ಶ್ವೇತಾ ಸಂಜೀವ್ ಭಟ್ ಗೆ ಎಹ್ಸಾನ್ ಜಾಫ್ರಿ ಪುತ್ರಿ ನಸ್ರೀನ್ ಬರೆದ ಬಹಿರಂಗ ಪತ್ರ

Update: 2018-09-11 05:40 GMT
ದಿ.ಎಹ್ಸಾನ್ ಜಾಫ್ರಿಯೊಂದಿಗೆ ಪುತ್ರಿ ನಸ್ರೀನ್ ಜಾಫ್ರಿ ಹುಸೇನ್

ಇದು ಗುಜರಾತ್ ಕೋಮುಗಲಭೆಯ ಬಳಿಕ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಯಾವುದೇ ಒತ್ತಡಗಳಿಗೂ ಬಗ್ಗದೆ ಅವರ ನೀತಿಯನ್ನು ವಿರೋಧಿಸಿಕೊಂಡೇ ಬಂದಿರುವ, ಈಗ 22 ವರ್ಷ ಹಳೆ ಪ್ರಕರಣವೊಂದರಲ್ಲಿ ಮತ್ತೆ ಬಂಧಿತರಾಗಿರುವ ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್ ಅವರಿಗೆ ಗುಜರಾತ್ ಕೋಮುಗಲಭೆಯಲ್ಲಿ ಮತಾಂಧರಿಂದ ಬರ್ಬರವಾಗಿ ಕೊಲ್ಲಲ್ಪಟ್ಟ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪುತ್ರಿ ನಸ್ರೀನ್ ಜಾಫ್ರಿ ಹುಸೇನ್ ಅವರು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ಪತ್ರ. 

(ಶ್ವೇತಾ ಸಂಜೀವ್ ಭಟ್, ಸಂಜೀವ್ ಭಟ್)

ಪ್ರೀತಿಯ ಶ್ವೇತಾ ಸಂಜೀವ್ ಭಟ್,

ಈ ದೇಶದಲ್ಲಿ ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುವುದು ಸುದೀ ರ್ಘ ಮತ್ತು ಏಕಾಂಗಿ ಸಮರವಾಗಿದೆ. ತೀಸ್ತಾ ಸೆಟ್ಲವಾಡ್ ಅವರು ಒಮ್ಮೆ ಸಂದರ್ಶನವೊಂದರಲ್ಲಿ ಈ ಮಾತನ್ನು ಹೇಳಿದ್ದರು. ಅವರ ಮಾತಿನ ಆಳವನ್ನರಿಯಲು ನಾನು ಹಲವಾರು ದಿನಗಳ ಕಾಲ ಪ್ರಯತ್ನಿಸುತ್ತಲೇ ಇದ್ದೆ. ನಾನು ಮೊದಲ ದಿನದಿಂದಲೇ ಈ ಒಂಟಿತನವನ್ನು ಅನುಭವಿಸಿದ್ದೆ,ಆದರೆ ಅದನ್ನು ಹೇಗೆ ವ್ಯಕ್ತಪಡಿಸುವುದು ಎನ್ನುವುದು ನನಗೆ ಗೊತ್ತಿರಲಿಲ್ಲ. ಹೀಗಾಗಿ ನಿಮ್ಮ ಪತಿ ಆಯ್ದುಕೊಂಡಿರುವ ಮತ್ತು ನೀವು,ನಿಮ್ಮ ಮಕ್ಕಳು ಮತ್ತು ಕುಟುಂಬದ ಮುಂದಿರುವ ಈ ಮಾರ್ಗ ಎಷ್ಟೊಂದು ಒಂಟಿ,ಕಠಿಣ ಮತ್ತು ಸುದೀರ್ಘವಾಗಿದೆ ಎನ್ನುವುದನ್ನು ನಿಮಗೆ ಗೊತ್ತಿಲ್ಲದೇ  ಇದ್ದಲ್ಲಿ , ನಾನು ನಿಮಗೆ ಹೇಳಲು ಬಯಸುತ್ತೇನೆ.

ನನ್ನ ತಾಯಿ 1960ರ ಸುಮಾರಿಗೆ ತನ್ನ 23ರ ಹರೆಯದಲ್ಲಿ ಅಹ್ಮದಾಬಾದ್‌ಗೆ ಬಂದಿದ್ದರು. 2002ರಲ್ಲಿ ಅಂದಿನ ರಾತ್ರಿ ತನ್ನ 60ನೆಯ ವಯಸ್ಸಿನಲ್ಲಿ ಫೆ.28ರಂದು ಬೆಳಿಗ್ಗೆ ಉಟ್ಟಿದ್ದ ಸೀರೆಯಲ್ಲಿಯೇ ಆಕೆ ತನ್ನ ಮನೆಯನ್ನು ತೊರೆದು ತಾನು ಕಳೆದ 40 ವರ್ಷಗಳಿಂದಲೂ ತಿರುಗುತ್ತಿದ್ದ ಅವೇ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾಗ ಚಮನಪುರದಿಂದ ಗಾಂಧಿನಗರದವರೆಗೆ ಒಂದೇ ಒಂದು ಮನೆಯ ಬಾಗಿಲು ಆಕೆಗಾಗಿ ತೆರೆದಿರಲಿಲ್ಲ. ಮರುದಿನ ಬೆಳಿಗ್ಗೆ ಕುಟುಂಬ ಸ್ನೇಹಿತರೊಬ್ಬರ ಮನೆಯ ಬಾಗಿಲು ಆಕೆಗಾಗಿ ತೆರೆದಿತ್ತು.

ನೀವು ಮನೆ ಎಂದು ಕರೆಯುವ ನಗರ ಮತ್ತು ನೀವು ‘ನನ್ನ ದೇಶವಾಸಿಗಳೇ’ ಎಂದು ಕರೆಯುವ ಜನರು ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನೀವು ಭಾವಿಸಿದ್ದೀರಿ.

ಅಹ್ಮದಾಬಾದ್‌ನಲ್ಲಿ ಗಣ್ಯ ವ್ಯಕ್ತಿಗಳೆಂದು ಕರೆಸಿಕೊಂಡಿದ್ದ,ನನ್ನ ತಂದೆಯ ದೀರ್ಘ ಕಾಲದ ಸ್ನೇಹಿತರು,ನಮ್ಮ ಮನೆಯ ಅಡುಗೆ ಕೋಣೆಯಲ್ಲಿ ಕೂತು ಮಾಂಸ ಮತ್ತು  ಬಿರಿಯಾನಿಯನ್ನು ತಿಂದು ತೇಗಿದವರೂ ನನ್ನ ತಾಯಿಯ ನೆರವಿಗೆ ಬಂದಿರಲಿಲ್ಲ. ನಮ್ಮ ತಂದೆ ಯಾರಿಗಾಗಿ ದುಡಿದಿದ್ದರೋ, ಯಾರ ಜೊತೆ ಈದ್, ದೀಪಾವಳಿ, ಹೋಳಿ ಆಚರಿಸಿದ್ದರೋ  ಆ ಅಹ್ಮದಾಬಾದ್‌ನ ಲಕ್ಷಾಂತರ ಜನರಲ್ಲಿಯೂ ಅನುಕಂಪವಿರಲಿಲ್ಲ. ಮರುದಿನ ನನ್ನ ತಾಯಿ ಗಾಂಧಿನಗರದಲ್ಲಿ ಸಿಕ್ಕಿದ್ದಾರೆ ಹಾಗು ನನ್ನ ತಂದೆ ಬರ್ಬರವಾಗಿ ಕೊಲೆಯಾಗಿದ್ದಾರೆ ಎಂದು ಗೊತ್ತಾದಾಗಲೂ ಇವರು ಯಾರೂ ಮರುಗಲಿಲ್ಲ. 

 ನಿಮ್ಮ ಪತಿ ಇದೇ ರಾಜ್ಯದಲ್ಲಿ ಮತ್ತು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ,ದೇಶಕ್ಕಾಗಿ ಸೇವೆ ಸಲ್ಲಿಸುವ ಕನಸನ್ನು ಹೊತ್ತಿದ್ದಾರೆ ಅವರ ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವಕ್ಕೆ ಇಲ್ಲಿ ಬೆಲೆಯಿದೆ ಮತ್ತು ಜನರು ನಿಮ್ಮ ಹೋರಾಟದಲ್ಲಿ ಕೈ ಜೋಡಿಸುತ್ತಾರೆ ಎಂದು ನೀವು ಭಾವಿಸಿದ್ದೀರಿ.

  ಇದೇ ಘಟನೆ ಕೆನಡಾದಲ್ಲಿ ಸಂಭವಿಸಿದ್ದರೆ ಮತ್ತು ಮಾಜಿ ಸಂಸದನೋರ್ವ ತನ್ನ ಮನೆಯಲ್ಲಿಯೇ ಇತರ 169 ಜನರೊಂದಿಗೆ ಸಜೀವ ದಹನಗೊಂಡು ಕೊಲೆಯಾಗಿದ್ದರೆ ಜಸ್ಟಿನ್ ಟ್ರುಡೊ   ಅವರು ಸಂಸತ್ತನ್ನು ಮುಚ್ಚಿ ಸಂತ್ರಸ್ತರ ನೆರವಿಗೆ ನಿಲ್ಲುತ್ತಿದ್ದರು. ದೊಡ್ಡ ದೊಡ್ಡ ಉದ್ಯಮ ಸಂಸ್ಥೆಗಳು ಬೀದಿ ಪಾಲಾಗಿರುವ ಗುಲ್ಬರ್ಗ್ ಸೊಸೈಟಿಯ ಜನರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದವು.  2002ರಲ್ಲಿ ಮತ್ತು ಈಗಲೂ ಗುಜರಾತಿನ ಮೂವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿದ್ದಾರೆ ಮತ್ತು ದತ್ತಿಕಾರ್ಯದಲ್ಲಿ ತೊಡಗಿದ್ದೇವೆಂಬ ಹೆಮ್ಮೆಯನ್ನು ಹೊಂದಿರುವ ಅವರ ಕುಟುಂಬದ ಮಹಿಳೆಯರೂ ಸಂತ್ರಸ್ತರ ನೆರವಿಗೆ ಧಾವಿಸಿರಲಿಲ್ಲ.

ನೀವು ಸೀರೆಯುಟ್ಟು ಹಣೆಗೆ ಬಿಂದಿಯಿಟ್ಟುಕೊಂಡಿದ್ದೀರಿ ಎಂದ ಮಾತ್ರಕ್ಕೆ ಅವರು ನಿಮ್ಮನ್ನು ಮಾನವ ಜೀವಿ ಎಂದು ಪರಿಗಣಿಸುತ್ತಾರೆ ಮತ್ತು ಓರ್ವ ತಾಯಿಯಾಗಿ ,ಪತ್ನಿಯಾಗಿ ಮತ್ತು ಮಗಳಾಗಿ ನೀವು ಪಡುತ್ತಿರುವ ಬವಣೆಯಲ್ಲಿ ನಿಮ್ಮ ಜೊತೆಗೆ ಕೈಜೋಡಿಸುತ್ತಾರೆಂದು ನೀವು ಭಾವಿಸಿದ್ದೀರಿ.

ನಮ್ಮ ನಗರ, ಗ್ರಾಮಗಳಲ್ಲಿ ಲಕ್ಷಾಂತರ ಮಹಿಳೆಯರು ಬೆಳಗ್ಗೆದ್ದು ದೇವಸ್ಥಾನಕ್ಕೆ ಹೋಗುತ್ತಾರೆ. ಅವರೂ ಆ ದಿನ ತಾವಿರುವ ನಗರದಲ್ಲೇ ಒಂದಿಡೀ ಸಮುದಾಯವೇ ನಿರ್ಗತಿಕವಾಗಿ ಬೀದಿಗೆ ಬಿದ್ದಿದೆ ಎಂದು ತಿರುಗಿ ನೋಡಲಿಲ್ಲ, ಮರುಗಲಿಲ್ಲ. ಅಂದು ಇಡೀ ಮುಸ್ಲಿಂ ಸಮುದಾಯವು ನೆರವಿಗಾಗಿ ಹಂಬಲಿಸುತ್ತ ರಸ್ತೆಗಳಲ್ಲಿತ್ತು. ಹೆಣ್ಣುಮಕ್ಕಳಿಗೆ ತಮ್ಮ ಮಕ್ಕಳ ಸಲುವಾಗಿ ಎಲ್ಲಾದರೂ ವಿಶ್ರಮಿಸಿಕೊಳ್ಳಲು ಜಾಗ ಬೇಕಿತ್ತು,ಆದರೆ ಅದೂ ಅವರಿಗೆ ಸಿಕ್ಕಿರಲಿಲ್ಲ. ಅವರಲ್ಲಿ ಕೆಲವರು ಹೆಣಗಳ ರಾಶಿಯಲ್ಲಿ ತಮ್ಮವರಿಗಾಗಿ ಹುಡುಕಾಡುತ್ತಿದ್ದರು, ಕೊನೆಗೂ ಮುಸ್ಲಿಂ ಪ್ರದೇಶಗಳಲ್ಲಿಯ ಶಾಲೆಗಳೆಲ್ಲ ನಿರಾಶ್ರಿತರ ಶಿಬಿರಗಳಾದಾಗ, ಕೊನೆಗೆ ಉಳಿದುಕೊಳ್ಳಲು  ಕಬರಸ್ತಾನದ ಕೊನೆಯಲ್ಲೊಂದು ಜಾಗ ಸಿಕ್ಕರೆ ಸಾಕು ಎಂದು ಹೆಣಗಾಡುತ್ತಿರುವಾಗ  ಅಲ್ಲಿಯ ಒರಟಾದ ,ಗಟ್ಟಿಯಾದ  ನೆಲವೇ ಅವರಿಗೆ ಆಸರೆಯಾಗಿತ್ತು. ಆ ದಿನವೂ ಗುಜರಾತ್ ನ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ , ಉದ್ಯಮಗಳಲ್ಲಿ  ಕೆಲಸ ಮಾಡುವ ಮಹಿಳೆಯರು ಏನೂ ಆಗಿಯೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವಿದ್ದರು. 

ಈಗ ನಿಮ್ಮ ಪತಿ ಫ್ಯಾಸಿಸ್ಟ್‌ಗಳ ವಿರುದ್ಧ ಹೋರಾಡುತ್ತ ಜೈಲಿನಲ್ಲಿರುವಾಗ ಇದೇ ಜನರು ನಿಮ್ಮ ಪರಿಸ್ಥಿತಿ ಏನಿರಬಹುದು ಎಂದು ಕಳವಳಗೊಂಡಿದ್ದಾರೆ ಎಂದು ನೀವು ಭಾವಿಸಿದ್ದೀರಿ.

ಇತರ ಯಾವುದೇ ಕಾಲದಲ್ಲಿ ಅಥವಾ ಬೇರೆ ದೇಶದಲ್ಲಿ ಕೇವಲ ಐಪಿಎಸ್‌ ಅಧಿಕಾರಿಗಳು ಮಾತ್ರವಲ್ಲ, ರಾಜ್ಯ ಕೇಂದ್ರ ಸರಕಾರಗಳ ಎಲ್ಲ ಸರಕಾರಿ ಅಧಿಕಾರಿಗಳೂ ಮುಷ್ಕರಕ್ಕಿಳಿದು ಸಂಜೀವ್ ಭಟ್ ಅವರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸುತ್ತಿದ್ದರು. ಆದರೆ ಗೆಳತಿ,ನೀವು ಭಾರತದಲ್ಲಿದ್ದೀರಿ. ಇಲ್ಲಿ ನಾವು ನಮ್ಮನ್ನು ಒಡೆಯುವ ದ್ವೇಷದ ಮಾತ್ರೆಗಳನ್ನು ನುಂಗುತ್ತಲೇ ಬೆಳೆಯುತ್ತಿದ್ದೇವೆ. ನಮ್ಮ ಮೇಲೆ ವಿಪತ್ತು ಎರಗುವುದಿದ್ದರೆ ಅದು ನೈಸರ್ಗಿಕ ವಿಕೋಪವಾಗಿರಲಿ,ಧಾರ್ಮಿಕ ಅಥವಾ ರಾಜಕೀಯ ಆಧಾರಿತ ದ್ವೇಷದ ವಿಕೋಪವಾಗಿರದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಇಂತಹ ದುರಂತಗಳ ಬಲಿಪಶುಗಳಿಗೆ ಮಾತ್ರ ಇಂತಹ ರಸ್ತೆ ಎಷ್ಟು ಒಂಟಿಯಾಗಿರುತ್ತದೆ ಎನ್ನುವುದು ಗೊತ್ತಿರುತ್ತದೆ.

ನೀವು ಮತ್ತು ನಿಮ್ಮ ಕಟಿಬದ್ಧ ಪತಿಗೆ ಎಲ್ಲ ಬೆಂಬಲ, ಪ್ರಾರ್ಥನೆಗಳ  ಜೊತೆ 

ನಿಮ್ಮ ವಿಶ್ವಾಸಿ 

ನಸ್ರೀನ್ ಜಾಫ್ರಿ ಹುಸೇನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News