ಆರ್.ಆರ್.ನಗರ ಅಭ್ಯರ್ಥಿ ರತ್ನಮ್ಮ ನಾಮಪತ್ರ ತಿರಸ್ಕಾರ ವಿಚಾರ: ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

Update: 2018-09-10 16:49 GMT

ಬೆಂಗಳೂರು, ಸೆ.10: ಕಳೆದ ಸಾರ್ವತ್ರಿಕ ವಿಧಾನಸಭೆಯ ಚುನಾವಣೆಯಲ್ಲಿ ರಾಜರಾಜೇಶ್ವರಿನಗರದ ಪ್ರಜಾ ಪರಿವರ್ತನಾ ಪಾರ್ಟಿಯ ಅಭ್ಯರ್ಥಿಯಾಗಿದ್ದ ರತ್ನಮ್ಮ ಅವರ ನಾಮಪತ್ರವನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯುಕ್ತರು, ಶಾಸಕ ಮುನಿರತ್ನ, ರಿಟರ್ನಿಂಗ್ ಅಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನಾಮಪತ್ರವನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಪೀಣ್ಯ ಮೊದಲನೆಯ ಹಂತದ ನಿವಾಸಿ ರತ್ನಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿಮಳೀಮಠ ಅವರಿದ್ದ ನ್ಯಾಯಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಪಿ.ಎಚ್.ವೀರುಪಾಕ್ಷಯ್ಯ ಅವರು, ಕಳೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಆರ್.ಆರ್.ನಗರದ ಅಭ್ಯರ್ಥಿಯಾಗಿದ್ದ ರತ್ನಮ್ಮ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಯಾವುದೆ ಮಾಹಿತಿಯನ್ನು ನೀಡದೆ ತಿರಸ್ಕರಿಸಿದ್ದಾರೆ. ಹೀಗಾಗಿ, ರತ್ನಮ್ಮ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಅಲ್ಲದೆ, ನಾಮಪತ್ರವನ್ನು ತಿರಸ್ಕರಿಸುವ ಮೊದಲು ಅಭ್ಯರ್ಥಿಗೆ ವಿಷಯ ತಿಳಿಸಬೇಕು. ಹಾಗೂ ನಾಮಪತ್ರವನ್ನು ತಿದ್ದುಪಡಿ ಮಾಡಿ ವಾಪಸ್ ಸಲ್ಲಿಸಲು ಸೂಚಿಸಬೇಕು. ಆದರೆ, ಚುನಾವಣಾ ಅಧಿಕಾರಿಗಳು ಈ ಯಾವ ಕೆಲಸವನ್ನೂ ಮಾಡದೆ ನಾಮಪತ್ರವನ್ನು ತಿರಸ್ಕರಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಆರ್.ಆರ್.ನಗರದ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಪುನಹ ನಡೆಸಲು ನ್ಯಾಯಪೀಠವು ಆದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಅಕ್ಟೋಬರ್ 9ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News