ಗಂಟಲು ಕ್ಯಾನ್ಸರ್‌ನ ಈ ಲಕ್ಷಣಗಳನ್ನೆಂದಿಗೂ ಕಡೆಗಣಿಸುವಂತಿಲ್ಲ

Update: 2018-09-11 11:39 GMT

ಕ್ಯಾನ್ಸರ್ ಮಾನವಕುಲವನ್ನು ಕಾಡುತ್ತಿರುವ ಹೆಮ್ಮಾರಿಯಾಗಿದೆ. ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳು ಕ್ಯಾನ್ಸರ್‌ನಿಂದಲೇ ಸಂಭವಿಸುತ್ತವೆ.ಮೂಳೆ,ರಕ್ತ,ಮಿದುಳು,ಮೂತ್ರಪಿಂಡ,ಶ್ವಾಸಕೋಶ,ಬಾಯಿ,ಕಣ್ಣು,ಗಂಟಲು ಸೇರಿದಂತೆ ಮಾನವ ಶರೀರದ ಯಾವುದೇ ಅಂಗವೂ ಕ್ಯಾನ್ಸರ್‌ಗೆ ಗುರಿಯಾಗಬಹುದು.

 ಗಂಟಲು ಕ್ಯಾನ್ಸರ್‌ನ್ನು ಸ್ವರತಂತು ಕ್ಯಾನ್ಸರ್,ಧ್ವನಿಪೆಟ್ಟಿಗೆಯ ಕ್ಯಾನ್ಸರ್,ಕಂಠದ್ವಾರ ಅಥವಾ ಕಂಠನಾಳ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಗಂಟಲಿನ ಈ ಭಾಗಗಳಲ್ಲಿ ಜೀವಕೋಶಗಳು ವಿಭಜನೆಗೊಂಡು ಅವುಗಳ ಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚಿದಾಗ ಕ್ಯಾನ್ಸರ್ ಉಂಟಾಗುತ್ತದೆ.

ಕ್ಯಾನ್ಸರ್ ರೋಗವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪ್ರಾರಂಭಿಸಿದರೆ ಗುಣಮುಖವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ ಗಂಟಲು ಕ್ಯಾನ್ಸರ್‌ನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಗಂಟಲು ಕ್ಯಾನ್ಸರ್‌ನ ಹೆಚ್ಚಿನ ಲಕ್ಷಣಗಳು ಸಾಮಾನ್ಯ ಶೀತ ಮತ್ತು ಅಲರ್ಜಿಯ ಲಕ್ಷಣಗಳನ್ನೇ ಹೋಲುತ್ತವೆ. ಗುಣವಾಗದ ಗಂಟು ಅಥವಾ ಹುಣ್ಣು ಮತ್ತು ವಾಸಿಯಾಗದ ಗಂಟಲು ನೋವು ಅಥವಾ ಕೆಮ್ಮು ಇವು ಗಂಟಲು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ.

 ಗಂಟಲು ಕ್ಯಾನ್ಸರ್‌ನ ಲಕ್ಷಣಗಳು ಮುಖ್ಯವಾಗಿ ಗಂಟು ಅಥವಾ ಗಡ್ಡೆಯ ಗಾತ್ರ ಮತ್ತು ಅದರ ಸ್ಥಾನವನ್ನು ಅವಲಂಬಿಸಿರುತ್ತವೆ.

 ಧ್ವನಿಯಲ್ಲಿ ಕರ್ಕಶತೆ ಅಥವಾ ಇತರ ಬದಲಾವಣೆಗಳು,ತುಟಿ,ಬಾಯಿ ಅಥವಾ ಗಂಟಲಿನಲ್ಲಿ ಕಾಣಿಸಿಕೊಂಡು ವಾರಗಟ್ಟಲೆ ಗುಣವಾಗದ ಹುಣ್ಣು,ಆಹಾರ ನುಂಗುವಾಗ ನೋವು,ಅಗಿಯುವಾಗ ಕಷ್ಟ ಅಥವಾ ಗಂಟಲಿನಲ್ಲಿ ಗಡ್ಡೆಯಿರುವ ಅನುಭವ,ಕೆಮ್ಮು ಅಥವಾ ಆ್ಯಂಟಿಬಯಾಟಿಕ್ಸ್‌ಗಳ ಸೇವನೆಯ ಬಳಿಕವೂ ಉಳಿದುಕೊಳ್ಳುವ ಗಂಟಲು ಕೆರತ ಅಥವಾ ನೋವು,ವಸಡುಗಳು,ನಾಲಿಗೆ ಅಥವಾ ಬಾಯಿಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಪು ಕಲೆಗಳು,ಬಾಯಿಯಲ್ಲಿ ಮರಗಟ್ಟುವಿಕೆ ಅಥವಾ ರಕ್ತಸ್ರಾವ,ಊದಿಕೊಂಡ ದುಗ್ಧರಸ ಗ್ರಂಥಿಗಳು ಅಥವಾ ಕುತ್ತಿಗೆಯಲ್ಲಿ ಊತ,ಕುತ್ತಿಗೆ ನೋವು ಮತ್ತು ಆಗಾಗ್ಗೆ ಕಿವಿನೋವು, ದವಡೆಗಳಲ್ಲಿ ನೋವು ಅಥವಾ ಊತ,ಕೆಟ್ಟ ಉಸಿರು,ದೇಹತೂಕದಲ್ಲಿ ಗಣನೀಯ ಇಳಿಕೆ, ಕೆಮ್ಮಿದಾಗ ರಕ್ತ ಬರುವುದು,ಏದುಸಿರು ಮತ್ತು ಶಿಳ್ಳೆಯಂತಹ ಶಬ್ದ ಇವೆಲ್ಲ ಗಂಟಲು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳಾಗಿವೆ.

ಮುಖದ ಮಾಂಸಖಂಡಗಳಲ್ಲಿ ಮರಗಟ್ಟುವಿಕೆ ಅಥವಾ ನಿಷ್ಕ್ರಿಯತೆ,ಮುಖದಲ್ಲಿ ನಿರಂತರ ನೋವು,ನಿರಂತರವಾದ ಕುತ್ತಿಗೆ ನೋವು ಇವೂ ಗಂಟಲು ಕ್ಯಾನ್ಸರ್‌ನ ಸಂಭಾವ್ಯ ಲಕ್ಷಣಗಳಾಗಿವೆ.

ಅಂದ ಹಾಗೆ ಈ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡು ಬಂದರೆ ಆತ ಗಂಟಲು ಕ್ಯಾನ್ಸರ್‌ನಿಂದಲೇ ಬಳಲುತ್ತಿದ್ದಾನೆ ಎಂಬ ನಿರ್ಧಾರಕ್ಕೆ ಬರಬೇಕಾಗಿಲ್ಲ. ಆದರೆ ಈ ಲಕ್ಷಣಗಳು ಎರಡು ವಾರಗಳಿಗೂ ಅಧಿಕ ಸಮಯದಿಂದ ಕಾಣಿಸಿಕೊಂಡಿದ್ದರೆ ನಿಮ್ಮ ವೈದ್ಯರನ್ನು ಅಥವಾ ಯಾವುದೇ ತಜ್ಞವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News