಲ್ಝೀಮರ್ಸ್ ಕಾಯಿಲೆ,ಪಾರ್ಕಿನ್ಸನ್ ಕಾಯಿಲೆ,ಮಿದುಳು ಮತ್ತು ಮಿದುಳು ಬಳ್ಳಿಗೆ ಹಾನಿ,ಪಾರ್ಶ್ವವಾಯುವಿನಂತಹ ನರವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಫಿಜಿಯೊ ಥೆರಪಿಯು ನೆರವಾಗುತ್ತದೆ.

► ಮಧುಮೇಹವನ್ನು ನಿಭಾಯಿಸುತ್ತದೆ

ಫಿಜಿಯೊ ಥೆರಪಿಯು ಕೆಲವೊಂದು ಸರಳ ವ್ಯಾಯಾಮಗಳ ಮೂಲಕ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

► ಮಹಿಳೆಯರ ಅನಾರೋಗ್ಯವನ್ನು ಶಮನಿಸುತ್ತದೆ.

ಗರ್ಭಾವಸ್ಥೆ ಸಂಬಂಧಿತ ಸಮಸ್ಯೆಗಳು ಮತ್ತು ಹೆರಿಗೆ ನಂತರದ ಆರೈಕೆಯ ಅಗತ್ಯವಿರುವವರು ಫಿಜಿಯೊ ಥೆರಪಿಯ ನೆರವು ಪಡೆದುಕೊಳ್ಳಬಹುದಾಗಿದೆ. ಮಲಬದ್ಧತೆ, ಫೈಬ್ರೊಮ್ಯಾಲ್ಗಿಯಾ, ಪುರುಷರಲ್ಲಿ ಶ್ರೋಣಿಯ ನೋವು, ಮಲ ಮತ್ತು ಮೂತ್ರವಿಸರ್ಜನೆಯ ಅಸಂಯಮತೆಯಂತಹ ಸಮಸ್ಯೆಗಳಿಗೂ ಫಿಜಿಯೊ ಥೆರಪಿಸ್ಟ್‌ಗಳು ಚಿಕಿತ್ಸೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News