ಭಾರತದ ಗೆಲುವಿಗೆ ಕಠಿಣ ಸವಾಲು

Update: 2018-09-10 16:27 GMT

ಲಂಡನ್, ಸೆ.10: ಪ್ರವಾಸಿ ಭಾರತ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಜಯಿಸಿ ಒತ್ತಡದಿಂದ ಪಾರಾಗಿರುವ ಇಂಗ್ಲೆಂಡ್ ತಂಡ ಅಂತಿಮ ಟೆಸ್ಟ್ ನಲ್ಲಿ ಗೆಲುವಿಗೆ ಕಠಿಣ ಸವಾಲು ವಿಧಿಸಿದೆ.

ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 112.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 423 ರನ್ ಗಳಿಸಿದ್ದು, ಭಾರತದ ಗೆಲುವಿಗೆ 464 ರನ್‌ಗಳ ಸವಾಲು ವಿಧಿಸಿದೆ.

ಮಾಜಿ ನಾಯಕ ಅಲಿಸ್ಟೈರ್ ಕುಕ್ ಮತ್ತು ನಾಯಕ ಜೋ ರೂಟ್ ಶತಕದ ನೆರವಿನಲ್ಲಿ ಇಂಗ್ಲೆಂಡ್ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದೆ. ಕುಕ್ ಮತ್ತು ರೂಟ್ ಸೊಗಸಾದ ಶತಕ ದಾಖಲಿಸಿ ತಂಡದ ಸ್ಕೋರ್‌ನ್ನು ಏರಿಸಿದರು. ಕುಕ್ 147 ರನ್(286ಎ, 14ಬೌ) ಮತ್ತು ರೂಟ್ 125ರನ್(190 ಎ, 12ಬೌ,1ಸಿ) ಗಳಿಸಿ ಔಟಾದರು. ರೂಟ್ ಮತ್ತು ಕುಕ್ ಮೂರನೇ ವಿಕೆಟ್‌ಗೆ 259 ರನ್‌ಗಳ ಜೊತೆಯಾಟ ನೀಡಿದರು. ತಂಡದ ಸ್ಕೋರ್ 321ಕ್ಕೆ ತಲುಪಿದ್ದಾಗ 94.1ನೇ ಓವರ್‌ನಲ್ಲಿ ಕುಕ್ ಅವರು ಹನುಮ ವಿಹಾರಿ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು.ಮೊದಲ ಟೆಸ್ಟ್ ಆಡುತ್ತಿರುವ ವಿಹಾರಿಗೆ ಅಮೂಲ್ಯವಾದ ವಿಕೆಟ್ ಸಿಕ್ಕಿತು. ಅದೇ ಓವರ್‌ನ ಎರಡನೇ ಎಸೆತದಲ್ಲಿ ನಾಯಕ ರೂಟ್ ಅವರು ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ವಿಹಾರಿ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಪಡೆದರು. ಇವರ ನಿರ್ಗಮನದ ಬಳಿಕ ಜಾನಿ ಬೈರ್‌ಸ್ಟೋವ್ (18) ಶಮಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಟ್ಲರ್ ಖಾತೆ ತೆರೆಯದೆ ಜಡೇಜಗೆ ವಿಕೆಟ್ ಒಪ್ಪಿಸಿದರು. ಸ್ಯಾಮ್ ಕರನ್(21) ವಿಕೆಟ್ ಪಡೆಯುವ ಮೂಲಕ ವಿಹಾರಿ ಮಿಂಚಿದ್ದಾರೆ. ಕರನ್ ಔಟಾದ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ರೂಟ್ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ಆದಿಲ್ ರಶೀದ್ ಔಟಾಗದೆ 20 ರನ್ ಗಳಿಸಿದರು. ಭಾರತದ ಹನುಮ ವಿಹಾರಿ ಮತ್ತು ರವೀಂದ್ರ ಜಡೇಜ ತಲಾ 3 ವಿಕೆಟ್ ಮತ್ತು ಮುಹಮ್ಮದ್ ಶಮಿ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News