ಶೂಟಿಂಗ್ ವಿಶ್ವಕಪ್: ಬೆಳ್ಳಿ, ಕಂಚು ಜಯಿಸಿದ ಭಾರತದ ಜೂನಿಯರ್ ಶೂಟರ್‌ಗಳು

Update: 2018-09-11 09:14 GMT

ಚಾಂಗ್ವಾನ್(ದ.ಕೊರಿಯಾ), ಸೆ.11: ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜೂನಿಯರ್ ಪುರುಷರ ಸ್ಕೀಟ್ ತಂಡ ಬೆಳ್ಳಿ ಪದಕವನ್ನು ಜಯಿಸಿದೆ. ಇದೇ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಗುರ್ನಿಹಾಲ್ ಸಿಂಗ್ ಗಾರ್ಚಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ತ್ರಿವಳಿ ಶೂಟರ್‌ಗಳಾದ ಗುರ್ನಿಹಾಲ್(119), ಅನಂತ್‌ಜೀತ್ ಸಿಂಗ್ ನರುಕಾ(117) ಹಾಗೂ ಆಯುಷ್ ರುದ್ರರಾಜು(119)ಜೂನಿಯರ್ ಪುರುಷರ ಸ್ಕೀಟ್ ತಂಡ ಸ್ಪರ್ಧೆಯ ಫೈನಲ್‌ನಲ್ಲಿ ಒಟ್ಟು 355 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಆರು ಶೂಟರ್‌ಗಳಿರುವ ಫೈನಲ್‌ಗೆ ಲಗ್ಗೆ ಇಟ್ಟಿರುವ 19ರ ಹರೆಯದ ಗುರ್ನಿಹಾಲ್ ಒಟ್ಟು 46 ಅಂಕ ಗಳಿಸಿ ಕಂಚು ಜಯಿಸಿದರು. ಈ ಮೂಲಕ ಅಂತರ್‌ರಾಷ್ಟ್ರೀಯ ವೃತ್ತಿಜೀವನದಲ್ಲಿ ದೊಡ್ಡ ಸಾಧನೆ ಮಾಡಿದರು.

ಇಟಲಿಯ ಎಲಿಯಾ 55 ಅಂಕ ಗಳಿಸಿ ಚಿನ್ನ ಜಯಿಸಿದರೆ, ಅಮೆರಿಕದ ನಿಕ್ ಮೊಸ್ಚೆಟ್ಟಿ(54) ಬೆಳ್ಳಿ ಪದಕ ಜಯಿಸಿದ್ದಾರೆ.

ಏಳು ಚಿನ್ನ, 8 ಬೆಳ್ಳಿ ಹಾಗೂ 7 ಕಂಚು ಸಹಿತ ಒಟ್ಟು 22 ಪದಕಗಳನ್ನು ಜಯಿಸಿರುವ ಭಾರತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಸ್ಪರ್ಧೆಯ 10ನೇ ದಿನವಾದ ಮಂಗಳವಾರ ಹಿರಿಯ ಶೂಟರ್‌ಗಳು ಕಳಪೆ ಪ್ರದರ್ಶನ ಮುಂದುವರಿಸಿದರು. ರಶ್ಮಿ, ಮಹೇಶ್ವರಿ ಹಾಗೂ ಗನೆಮತ್ ಅವರನ್ನೊಳಗೊಂಡ ಭಾರತದ ಮಹಿಳಾ ಸ್ಕೀಟ್ ತಂಡ ಒಟ್ಟು 319 ಅಂಕ ಗಳಿಸಿ 9ನೇ ಸ್ಥಾನ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News